- Home
- Business
- ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ!
ಆಟೋ ರಿಕ್ಷಾ ಚಾಲಕನಿಂದ ಕಾನ್ಫಿಡೆಂಟ್ ಆಗಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್, ಇನ್ನು ನೆನಪು ಮಾತ್ರ!
ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಡಾ. ಸಿ.ಜೆ. ರಾಯ್, ತೆರಿಗೆ ವಂಚನೆ ಆರೋಪದ ಮೇಲೆ ನಡೆದ ಐಟಿ ದಾಳಿಯ ನಂತರ ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆಟೋ ಚಾಲಕನಾಗಿ ಜೀವನ ಆರಂಭಿಸಿ ಸಾವಿರಾರು ಕೋಟಿ ಮೌಲ್ಯದ ಬಹುರಾಷ್ಟ್ರೀಯ ಸಾಮ್ರಾಜ್ಯ ಕಟ್ಟಿದ ಅವರ ಯಶಸ್ಸಿನ ಪಯಣ ಇಲ್ಲಿದೆ.

ಗನ್‌ನಿಂದ ಶೂಟ್ ಮಾಡಿಕೊಂಡು ಸಾವಿಗೆ ಶರಣು
ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ, ಬಹುರಾಷ್ಟ್ರೀಯ ಸಂಸ್ಥೆಯಾಗಿರುವ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಸಿ.ಜೆ. ರಾಯ್ ಗನ್‌ನಿಂದ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ. ಐಟಿ ದಾಳಿಗೆ ಬೇಸತ್ತು ಆತ್ಮ*ಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆ ತಲುಪುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಲ್ಯಾಂಡ್ ಫರ್ಡ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾನ್ಫಿಡೆಂಡ್ ಗ್ರೂಪ್ ಕಚೇರಿ ಗಳ ಮೇಲೆ ಇವತ್ತು ಐಟಿ ದಾಳಿಯಾಗಿತ್ತು. ತೆರಿಗೆ ವಂಚನೆ ಆರೋಪದಲ್ಲಿ ಐಟಿ ದಾಳಿಯಾಗಿತ್ತು. ರಿಯಲ್ ಎಸ್ಟೇಟ್, ಆತಿಥ್ಯ, ವಾಯುಯಾನ, ಮನರಂಜನೆ, ಶಿಕ್ಷಣ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ, ಯುಎಇ ಮತ್ತು ಅಮೆರಿಕಾದಲ್ಲಿ ಇವರ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬಿಸಿನೆಸ್ ಮ್ಯಾನ್ ಆಗಿ ಬೆಳೆದ ರಾಯ್ ಕಥೆ ಇಲ್ಲಿದೆ.
ಮೂಲ ಕೇರಳ, ಬೆಳೆದಿದ್ದು ಬೆಂಗಳೂರು
