Asianet Suvarna News Asianet Suvarna News

ಪೇಟಿಎಂ, ರೇಝರ್‌ಪೇ, ಕ್ಯಾ‍ಶ್‌ಫ್ರೀಗೆ ಇಡಿ ಶಾಕ್; ಬೆಂಗಳೂರು ಕಚೇರಿಗಳ ಮೇಲೆ ದಾಳಿ

*ಅನಧಿಕೃತ ಸಾಲ ಒದಗಿಸುವ ಅಪ್ಲಿಕೇಷನ್ ಗಳಿಗೆ ವಹಿವಾಟುಗಳಿಗೆ ಅವಕಾಶ ನೀಡಿದ ಆರೋಪ
*ಬೆಂಗಳೂರಿನಲ್ಲಿ ಆರು ಕಡೆ ದಾಳಿ
*ಚೀನಾ ವ್ಯಕ್ತಿಗಳ ನಿಯಂತ್ರಿತ ಸಂಸ್ಥೆಗಳಿಂದ ಅನಧಿಕೃತ ವ್ಯವಹಾರದ ಕುರಿತು ತನಿಖೆ ನಡೆಸುತ್ತಿರುವ ಇಡಿ

Chinese loan apps case ED raids Paytm Razorpay  Cashfree in Chinese loan app case
Author
First Published Sep 3, 2022, 6:47 PM IST

ಬೆಂಗಳೂರು (ಸೆ.3): ಆನ್‌ಲೈನ್ ಪೇಮೆಂಟ್ ಗೇಟ್‌ವೇಗಳಾದ ಪೇಟಿಎಂ, ರೇಝರ್‌ಪೇ ಮತ್ತು ಕ್ಯಾ‍ಶ್‌ಫ್ರೀಗಳ ಬೆಂಗಳೂರು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದಾಳಿ ನಡೆಸಿದೆ. ಚೀನಾ ಮೂಲದ ವ್ಯಕ್ತಿಗಳ ಮಾಲೀಕತ್ವದ ಕಂಪನಿಗಳಿಂದ ನಿಯಂತ್ರಿಸಲ್ಪಡುವ ಅನಧಿಕೃತ ಸಾಲ ಒದಗಿಸುವ ಅಪ್ಲಿಕೇಷನ್ ಗಳಿಗೆ ವಹಿವಾಟುಗಳಿಗೆ ಅವಕಾಶ ನೀಡಿದ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಆರು ಆವರಣಗಳಲ್ಲಿ ಇಡಿ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ವ್ಯಾಪಾರಿ ಐಡಿ ಹಾಗೂ ಚೀನಾ ವ್ಯಕ್ತಿಗಳ ನಿಯಂತ್ರಿತ ಸಂಸ್ಥೆಗಳ ಬ್ಯಾಂಕ್ ಖಾತೆಗಳಲ್ಲಿನ  17 ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಂಡಿರೋದಾಗಿ ಇಡಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ), 2002ರ ಅಡಿಯಲ್ಲಿನ ಅವಕಾಶ ಬಳಸಿಕೊಂಡು ಈ ದಾಳಿ ನಡೆಸಲಾಗಿದೆ. ಚೀನಾ ವ್ಯಕ್ತಿಗಳ ನಿಯಂತ್ರಿತ ಸಂಸ್ಥೆಗಳು ಪೇಮೆಂಟ್ ಗೇಟ್ ವೇಗಳು ಅಥವಾ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವ ಭಾರತದ ವ್ಯಾಪಾರಿಗಳ ನಕಲಿ ಐಡಿಗಳನ್ನು ಬಳಸಿಕೊಂಡು ಸಂಶಯಸ್ಪಾದ ಅಥವಾ ಅನಧಿಕೃತ ವ್ಯವಹಾರ ನಡೆಸುತ್ತಿರೋದು ಕಂಡುಬಂದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.  

ಚೀನಾ ವ್ಯಕ್ತಿಗಳ ನಿಯಂತ್ರಿತ ಈ ಸಂಸ್ಥೆಗಳು ಭಾರತದ ನಾಗರಿಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ಈ ಅನಧಿಕೃತ ಸಂಸ್ಥೆಗಳ ಡಮ್ಮಿ ನಿರ್ದೇಶಕರನ್ನಾಗಿ ನೇಮಿಸಿ ಜನರಿಗೆ ವಂಚಿಸುತ್ತಿದ್ದರು ಎಂದು ಕೂಡ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಸಂಸ್ಥೆಗಳಿಂದ ಮೋಸ ಹೋಗಿ ಕಿರುಕುಳಕ್ಕೊಳಗಾದ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 18ಕ್ಕೂ ಹೆಚ್ಚು ಎಫ್ ಐಆರ್ ಗಳು ದಾಖಲಾಗಿದ್ದು, ಅವುಗಳನ್ನು ಆಧರಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. 

