ಕುಂಭಮೇಳದಲ್ಲಿ 30 ಕೋಟಿ ಸಂಪಾದಿಸಿದ ನಾವಿಕ ಪಿಂಟುವಿನ ಕ್ರಿಮಿನಲ್ ಹಿನ್ನೆಲೆ ಬಯಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರೇ ಪಿಂಟು ಯಶೋಗಾಥೆ ಹೇಳಿದ ಬಳಿಕ ಆತನ ಗಳಿಕೆಯ ರಹಸ್ಯ ಮತ್ತು ಅಪರಾಧ ಚರಿತ್ರೆ ಬೆಳಕಿಗೆ ಬಂದಿದೆ.
ಪ್ರಯಾಗ್‌ರಾಜ್: 45 ದಿನಗಳ ಮಹಾಕುಂಭ ಮೇಳದಲ್ಲಿ 30 ಕೋಟಿ ಸಂಪಾದನೆ ಮಾಡಿದ ನಾವಿಕ ಪಿಂಟುವಿನ ಅಪರಾಧ ಹಿನ್ನೆಲೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಹ ನಾವಿಕ ಪಿಂಟು ಬಗ್ಗೆ ಮಾತನಾಡಿದ್ದರು. ಪಿಂಟು ಕುಟುಂಬದ ಹೇಗೆ 130 ದೋಣಿಗಳ ಮೂಲಕ 30 ಕೋಟಿ ಸಂಪಾದನೆ ಮಾಡಿತು ಎಂದು ಸಿಎಂ ಯೋಗಿ ಆದಿತ್ಯನಾಥ್ ವಿವರಿಸಿದ್ದರು. ಪಿಂಟು ಮತ್ತು ಕುಟುಂಬದ ಯಶಸ್ಸಿನ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಲ ಮಾಡಿ 130 ದೋಣಿ ಖರೀದಿಸಿ ಮತ್ತು ಕುಂಭ ಮೇಳದಿಂದ ಬಂದ ಹಣದಿಂದಲೇ ಎಲ್ಲಾ ಸಾಲ ತೀರಿಸಲಾಗಿದೆ ಎಂದು ಪಿಂಟು ಮೆಹ್ರಾ ಕುಟುಂಬ ವಿವರಿಸಿತ್ತು.
ಸಿಎಂ ಯೋಗಿ ಆದಿತ್ಯನಾಥ್ ಅವರೇ ಪಿಂಟು ಮೆಹ್ರಾ ಕುಟುಂಬದ ಯಶೋಗಾಥೆಯನ್ನು ವಿವರಿಸಿದ ಬಳಿಕ ಜನರು ನಾವಿಕನ ಕುರಿತು ತಿಳಿದುಕೊಳ್ಳಲು ಆಸಕ್ತಿ ತೋರಿದ್ದರು. ಹಾಗೆ 45 ದಿನದಲ್ಲಿ 30 ಕೋಟಿ ಹಣ ಸಂಪಾದಿಸಲು ಹೇಗೆ ಸಾಧ್ಯ ಎಂಬುದರ ಬಗ್ಗೆಯೂ ಜನರು ಪ್ರಶ್ನೆ ಮಾಡಿದ್ದರು. ಮತ್ತೊಂದೆಡೆ ನಾವಿಕರು ಭಕ್ತಾದಿಗಳನ್ನು ತ್ರಿವೇಣಿ ಸಂಗಮಕ್ಕೆ ಕರೆದೊಯ್ಯಕು ಮೂರರಿಂದ ನಾಲ್ಕು ಪಟ್ಟು ಹಣ ವಸೂಲಿ ಮಾಡಿದ್ದಾರೆ. ಇದೊಂದು ಹಗಲುದರೋಡೆಯಾಗಿದ್ದು, ಹಾಗಾಗಿ ಪಿಂಟು ಕುಟುಂಬ 30 ಕೋಟಿ ಹಣ ಸಂಪಾದನೆ ಮಾಡಿರಬಹುದು ಎಂದು ಕಮೆಂಟ್ ಮಾಡಿದ್ದರು. ಇದೀಗ ಪಿಂಟು ಮತ್ತು ಆತನ ಕುಟುಂಬದ ಅಪರಾಧ ಹಿನ್ನೆಲೆಯನ್ನು ಕಂಡು ಜನರು ಆಶ್ಚರ್ಯವ್ಯಕ್ತಪಡಿಸುತ್ತಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದರ ಪಿಂಟು ಫುಲ್ ಖುಷಿಯಾಗಿದ್ದರು. ಸ್ಥಳೀಯ ಮಾಧ್ಯಮ ಮತ್ತು ಯುಟ್ಯೂಬ್ ಚಾನೆಲ್‌ಗಳು ಪಿಂಟು ಮತ್ತು ಅವರ ಕುಟುಂಬಸ್ಥರನ್ನು ಸಂದರ್ಶನ ಮಾಡಲು ಆರಂಭಿಸಿದರು. ಈ ಎಲ್ಲಾ ಬೆಳವಣಿಗೆಳ ನಡುವೆ ಪಿಂಟು ಮತ್ತು ಅವರ ಕುಟುಂಬದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪಿಂಟು ಸೇರಿದಂತೆ ಬಹುತೇಕ ಕುಟುಂಬದ ಸದಸ್ಯರು ಅಪರಾಧ ಹಿನ್ನೆಲೆಯನ್ನು ಹೊಂದಿದ್ದರು. ಧೀರ್ಘ ಸಮಯದಿಂದ ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಪಿಂಟು ಕುಟುಂಬದ ಕೆಲ ಸದಸ್ಯರು ಜೈಲಿಗೂ ಹೋಗಿ ಬಂದಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
21 ಕ್ರಿಮಿನಲ್ ಪ್ರಕರಣಗಳು
ನಾವಿಕ ಕುಟುಂಬದ ಯಜಮಾನನಾಗಿರುವ ಪಿಂಟು ಮೆಹ್ರಾ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ 21 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಪಿಂಟು ಮೆಹ್ರಾ ವಿರುದ್ಧ ಗೂಂಡಾ ಕಾಯ್ದೆ ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಎರಡು ಬಾರಿ ಕ್ರಮ ಕೈಗೊಳ್ಳಲಾಗಿದೆ. ನಾವಿಕ ಪಿಂಟು ಮೆಹ್ರಾ ಅಪರಾಧ ಇತಿಹಾಸವನ್ನು ಹೊಂದಿದ್ದಾನೆ. ಕುಟುಂಬದ ಪ್ರಾಬಲ್ಯಕ್ಕಾಗಿ ನಡೆದ ಸಂಘರ್ಷದಲ್ಲಿ ಐವರ ಕೊಲೆಯೂ ನಡೆದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪಿಂಟು ಮೆಹ್ರಾ ಕುಟುಂಬದ ಗೂಂಡಾ ಇಮೇಜ್ ಹೊಂದಿದೆ.
