Confident Group CJ Roy Death ಐಟಿ ದಾಳಿಯ ಸಂದರ್ಭದಲ್ಲಿ ಉದ್ಯಮಿ ಸಿ.ಜೆ. ರಾಯ್ ಆತ್ಮ೧ಹತ್ಯೆ ಮಾಡಿಕೊಂಡ ಘಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಐದು ನಿಮಿಷ ಸಮಯ ಕೇಳಿ ರಾಯ್ ಪ್ರಾಣ ಬಿಟ್ಟಿದ್ದು, ಅಧಿಕಾರಿಗಳ ಕಿರುಕುಳವನ್ನು ಡಿಕೆಶಿ ಖಂಡಿಸಿದ್ದಾರೆ.
ಕನಕಪುರ (ಜ.30): ಐಟಿ ದಾಳಿಯ ಸಂದರ್ಭದಲ್ಲಿ ಉದ್ಯಮಿ ಸಿ.ಜೆ. ರಾಯ್(CJ Roy) ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಕುರಿತು ಕನಕಪುರದಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 'ರಾಯ್ ಒಬ್ಬ ಒಳ್ಳೆಯ ಉದ್ಯಮಿಯಾಗಿದ್ದರು, ಇಂತಹ ಘಟನೆ ನಡೆಯಬಾರದಿತ್ತು' ಎಂದು ಅವರು ವಿಷಾದಿಸಿದ್ದಾರೆ.
ಐದು ನಿಮಿಷ ಸಮಯ ಕೇಳಿ ಆತ್ಮ೧ಹತ್ಯೆ
ಐಟಿ ಅಧಿಕಾರಿಗಳ ಪರಿಶೀಲನೆ ವೇಳೆ ನಡೆದ ಘಟನೆ ಬಗ್ಗೆ ತಿಳಿಸಿದ ಡಿಕೆಶಿ, 'ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾಗ, ಸಿ.ಜೆ. ರಾಯ್ ಅವರು ಐದು ನಿಮಿಷ ಸಮಯ ಕೊಡಿ ಎಂದು ಕೇಳಿ ಕೋಣೆಯೊಳಗೆ ಹೋಗಿದ್ದಾರೆ. ಆದರೆ ಅಲ್ಲಿಯೇ ಅವರು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ' ಎಂದು ಮಾಹಿತಿ ನೀಡಿದರು. ಈ ದಾಳಿ ನಡೆಸಿದ ತಂಡ ಕೇರಳದಿಂದ ಬಂದಿತ್ತು ಎಂಬ ಸುಳಿವು ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ
ಈ ಪ್ರಕರಣದ ಬಗ್ಗೆ ದೆಹಲಿಯಿಂದಲೂ ವರದಿ ಕೇಳಲಾಗಿದೆ. ನಮ್ಮ ರಾಜ್ಯದಲ್ಲಿ ಈ ಘಟನೆ ನಡೆದಿರುವುದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದೆ ಇಡುತ್ತೇವೆ ಎಂದು ತನಿಖೆಯ ಭರವಸೆ ನೀಡಿದರು.
ಐಟಿ ಕಿರುಕುಳಕ್ಕೆ ಡಿಕೆಶಿ ಗರಂ
ಐಟಿ ಇಲಾಖೆಯ ಬಗ್ಗೆ ನಾನು ಹೆಚ್ಚು ಮಾತನಾಡಿದರೆ ಅದು ರಾಜಕೀಯವಾಗಿ ಆಗುತ್ತೆ. ಆದರೆ, ಅಧಿಕಾರಿಗಳ ಕಿರುಕುಳವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ತನಿಖೆಯ ಹೆಸರಿನಲ್ಲಿ ಇಂತಹ ಒತ್ತಡ ಹೇರುವುದು ಸರಿಯಲ್ಲ ಎಂದು ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ವಿರುದ್ಧ ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು.