ಭಾರತದ ಪ್ರಗತಿಯ ವೇಗ ಹೆಚ್ಚಿಸಿದ ಹೆದ್ದಾರಿ ವಿಸ್ತರಣೆ,ಅದು ಹೇಗೆ? ಇಲ್ಲಿದೆ ಮಾಹಿತಿ

ಆರ್ ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುವ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು  (NBFCs) ಹಾಗೂ ಅವುಗಳ ಫಿನ್ ಟೆಕ್ ಪಾಲುದಾರರು ಅಕ್ರಮವಾಗಿ ಸಾಲ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಇಡಿ ತನಿಖೆ ನಡೆಸುತ್ತಿದೆ. ತನಿಖೆ ಪ್ರಾರಂಭಗೊಂಡ ಬಳಿಕ ಇಂಥ ಅನೇಕ ಕಂಪನಿಗಳು ಮುಚ್ಚಿದ್ದು, ಇಲ್ಲಿನ ಹಣವನ್ನು ಫಿನ್ ಟೆಕ್ ಕಂಪನಿಗಳ ಮೂಲಕ ಕ್ರಿಪ್ಟೋಕರೆನ್ಸಿ ಆಸ್ತಿಗಳನ್ನು ಖರೀದಿಸಲು ಬಳಸಿದ್ದು, ಆ ಬಳಿಕ ಅದನ್ನು ವಿದೇಶಕ್ಕೆ ವರ್ಗಾಯಿಸಿವೆ ಎಂದು ಕೂಡ ಇಡಿ ಆರೋಪಿಸಿದೆ. ಇತ್ತೀಚೆಗಷ್ಟೇ ಇಡಿ ಪ್ರಸಿದ್ಧ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ವಜೀರೆಕ್ಸ್ ( WazirX) ಹಾಗೂ ಫ್ರೋಝ್ ಕಚೇರಿಗಳಲ್ಲಿ ಶೋಧ ಕಾರ್ಯ ಕೈಗೊಂಡಿತ್ತು. ಈ ಸಮಯದಲ್ಲಿ ಇವುಗಳ ಖಾತೆಯಲ್ಲಿದ್ದ 64 ಕೋಟಿ ರೂ.ಗಳನ್ನು ಪತ್ತೆ ಹಚ್ಚಿತ್ತು. ಇಂಥ ಎನ್ ಬಿಎಫ್ ಸಿಗಳು ಟೆಲಿ ಕಾಲರ್ ಗಳನ್ನು ನೇಮಿಸಿಕೊಂಡು ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಜೊತೆಗೆ ಸಾಲ ಪಡೆದವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಅಧಿಕ ಬಡ್ಡಿದರವನ್ನು ವಿಧಿಸುತ್ತಿದ್ದರು ಎಂದು ಇಡಿ ತಿಳಿಸಿದೆ.

ಖಾದ್ಯ ತೈಲದ ಮೇಲೆ ಆಮದು ಸುಂಕ ರಿಯಾಯಿತಿ, ಮತ್ತೆ 6 ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ!

ಆ ಬಳಿಕ ಇಡಿ ಆನ್ ಲೈನ್ ಪೇಮೆಂಟ್ ಗೇಟ್ ವೇಗಳಾದ ಪೇಟಿಎಂ (PayTM), ರೇಝರ್‌ಪೇ (Razorpay) ಮತ್ತು ಕ್ಯಾ‍ಶ್‌ಫ್ರೀಗಳ (Cashfree) ಮೇಲೆ ಕಣ್ಣಿಟ್ಟಿತ್ತು. ಇವುಗಳ ಅನುಮಾನಾಸ್ಪದ ವರದಿ ನೀಡಿದ ವರ್ಗಾವಣೆಗಳು ಬೆಟ್ಟಿಂಗ್ ದಂಧೆಗಳು ಬೆಳೆಯಲು ಕಾರಣವಾಗಿದೆ ಎಂದು ಇಡಿ ಆರೋಪಿಸಿದೆ. ಅಲ್ಲದೆ, ಈ ಗೇಟ್ ವೇಗಳ ಮೂಲಕ ಹವಾಲಾ ಹಣ ವರ್ಗಾವಣೆ ನಡೆದಿರುವ ಸಾಧ್ಯತೆಯೂ ಇದೆ ಎಂಬ ಅನುಮಾನ ವ್ಯಕ್ತಪಡಿಸಿತ್ತು. ಇನ್ನು ಪೇಟಿಎಂನಲ್ಲಿ ಚೀನಾದ ಕಂಪನಿ ಅಲಿಬಾಬಾದ ಹೂಡಿಕೆ ಕೂಡ ಇದೆ. ಚೀನಾದ ಕೆಲವು ವ್ಯಕ್ತಿಗಳು ಭಾರತದಲ್ಲಿ ಅನೇಕ ಕಂಪನಿಗಳನ್ನು ಭಾರತದ ಲೆಕ್ಕಪರಿಶೋಧಕರು ಹಾಗೂ ಭಾರತೀಯ ನಿರ್ದೇಶಕರ ನೆರವಿನಿಂದ ನಡೆಸುತ್ತಿದ್ದಾರೆ ಎಂದು ಕೂಡ ಇಡಿ ಹೇಳಿದೆ. 

Follow Us:
Download App:
  • android
  • ios