ಕಾನ್ಫಿಡೆಂಟ್ ಗ್ರೂಪ್‌ನ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಅನಿರೀಕ್ಷಿತ ನಿಧನದ ನಂತರ, ಅವರ ಸಹೋದರ ಸಿ.ಜೆ. ಬಾಬು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನೀಡಿದ ನಿರಂತರ ಮಾನಸಿಕ ಹಿಂಸೆ ಮತ್ತು ಒತ್ತಡವೇ ತಮ್ಮನ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ.
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಬಿಲಿಯನೇರ್ ರಿಯಲ್ ಎಸ್ಟೇಟ್ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಆಕಸ್ಮಿಕ ನಿಧನಕ್ಕೆ ಸಂಬಂಧಿಸಿದಂತೆ, ಅವರ ಅಣ್ಣ ಉದ್ಯಮಿ, ವೈಟ್‌ಗೋಲ್ಡ್ ಸಂಸ್ಥೆಯ ಮುಖ್ಯಸ್ಥ ಸಿ.ಜೆ. ಬಾಬು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ. ರಾಯ್ ಅವರ ಸಾವಿಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ವರ್ತನೆ ನೇರ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ಖಾಸಗಿ ಚಾನೆಲ್ ಕೊಟ್ಟ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಜೆ. ಬಾಬು, “ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಿರಂತರವಾಗಿ ಅವರ ಕಚೇರಿಯಲ್ಲೇ ಇದ್ದರು. ಪದೇಪದೇ ವಿಚಾರಣೆ, ಒತ್ತಡ ಮತ್ತು ಮಾನಸಿಕ ಹಿಂಸೆ ಇತ್ತು. ಇದರಿಂದಲೇ ನನ್ನ ತಮ್ಮ ತೀವ್ರ ಒತ್ತಡ ಅನುಭವಿಸಿದ್ದಾನೆ ಎಂಬ ಅನುಮಾನ ನನಗಿದೆ” ಎಂದು ಹೇಳಿದ್ದಾರೆ.
ಐಟಿ ಅಧಿಕಾರಿಗಳ ಮೇಲೆ ಗಂಭೀರ ಆರೋಪ
ಕೇರಳದ ಐಟಿ ಇಲಾಖೆಯ ಹೆಚ್ಚುವರಿ ಆಯುಕ್ತ ಕೃಷ್ಣ ಪ್ರಸಾದ್ ಅವರ ನಡೆ ಬಗ್ಗೆ ಸಿ.ಜೆ. ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವರು ನನ್ನ ತಮ್ಮನಿಗೆ ಅನಗತ್ಯ ಕಿರುಕುಳ ನೀಡಿದ್ದಾರೆ ಎಂಬ ಅನುಮಾನ ನನಗೆ ಇದೆ. ಈ ಘಟನೆಗೆ ಅವರು ಹೊಣೆಗಾರರಾಗಿರಬಹುದು. ಈ ಕುರಿತು ನಾನು ಖಂಡಿತವಾಗಿಯೂ ಐಟಿ ಅಧಿಕಾರಿಗಳ ವಿರುದ್ಧ ದೂರು ನೀಡುತ್ತೇನೆ” ಅವರ ಬಳಿ 20 ವರ್ಷದಿಂದ ಗನ್ ಇದೆ. ದಾಳಿಯ ಸಮಯದಲ್ಲಿ ಅದನ್ನು ವಶಪಡಿಸಿಕೊಳ್ಳಬೇಕು. ಅದು ಹೇಗೆ ತಮ್ಮನ ಕೈಗೆ ಸಿಕ್ಕಿತು ಎಂಬ ಅನುಮಾನ ಇದೆ ಎಂದು ಹೇಳಿದರು.
ಡಿಸೆಂಬರ್ ತಿಂಗಳಿಂದಲೇ ಐಟಿ ಅಧಿಕಾರಿಗಳು ಡಾ. ಸಿ.ಜೆ. ರಾಯ್ ಅವರನ್ನು ಗುರಿಯಾಗಿಸಿಕೊಂಡಿದ್ದರು ಎಂದು ಆರೋಪಿಸಿದ ಅವರು, “ಅವರಿಗೆ ಯಾವುದೇ ಸಾಲವಿರಲಿಲ್ಲ. ಆರ್ಥಿಕ ಸಂಕಷ್ಟವೂ ಇರಲಿಲ್ಲ. ಅವರು ಬಹಳ ಬಲಿಷ್ಠ ವ್ಯಕ್ತಿತ್ವದವರು. ಇಂತಹ ವ್ಯಕ್ತಿ ಆತ್ಮ*ಹತ್ಯೆಗೆ ಶರಣಾಗುತ್ತಾರೆ ಎನ್ನುವುದು ನಂಬಲು ಸಾಧ್ಯವಿಲ್ಲ” ಎಂದರು.
ಉದ್ಯಮಿಗಳ ವಿರುದ್ಧ ವ್ಯವಸ್ಥಾತ್ಮಕ ಒತ್ತಡ?
