80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ BSNL ಹೊಸ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 24 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ ಕರೆ, ಡೇಟಾ ಮತ್ತು ಎಸ್‌ಎಂಎಸ್‌ ಸೌಲಭ್ಯಗಳಿವೆ. ಜೊತೆಗೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ನೀಡಲಾಗುತ್ತಿದೆ.

BSNL ಮತ್ತೊಮ್ಮೆ ವಿಶೇಷ ಪ್ರೊಮೋಶನಲ್ ಆಫರ್ ತಂದಿದೆ. 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಹೊಸ BSNL ಸಂಪರ್ಕ ಪಡೆಯುವ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಅನ್ನು ಪರಿಚಯಿಸಿದೆ. ಈ ಪ್ಲಾನ್ ವಿಶೇಷತೆ ಏನು? ಆಫರ್ ಏನೆಲ್ಲಾ ಇದೆ ನೋಡೋಣ ಬನ್ನಿ.

ಏನಿದು 'ಫ್ರೀಡಂ ಪ್ಲಾನ್ 2.0'?

ಈ ಪ್ರೊಮೋಶನ್‌ನಲ್ಲಿ ಸಾಮಾನ್ಯವಾಗಿ ರೀಚಾರ್ಜ್‌ಗೆ ಪಾವತಿಸಬೇಕಾದ ಮೊತ್ತವನ್ನು ಮನ್ನಾ ಮಾಡಲಾಗಿದೆ. 24 ದಿನಗಳ ವ್ಯಾಲಿಡಿಟಿ ಸಮಯದಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ರೀಚಾರ್ಜ್ ಮಾಡದೆ ಕರೆ, ಎಸ್‌ಎಂಎಸ್‌ ಮತ್ತು ಡೇಟಾ ಬಳಸಬಹುದು. ಆದರೆ, ಈ ವಿಶೇಷ ಸೌಲಭ್ಯ ಹೊಸ BSNL ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ BSNL ಸಿಮ್ ಬಳಸುತ್ತಿರುವವರಿಗೆ ಈ ಆಫರ್ ಲಭ್ಯವಿಲ್ಲ.

ಈ ಫ್ರೀಡಂ ಪ್ಲಾನ್‌ನಲ್ಲಿ 24 ದಿನಗಳವರೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗುತ್ತೆ. ಇದರಿಂದ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ಡೇಟಾ ವಿಚಾರಕ್ಕೆ ಬಂದರೆ, ಪ್ರತಿದಿನ 1 GB ಹೈ-ಸ್ಪೀಡ್ ಡೇಟಾ ನೀಡಲಾಗುತ್ತಿದೆ. ದಿನದ ಡೇಟಾ ಮಿತಿ ಮುಗಿದ ನಂತರ ಇಂಟರ್‌ನೆಟ್‌ ವೇಗ ಕಡಿಮೆಯಾಗುತ್ತದೆ. ಜೊತೆಗೆ, ಪ್ರತಿದಿನ 100 ಎಸ್‌ಎಂಎಸ್‌ ಕಳುಹಿಸುವ ಪ್ರಯೋಜನವೂ ಇದೆ.

ಕಳೆದ ವರ್ಷ ಆಜಾದಿ ಕಾ ಪ್ಲಾನ್ ಘೋಷಿಸಿದ್ದ ಬಿಎಸ್‌ಎನ್‌ಎಲ್

BSNL ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು 'ಆಜಾದಿ ಕಾ ಪ್ಲಾನ್' ಹೆಸರಿನಲ್ಲಿ 1 ರೂಪಾಯಿಯ ವಿಶೇಷ ಆಫರ್ ನೀಡಿತ್ತು. ಆಗ ಆ ಪ್ಲಾನ್‌ಗೆ 30 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವಿತ್ತು. ಈಗಿನ 'ಫ್ರೀಡಂ ಪ್ಲಾನ್ 2.0' ನಲ್ಲಿ ವ್ಯಾಲಿಡಿಟಿಯನ್ನು 24 ದಿನಗಳಿಗೆ ಮತ್ತು ಡೇಟಾವನ್ನು 1 GBಗೆ ಇಳಿಸಲಾಗಿದೆ. ಆದರೆ, ಅನ್‌ಲಿಮಿಟೆಡ್ ಕರೆಗಳು ಮತ್ತು 100 ಎಸ್‌ಎಂಎಸ್‌ ಸೌಲಭ್ಯಗಳು ಮುಂದುವರಿದಿವೆ.

ಫ್ರೀಡಂ ಆಫರ್ ಜೊತೆಗೆ, BSNL ತನ್ನ ಈಗಿನ ಗ್ರಾಹಕರಿಗೂ ಒಂದು ಗುಡ್ ನ್ಯೂಸ್ ನೀಡಿದೆ. ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026ರ ನಡುವೆ ರೀಚಾರ್ಜ್ ಮಾಡುವವರಿಗೆ 365 ದಿನಗಳ ಬದಲು 412 ದಿನಗಳ (ಹೆಚ್ಚುವರಿ 47 ದಿನ) ವ್ಯಾಲಿಡಿಟಿ ಸಿಗಲಿದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2 GB ಡೇಟಾ, 100 ಎಸ್‌ಎಂಎಸ್‌ ಮತ್ತು ಅನ್‌ಲಿಮಿಟೆಡ್ ಕರೆಗಳು ಲಭ್ಯ.

BSNL ಘೋಷಿಸಿರುವ ಈ ಎರಡೂ ವಿಶೇಷ ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯ. 1 ರೂಪಾಯಿಯ 'ಫ್ರೀಡಂ ಪ್ಲಾನ್' ಮತ್ತು ₹2,399 ಪ್ಲಾನ್ ಮೇಲಿನ ಹೆಚ್ಚುವರಿ ವ್ಯಾಲಿಡಿಟಿ ಆಫರ್ ಸೆಪ್ಟೆಂಬರ್ 12, 2026ರವರೆಗೆ ಮಾತ್ರ ಇರಲಿದೆ. 4G ಸೇವೆ ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಹೊಸ ಗ್ರಾಹಕರನ್ನು ಸೆಳೆಯಲು BSNL ಈ ಆಫರ್‌ಗಳನ್ನು ತಂದಿದೆ.

ಒಟ್ಟಾರೆಯಾಗಿ ಬಿಎಸ್‌ಎನ್‌ಎಲ್ ಘೋಷಿಸಿರುವ ಈ ಭರ್ಜರಿ ಪ್ಲಾನ್ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್‌ನ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.