Asianet Suvarna News Asianet Suvarna News

ಭಾರತದ ಪ್ರಗತಿಯ ವೇಗ ಹೆಚ್ಚಿಸಿದ ಹೆದ್ದಾರಿ ವಿಸ್ತರಣೆ , ಅದು ಹೇಗೆ? ಇಲ್ಲಿದೆ ಮಾಹಿತಿ

ದೇಶದ ಅಭಿವೃದ್ಧಿಗೂ ಅಲ್ಲಿನ ರಸ್ತೆಗಳಿಗೂ ನೇರ ಸಂಬಂಧವಿದೆ. ವ್ಯವಸ್ಥಿತ ರಸ್ತೆ ಸಂಪರ್ಕ ವ್ಯವಸ್ಥೆ ಒಂದು ರಾಷ್ಟ್ರದ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಬಲ್ಲದು. ಭಾರತದ ಪ್ರಗತಿಯ ವೇಗಕ್ಕೆ ಕೂಡ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇಗಳ ಬಲಿಷ್ಠ ಜಾಲ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ರಸ್ತೆಗಳು ಇನ್ನಷ್ಟು ಅಭಿವೃದ್ಧಿ ಹೊಂದುವ ನಿರೀಕ್ಷೆಯೂ ಇದೆ. 

Indian growth story accelerated by highway expansion
Author
First Published Sep 3, 2022, 5:05 PM IST

ನವದೆಹಲಿ (ಸೆ.3): ಯಾವುದೇ ಒಂದು ರಾಷ್ಟ್ರ ಪ್ರಗತಿಯ ಪಥದಲ್ಲಿ ಸಾಗಬೇಕಾದ್ರೆ ಅಲ್ಲಿನ ರಸ್ತೆ ಸಂಪರ್ಕ ಕೂಡ ಉತ್ತಮವಾಗಿರೋದು ಅಗತ್ಯ. ಪ್ರಸ್ತುತ ಭಾರತದ ರಸ್ತೆ ಸಂಪರ್ಕ ವ್ಯವಸ್ಥೆ ಸುಧಾರಣೆಗೊಳ್ಳುತ್ತಿದ್ದು,ವಿಶ್ವ ದರ್ಜೆಯ ಮಾನದಂಡಗಳನ್ನು ಹೊಂದಿರುವ ಹೆದ್ದಾರಿಗಳು ಕೂಡ ನಿರ್ಮಾಣಗೊಂಡಿವೆ. ಜನರ ಸಂಪರ್ಕಕ್ಕೆ, ಸರಕುಗಳು ಹಾಗೂ ಇತರ ಕಚ್ಚಾ ವಸ್ತುಗಳ ಸಾಗಣೆಯಲ್ಲಿ ಹೆದ್ದಾರಿಗಳು ಮಹತ್ವದ ಪಾತ್ರ ವಹಿಸುತ್ತವೆ. ದೇಶಾದ್ಯಂತ ರಸ್ತೆಗಳು, ಹೆದ್ದಾರಿಗಳು ಹಾಗೂ ಎಕ್ಸ್ ಪ್ರೆಸ್ ವೇಗಳ ಬಲಿಷ್ಠ ಜಾಲವನ್ನು ನಿರ್ಮಾಣ ಮಾಡುವಲ್ಲಿ ಕೇಂದ್ರ ಸರ್ಕಾರದ 'ಭಾರತ್ ಮಾಲಾ' ಯೋಜನೆ ಮಹತ್ವದ ಪಾತ್ರ ವಹಿಸಿದೆ. 2025ರೊಳಗೆ ಕನಿಷ್ಠ 26 ಹಸಿರು ಎಕ್ಸ್ ಪ್ರೆಸ್ ವೇಗಳನ್ನು ನಿರ್ಮಿಸಲು ಭಾರತ ಯೋಜನೆ ರೂಪಿಸುತ್ತಿದೆ. ಭಾರತದಲ್ಲಿ ಅಂದಾಜು ಶೇ.60ರಷ್ಟು ಸರಕು ಸಾಗಣೆ ರಸ್ತೆ ಹಾಗೂ ಹೆದ್ದಾರಿ ವ್ಯವಸ್ಥೆಯನ್ನೇ ಅವಲಂಬಿಸಿದೆ. ಹೆದ್ದಾರಿಗಳು ಹಾಗೂ ಎಕ್ಸ್ ಪ್ರೆಸ್ ವೇಗಳ ಜಾಲವನ್ನು ವಿಸ್ತರಣೆ ಮಾಡುವ ಮೂಲಕ ಸಂಚಾರವನ್ನು ಸುಗಮಗೊಳಿಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಬದಲಾವಣೆಗೆ ಕಾರಣವಾಗುವ ನಿರೀಕ್ಷೆಯಿದೆ. ಇದರಿಂದ ಸಾಗಣೆ ವೆಚ್ಚ ಪ್ರಸ್ತುತವಿರುವ ಜಿಡಿಪಿಯ ಶೇ.16-18ರಿಂದ ಶೇ. 10ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. 