ಹಲವು ಬಾರಿ ಜೈಲಿಗೆ ಹೋಗಿರುವ ಪಿಂಟು ಮೆಹ್ರಾ
ನಾವಿಕ ಕುಟುಂಬದ ಮುಖ್ಯಸ್ಥ ಪಿಂಟು ವಿರುದ್ಧ 2005ರಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೊದಲ ಪ್ರಕರಣ ದಾಖಲಾಗಿದ್ದ ಸಂದರ್ಭದಲ್ಲಿ ಪಿಂಟು ವಯಸ್ಸು 23 ಆಗಿತ್ತು. ಪಿಂಟು ವಿರುದ್ಧ ಕೊಲೆ, ಕೊಲೆಯತ್ನ ಮತ್ತು ಸುಲಿಗೆಯಂತಹ ಗಂಭೀರ ಕ್ರಿಮಿನಲ್ ಅಪರಾಧಗಳಡಿಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿವೆ. 2010 ಮತ್ತು 2016 ರಲ್ಲಿ ಅವರ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿತ್ತು. 2013 ಮತ್ತು 2015 ರಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಲವು ಬಾರಿ ಜೈಲಿಗೆ ಹೋಗಿರುವ ಪಿಂಟು ಮೆಹ್ರಾ, ಕೆಲ ತಿಂಗಳ ಹಿಂದೆಯಷ್ಟೇ ಸೆರೆಮನೆಯಿಂದ ಹೊರಗೆ ಬಂದಿದ್ದನು. ಜೈಲಿನಲ್ಲಿದ್ದುಕೊಂಡೇ ಪಿಂಟು ಹಲವರಿಗೆ ಬೆದರಿಕೆ ಹಾಕಿದ್ದನು. ಒಂದು ರೀತಿ ಜೈಲನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದನು. ಪ್ರಯಾಗ್‌ರಾಜ್‌ನ ನೈನಿ ಪೊಲೀಸ್ ಠಾಣೆಯಲ್ಲಿ ನಾವಿಕ ಪಿಂಟು ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಪಿಂಟು ತಂದೆ, ಸೋದರರು ಸಹ ಕ್ರಿಮಿನಲ್ಸ್
ಇನ್ನು ಪಿಂಟು ತಂದೆ ರಾಮ್ ಸಹಾರೆ ಅಲಿಯಾಸ್ ಬಚ್ಚಾ ಸಹ ಓರ್ವ ಕ್ರಿಮಿನಲ್ ಆಗಿದ್ದನು. ಜೂನ್ 25, 2018 ರಂದು ಜೈಲಿನಲ್ಲಿದ್ದಾಗಲೇ ರಾಮ್ ಸಹಾರೆ ನಿಧನವಾಗಿತ್ತು. ಪಿಂಟುವಿನ ಅಣ್ಣ ಆನಂದ್ ಕೂಡಲ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ. ಸುಲಿಗೆ ಮತ್ತು ವಸೂಲಿಗೆ ಸಂಬಂಧಿಸಿದ ವಿವಾದದಲ್ಲಿ ಪಿಂಟು ಸೋದರ ಆನಂದ್‌ನ ಕೊಲೆಯಾಗಿತ್ತು. ಇನ್ನೋರ್ವ ಸೋದರ ಅರವಿಂದ್ ಮೇಲೆಯೂ ಹಲವು ಕೇಸ್‌ಗಳಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಇದನ್ನೂ ಓದಿ: ಮಹಾಕುಂಭ ಮೇಳದಿಂದ ಕೋಟ್ಯಾಧಿಪತಿಯಾದ ದೋಣಿ ಮಾಲೀಕ: 45 ದಿನದಲ್ಲಿ ಗಳಿಸಿದ್ದೆಷ್ಟು ಕೋಟಿ