ಐಟಿ ಇಲಾಖೆಯ ಕಾರ್ಯವೈಖರಿಯ ಕುರಿತು ಮಾತನಾಡಿದ ಸಿ.ಜೆ. ಬಾಬು, “ದೇಶದಲ್ಲಿ ಸುಮಾರು 6.6 ಕೋಟಿ ಜನರು ವೇತನದಾರರಾಗಿದ್ದು, ಕೇವಲ 2.2 ಕೋಟಿ ಜನ ಮಾತ್ರ ಉದ್ಯಮಿಗಳು ತೆರಿಗೆ ಪಾವತಿಸುತ್ತಾರೆ. ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ದೂಷಿಸುವುದೇ ಈ ಇಲಾಖೆಯ ಕೆಲಸವಾಗಿಬಿಟ್ಟಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಡಾ. ಸಿ.ಜೆ. ರಾಯ್ ಅವರು ಕೇರಳದಲ್ಲಿ ಸುಮಾರು 60ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಐಟಿ ಅಧಿಕಾರಿಗಳು ದಾಳಿ ಆರಂಭಿಸಿದ ಬಳಿಕ, ಆ ಯೋಜನೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸುತ್ತಿದ್ದರು ಎಂದು ಸಿ.ಜೆ. ಬಾಬು ತಿಳಿಸಿದ್ದಾರೆ.
ಕೊನೆಯ ಭೇಟಿಯ ನೆನಪು – ಕುಟುಂಬದ ನೋವು
“ಜನವರಿ 27ರಂದು ಸಿ.ಜೆ. ರಾಯ್ ನಮ್ಮ ಮನೆಗೆ ಬಂದಿದ್ದರು. ಸದ್ಯ ಕೆಲಸದ ಮೇಲೆ ನಾನು ವಿದೇಶದಲ್ಲಿದ್ದು, ಬೆಳಗ್ಗೆ ಕರೆ ಮಾಡಿ ಯಾವಾಗ ಬೆಂಗಳೂರಿಗೆ ಬರ್ತಿ ಅಂತ ಕಾಲ್ ಮಾಡಿದ್ದ ನಾನು ನಾಳೆ ಸಂಜೆ 7 ಗಂಟೆಗೆ ತಲುಪುತ್ತೇನೆ ಅಂದಿದ್ದೆ. ಆಗ ಸಿಗುತ್ತೇನೆ ಎಂದಿದ್ದರು. ಆದರೆ ಈಗ ಅವರು ಇಲ್ಲ ಎಂಬುದು ಇನ್ನೂ ನಂಬಲಾಗುತ್ತಿಲ್ಲ” ಎಂದು ಸಿ.ಜೆ. ಬಾಬು ಬೇಸರ ವ್ಯಕ್ತಪಡಿಸಿದರು. ಜನವರಿ 8ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರೂ ಸೇರಿ ಸಂಭ್ರಮಿಸಿದ್ದೆವು. ಅಂದು ಯಾವುದೇ ರೀತಿಯ ಮಾನಸಿಕ ಒತ್ತಡ ಅವರಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಅವರು ನೆನಪಿಸಿಕೊಂಡರು.
ಹಳೆಯ ಯೋಜನೆಗಳನ್ನೂ ಕೆದಕುತ್ತಿದ್ದ ಐಟಿ ಅಧಿಕಾರಿಗಳು
2012ರಲ್ಲಿ ಡಾ. ಸಿ.ಜೆ. ರಾಯ್ ಅವರಿಗೆ ಸಂಬಂಧಿಸಿದಂತೆ ಎರಡು ಯೋಜನೆಗಳನ್ನು ನಾನು ಮಾಡಿಕೊಟ್ಟಿದ್ದೆ. ಆ ಕಾರಣದಿಂದ ನನ್ನನ್ನೂ ವಿಚಾರಣೆಗೆ ಒಳಪಡಿಸಿದ್ದರು. ನಾನು ಅದಕ್ಕೆ ದಾಖಲೆಗನ್ನು ನೀಡಿದ್ದೇನೆ. 10–12 ವರ್ಷಗಳ ಹಿಂದಿನ ದಾಖಲೆಗಳನ್ನೂ ಐಟಿ ಅಧಿಕಾರಿಗಳು ಮತ್ತೆ ಕೆದಕುತ್ತಿದ್ದಾರೆ ಎಂದು ಸಿ.ಜೆ. ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬ ವಿದೇಶದಲ್ಲಿದ್ದು, ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ
ನಾವು ಮೂವರು ಸಹೋದರರು ಇದ್ದೇವೆ. ಸಿ.ಜೆ. ರಾಯ್ ನನಗೆ ತಮ್ಮ. ಅವರ ಕುಟುಂಬ ದುಬೈನಲ್ಲಿ ನೆಲೆಸಿದ್ದು, ಘಟನೆ ವಿಷಯ ತಿಳಿದು ತಕ್ಷಣವೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸುಮಾರು 9 ಗಂಟೆಯ ವಿಮಾನದಲ್ಲಿ ಹೊರಟು ಬೆಂಗಳೂರಿಗೆ ತಲುಪಲಿದ್ದಾರೆ ಎಂದು ಮಾಹಿತಿ ನೀಡಿದರು. ಡಾ. ಸಿ.ಜೆ. ರಾಯ್ ಅವರ ಸಾವು ವೈಯಕ್ತಿಕ ನಿರ್ಧಾರವೇ ಅಥವಾ ನಿರಂತರ ಒತ್ತಡದ ಪರಿಣಾಮವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.