ಸಾಗಣೆ ವೆಚ್ಚವನ್ನು (Logistic cost) ಶೇ.10-12ರ ತನಕ ಇಳಿಕೆ ಮಾಡಲು ಸಾಧ್ಯವಿದ್ದು, ಈ ಮಾರ್ಜಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿಸಲಿದೆ. ಅಲ್ಲದೆ, ರಫ್ತನ್ನು (Export) ಕೂಡ ಇದು ಉತ್ತೇಜಿಸಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು. ಮುಂದಿನ ದಿನಗಳಲ್ಲಿ ಭಾರತವು (India) ವೇಗದ ಪ್ರಗತಿಗೆ ಸಾಕ್ಷಿಯಾಗಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್  (Bank of America Securities) ಭಾರತದ ವರದಿಯು ತಿಳಿಸಿದೆ. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ (National Highways) ಒಟ್ಟು ಉದ್ದ 1,12,000 ಮೈಲು ತಲುಪುವ ನಿರೀಕ್ಷೆಯಿದೆ. 

2025ಕ್ಕೆ ಅಂತ್ಯವಾಗುವ ದಶಕದಲ್ಲಿ ಭಾರತದಲ್ಲಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿರುತ್ತವೆ. ಇವುಗಳ ಪ್ರಮಾಣ 1950 ಹಾಗೂ 2015 ನಡುವೆ ನಿರ್ಮಾಣವಾದ ಹೆದ್ದಾರಿಗಳಿಗಿಂತ ಹೆಚ್ಚಿರುತ್ತವೆ ಎಂದು ಕೂಡ ಈ ವರದಿ ತಿಳಿಸಿದೆ.ಈಗಿನ ಅಂದಾಜಿನ ಪ್ರಕಾರ 2025ರೊಳಗೆ ಹೆದ್ದಾರಿ ನಿರ್ಮಾಣ ಕೈಗಾರಿಕೆ ಭಾರೀ ಪ್ರಗತಿ ದಾಖಲಿಸುವ ನಿರೀಕ್ಷೆಯಿದ್ದು, ಶೇ.133ರಷ್ಟು ಬೆಳವಣಿಗೆ ದಾಖಲಿಸುವ ಅಂದಾಜಿದೆ. ಇದು ಇತ್ತೀಚಿನ ದಿನಗಳಲ್ಲಿ ಜಗತ್ತಿನ ಇತರ ಎಲ್ಲ ದೇಶಗಳಿಗಿಂತ ಅಧಿಕ ಮಟ್ಟದ ಪ್ರಗತಿಯಾಗಿದೆ. ಭಾರತವು ದಿನಕ್ಕೆ 60 ಕಿ.ಮೀ. ನಿರ್ಮಾಣದ ಗುರಿ ತಲುಪುವ ನಿರೀಕ್ಷೆ ಹೊಂದಿದೆ. ಅಲ್ಲದೆ, ಈಗಾಗಲೇ ದಿನಕ್ಕೆ 30ಕಿ.ಮೀ. ರಸ್ತೆ ನಿರ್ಮಾಣದ ದಾಖಲೆ ನಿರ್ಮಿಸಿದೆ ಕೂಡ. 

ಖಾದ್ಯ ತೈಲದ ಮೇಲೆ ಆಮದು ಸುಂಕ ರಿಯಾಯಿತಿ, ಮತ್ತೆ 6 ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ!

'ಸರ್ಕಾರವು 2ಲಕ್ಷ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 2025ರೊಳಗೆ ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದೆ. ಇದೊಂದು ದೊಡ್ಡ ಸಂಗತಿಯಾಗಿದೆ' ಎಂದು ಗಡ್ಕರಿ ಹೇಳಿದ್ದಾರೆ. ಸರ್ಕಾರ ಬರೀ ರಸ್ತೆಗಳನ್ನು ನಿರ್ಮಿಸೋದಕ್ಕಷ್ಟೇ ತನ್ನ ಗುರಿಯನ್ನು ಸೀಮಿತಗೊಳಿಸದೆ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುವ ಉದ್ದೇಶವನ್ನು ಕೂಡ ಹೊಂದಿದೆ. 

World Economy: ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

2000ರಲ್ಲಿ ಪ್ರಾರಂಭವಾದ ಪ್ರಧಾನಮಂತ್ರಿ ಗ್ರಾಮೀಣ್ ಸಡಕ್ ಯೋಜನೆ (ಪ್ರಧಾನ ಮಂತ್ರಿಗಳ ಗ್ರಾಮ ರಸ್ತೆ ಯೋಜನೆ) ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಅಲ್ಲದೆ, ಈ ಯೋಜನೆ ಒಟ್ಟು 780,000 ಕಿ.ಮೀ. ಉದ್ದದ ರಸ್ತೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸುವ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ದೇಶದ ಅನೇಕ ಭಾಗದಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಹೊಂದಿವೆ. ಗಡಿ ರಸ್ತೆ ಸಂಸ್ಥೆ ಕೂಡ ಭಾರತದ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಈ ಮೂಲಕ ಭಾರತದ ಮಿಲಿಟರಿ ಪಡೆಗಳ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. 

Follow Us:
Download App:
  • android
  • ios