ದೋಣಿ ನಡೆಸೋದು ನೆಪಮಾತ್ರ
ಪಿಂಟು ಮೆಹ್ರಾ ದೋಣಿ ನಡೆಸೋದು ನೆಪ ಮಾತ್ರ ಎಂದು ವರದಿಯಾಗಿದೆ. ಸ್ಥಳೀಯ ನಾವಿಕರಿಂದ ಪಿಂಟು ಹಣ ವಸೂಲಿ ಮಾಡ್ತಾನೆ ಎಂಬ ಆರೋಪ ಕೇಳಿ ಬಂದಿದೆ. ಪಿಂಟು ಕುಟುಂಬದ ಅನುಮತಿ ಇಲ್ಲದೇ ಯಾರು ನದಿಗೆ ದೋಣಿಯನ್ನು ಇಳಿಸುವಂತಿಲ್ಲ ಎಂಬ ನಿಯಮವನ್ನು ಹಾಕಿದ್ದಾನೆ. ಪಿಂಟು ಸಾಮ್ರಾಜ್ಯ ಎಷ್ಟು ದೊಡ್ಡದಾಗಿದೆ ಅಂದ್ರೆ ಕುಂಭ ಮತ್ತು ಮಾಘ ಉತ್ಸವಗಳ ಸಮಯದಲ್ಲಿ ಚೆಕ್ಕರ್ ಪ್ಲೇಟ್‌ಗಳಿಂದ ರಸ್ತೆಗಳನ್ನು ನಿರ್ಮಿಸುವುದು, ವಿದ್ಯುತ್ ಸಬ್‌ಸ್ಟೇಷನ್, ವಿದ್ಯುತ್ ಲೈನ್ ನಿರ್ಮಾಣದಂತಹ ಗುತ್ತಿಗೆಗಳನ್ನಇವರೇ ಪಡೆಯುತ್ತಾರೆ. ಪಿಂಟು ತಾಯಿ ಶುಕ್ಲಾವತಿ ದೇವಿ ವಿದ್ಯುತ್ ಇಲಾಖೆಯ ನೋಂದಾಯಿತ ಗುತ್ತಿಗೆದಾರರು.
30 ಕೋಟಿ ಹಣ ಸಂಪಾದಿಸಲು ಸಾಧ್ಯವೆ?
ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರವು ವಿವಿಧ ಘಾಟ್‌ಗಳಿಂದ ಸಂಗಮಕ್ಕೆ ದರವನ್ನು 75 ರೂ.ನಿಂದ 160 ರೂ.ಗೆ ನಿಗದಿಪಡಿಸಿತ್ತು. ಒಂದು ದೋಣಿಯಲ್ಲಿ ಇಬ್ಬರು ಚಾಲಕರು ಸೇರಿದಂತೆ ಗರಿಷ್ಠ ಎಂಟು ಜನರು ಪ್ರಯಾಣಿಸಬಹುದು. 130 ದೋಣಿಗಳು ದಿನಕ್ಕೆ ಎಂಟು ಸುತ್ತು ಹಾಕಿದ್ರೆ ಒಂದು ದೋಣಿಯಿಂದ ಗರಿಷ್ಠ 6,400 ರೂಪಾಯಿ ಗಳಿಸಬಹುದು.ಇಡೀ ಮಹಾಕುಂಭದ ಸಮಯದಲ್ಲಿ 130 ದೋಣಿಗಳಿಂದ ಗರಿಷ್ಠ 3 ಕೋಟಿ 74 ಲಕ್ಷ 40 ಸಾವಿರ ರೂ.ಗಳ ಗಳಿಕೆ ಸಾಧ್ಯ . ಸರ್ಕಾರಿ ದರದಲ್ಲಿ ದೋಣಿಗಳನ್ನು ನಡೆಸಿದ್ದೇ ಆದ್ರೆ 30 ಕೋಟಿ ರೂ. ಗಳಿಸುವುದು ಸಾಧ್ಯವಿಲ್ಲ. ಭಕ್ತರಿಂದ ಹೆಚ್ಚುವರಿ ಹಣ ಪಡೆದುಕೊಂಡಿದ್ರೆ ಇದು ಸಾಧ್ಯ. ಆದ್ರೆ ಪಿಂಟು ಕುಟುಂಬ 30 ಕೋಟಿಯಲ್ಲಿ ಭಕ್ತರು ನೀಡಿದ ಟಿಪ್ಸ್ ಸೇರಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಸಾಲ ಮಾಡಿ, ಚಿನ್ನ ಅಡವಿಟ್ಟು 70 ದೋಣಿ ಖರೀದಿಸಿದ್ದೆ: ಕುಂಭಮೇಳದಲ್ಲಿ ಇದೆಲ್ಲವನ್ನೂ ಮೀರಿ ಲಾಭ ಬಂದಿದೆ.
