ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ 30 ಕೋಟಿ ರೂ. ಗಳಿಸಿದ ನಾವಿಕ ಪಿಂಟು ಮಲ್ಲಾಹ್‌ಗೆ ಈಗ 12.80 ಕೋಟಿ ರೂ. ತೆರಿಗೆ ಕಟ್ಟುವ ಸಂಕಷ್ಟ ಎದುರಾಗಿದೆ. ಈತನ ಯಶಸ್ಸಿನ ಕಥೆಯನ್ನು ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಹೇಳಿದ್ದರು.
ನವದೆಹಲಿ (ಮಾ.10): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳೆ ನೈನಿ ತಾಲೂಕಿನ ನಾವಿಕನ ಪಾಲಿಗೆ ಜೀವನ ಬದಲಿಸಿದ ಕ್ಷಣವಾಗಿ ಮಾರ್ಪಟ್ಟಿದೆ. ತಾಯಿಯ ಚಿನ್ನವನ್ನು ಅಡವಿಟ್ಟು ಸಾಕಷ್ಟು ಬೋಟ್‌ಗಳನ್ನು ಖರೀದಿ ಮಾಡಿದ್ದ ನಾವು ಪಿಂಟು ಮಲ್ಲಾಹ್ ಬರೀ 45 ದಿನಗಳ ಕುಂಭಮೇಳದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಗಳಿಸಿರುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾತನಾಡಿದ್ದರು. ಆದರೆ, ಈ ಯಶಸ್ಸಿನ ಕಥೆಯ ಹಿನ್ನಲೆಯಲ್ಲಿಯೇ ಅವರಿಗೆ ತೆರಿಗೆ ಸಂಕಷ್ಟ ಕೂಡ ಶುರುವಾಗಿದೆ. ಯೋಗಿ ಆದಿತ್ಯನಾಥ್ ಈತನ ಕಥೆಯನ್ನು ವಿಧಾನಸಭೆಯಲ್ಲಿ ಹೇಳಿದ ಬಳಿಕ ಉದ್ಯಮಿ ಮೋಹನ್‌ದಾಸ್‌ಪೈ ಸೇರಿದಂತೆ ಹಲವರು ಆದಾಯ ತೆರಿಗೆ ಇಲಾಖೆಗೆ ಟ್ಯಾಗ್ ಮಾಡಿ, ಕನಿಷ್ಠ ಇವರಿಂದ ತೆರಿಗೆ ಪಡೆಯುತ್ತೀರಿ ಎಂದು ಭಾವಿಸುತ್ತೇನೆ ಎಂದಿದ್ದರು.
ಈಗ ಕುಂಭಮೇಳದಲ್ಲಿ ನಾವಿಕ ಸಂಪಾದಿಸಿದ 30 ಕೋಟಿ ಆದಾಯ ಅವರನ್ನು ತೆರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮಹಾ ಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ್ದ ನಾವಿಕ ಈಗ ₹12.80 ಕೋಟಿ ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಅಧಿಕಾರಿಗಳು ತಮ್ಮ ಪಾಲನ್ನು ಕೇಳುತ್ತಿರುವುದರಿಂದ ಅವರ ಅನಿರೀಕ್ಷಿತ ಸಂಪತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆಗೆ ಈಗ ಅನೇಕರು ಮನವಿ ಮಾಡಿದ್ದಾರೆ.
ಮಹಾ ಕುಂಭಮೇಳಕ್ಕೆ ಕೆಲ ತಿಂಗಳ ಮುನ್ನ, ಪಿಂಟು ನಿರೀಕ್ಷಿತ ಯಾತ್ರಿಕರ ಒಳಹರಿವಿನಿಂದ ಬರುವ ಅವಕಾಶವನ್ನು ಅಂದಾಜಿಸಿದ್ದರು. ಪ್ರಯಾಗ್‌ರಾಜ್‌ನಲ್ಲಿ ಬರುವ ನಿವಾಸಿಗಳನ್ನು ಕರೆದೊಯ್ಯಲು ಇನ್ನಷ್ಟು ದೋಣಿಗಳನ್ನು ಖರೀದಿ ಮಾಡಬೇಕೆಂದು ಬಯಸಿದ್ದರು. ತಾಯಿಯ ಚಿನ್ನ ಅಡವಿಟ್ಟು ಪಿಂಟು ಮಾಡಿದ ಈ ನಿರ್ಧಾರ ಅವರ ಜೀವನವನ್ನೇ ಬದಲಿಸಲು ಕಾರಣವಾಗಿದೆ.
ಆರಂಭದಲ್ಲ ಅವರ ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಕುಟುಂಬ ನಿರ್ವಹಣೆಗಾಗಿ ಈ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಅರಿತು ಹೂಡಿಕೆ ಮಾಡಲು ಚಿನ್ನವನ್ನು ನೀಡಿದ್ದರು. 'ನಾನು ನನ್ನ ತಾಯಿಗೆ ಹೇಳಿದ್ದೆ. ಅಮ್ಮ ನನ್ನನ್ನು ನಂಬು. ಕೋಟಿಗಳ ಲೆಕ್ಕದಲ್ಲಿ ಭಕ್ತಾದಿಗಳು ಬರುತ್ತಾರೆ. ಅವರಿಗೆ ನಾನು ಭಕ್ತಿಯಿಂದ ಸೇವೆ ಮಾಡುತ್ತೇನೆ. ನಾನು ನನ್ನ ಹಣವನ್ನು ವಾಪಾಸ್ ಪಡೆಯಲಿದ್ದು, ನಮ್ಮ ಬದುಕು ಬದಲಿಸುವಷ್ಟು ಹಣವನ್ನು ಸಂಪಾದನೆ ಮಾಡಲಿದ್ದೇನೆ' ಎಂದು ತಾಯಿಗೆ ಹೇಳಿದ್ದೆ. ಮೊದಲು ನನ್ನ ತಾಯಿ ಅತ್ತರೂ, ಬಳಿಕ ಒಪ್ಪಿಗೆ ನೀಡಿದ್ದರು ಎಂದು ಪಿಂಟು ತಿಳಿಸಿದ್ದರು.
ಕುಂಭಮೇಳ ನಾವಿಕನ ಕ್ರಿಮಿನಲ್ ಹಿನ್ನೆಲೆ ಕಂಡು ಬೆಚ್ಚಿದ ಜನರು; 30 ಕೋಟಿ ಗಳಿಕೆ ರಹಸ್ಯ!
ಈ ಬಗ್ಗೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಮಾತನಾಡಿದ ಯೋಗಿ ಅದಿತ್ಯನಾಥ್, ಪಿಂಟು ಅವರ ಕುಟುಂಬ 130 ಬೋಟ್‌ಗಳನ್ನು ಹೊಂದಿತ್ತು. 45 ದಿನದಲ್ಲಿ ಅವರ ಕುಟುಂಬ 30 ಕೋಟಿ ಆದಾಯ ಮಾಡಿದೆ. ಪ್ರತಿಬೋಟ್‌ನಿಂದ 23 ಲಕ್ಷ ಆದಾಯವಾಗಿದ್ದು, ಪ್ರತಿ ದಿನ ಅವರು 50-52 ಸಾವಿರ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ತಿಳಿಸಿದ್ದರು.
ಗಂಗಾ ನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!