ಮೂಲತಃ ಕೇರಳದವರಾದ ಡಾ. ಸಿ.ಜೆ. ರಾಯ್, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ ಅವರು, ನಂತರ ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ಎಂಜಿನಿಯರಿಂಗ್ ಪದವಿ ಮತ್ತು ನಂತರ ಪಿಎಚ್‌ಡಿ ಪದವಿ ಪಡೆದ ರಾಯ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಸಣ್ಣ ರಿಯಲ್ ಎಸ್ಟೇಟ್ ಹೂಡಿಕೆಗಳೊಂದಿಗೆ ಪ್ರಾರಂಭಿಸಿದರು, ನಂತರ ಕೈಗೆಟುಕುವ ವಸತಿ ಮತ್ತು ವಾಣಿಜ್ಯ ಸ್ಥಳಗಳ ಮೇಲೆ ಕೇಂದ್ರೀಕರಿಸಿದ ರಾಯ್ ಪ್ರಾಪರ್ಟೀಸ್ ಗ್ರೂಪ್ ಎಂಬ ತಮ್ಮ ಕಂಪನಿಯನ್ನು ಸ್ಥಾಪಿಸಿದರು. ಅವರು ತಮ್ಮ ವ್ಯವಹಾರವನ್ನು ಭಾರತಕ್ಕೆ ವಿಸ್ತರಿಸಿದರು
ಸಾಮಾನ್ಯ ಆರಂಭದಿಂದ ಅಸಾಧಾರಣ ಸಾಧನೆಗೆ
ವೃತ್ತಿಜೀವನದ ಆರಂಭದಲ್ಲಿ ಬಿಪಿಎಲ್ ಕಂಪೆನಿ, ಬಳಿಕ ಫಾರ್ಚೂನ್ 500 ಕಂಪನಿಯಾಗಿರುವ ಹೆವ್ಲೆಟ್–ಪ್ಯಾಕರ್ಡ್ (HP) ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಅಲ್ಲಿ ಪಡೆದ ಅಂತರರಾಷ್ಟ್ರೀಯ ಅನುಭವವೇ ಅವರ ಉದ್ಯಮಶೀಲತೆಗೆ ದೃಢವಾದ ನೆಲೆಯಾಯಿತು. ಇದಕ್ಕೂ ಮುನ್ನ ಅವರ ತಾಯಿ ಸೈಟ್ ತೆಗೆದುಕೊಂಡು ಮನೆ ಕಟ್ಟಿ ಮಾರುವುದನ್ನು ಮಾಡಿಕೊಂಡಿದ್ದರಂತೆ. ಇದು ಕೂಡ ಬಿಸಿನೆಸ್ ಸಾಮ್ರಾಜ್ಯ ಕಟ್ಟಲು ಸಹಕಾರಿಯಾಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಡಾ. ರಾಯ್ ಅವರ ಯಶಸ್ಸಿನ ಕಥೆ ಅತ್ಯಂತ ಪ್ರೇರಣಾದಾಯಕವಾಗಿದೆ. ತಮ್ಮ ವೃತ್ತಿಜೀವನವನ್ನು ಆಟೋ-ರಿಕ್ಷಾ ಚಾಲಕರಾಗಿ ಆರಂಭಿಸಿದ ಅವರು, ಹಂತ ಹಂತವಾಗಿ ಶ್ರಮ, ಆತ್ಮವಿಶ್ವಾಸ ಮತ್ತು ದೃಢನಿಶ್ಚಯದ ಮೂಲಕ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು. ₹800 ಕೋಟಿ ಮೌಲ್ಯದ ಮಸಾಲಾ ಸೋಡಾ ವ್ಯವಹಾರದಿಂದ ಆರಂಭಗೊಂಡ ಅವರ ಉದ್ಯಮಯಾನ, ಇಂದು ಸಾವಿರಾರು ಕೋಟಿ ಮೌಲ್ಯದ ಬಹುರಾಷ್ಟ್ರೀಯ ಸಮೂಹವಾಗಿ ವಿಸ್ತರಿಸಿದೆ. ಅವರ ನಿವ್ವಳ ಮೌಲ್ಯ ಅಂದಾಜು 8,300 ಕೋಟಿ ಎಂದು ಹೇಳಲಾಗುತ್ತಿದ್ದು ನಿಖರವಾಗಿ ಎಷ್ಟು ಎಂದು ತಿಳಿದುಬಂದಿಲ್ಲ.
ಕಾನ್ಫಿಡೆಂಟ್ ಗ್ರೂಪ್: ಯಶಸ್ಸಿನ ಪಯಣ
2006ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟ ಕಾನ್ಫಿಡೆಂಟ್ ಗ್ರೂಪ್, ಕಳೆದ 16 ವರ್ಷಗಳಲ್ಲಿ ಭಾರತ ಮತ್ತು ಮಧ್ಯಪ್ರಾಚ್ಯದಲ್ಲಿ ಪ್ರಮುಖ ಆಸ್ತಿ ಅಭಿವೃದ್ಧಿ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆ ಇದುವರೆಗೆ 165ಕ್ಕೂ ಹೆಚ್ಚು ಯೋಜನೆಗಳನ್ನು, 43 ಮಿಲಿಯನ್ ಚದರ ಅಡಿಗೂ ಹೆಚ್ಚು ಅಭಿವೃದ್ಧಿಯನ್ನು ಮತ್ತು 15,000ಕ್ಕೂ ಹೆಚ್ಚು ತೃಪ್ತ ಗ್ರಾಹಕರನ್ನು ಹೊಂದಿದೆ. ಕಾನ್ಫಿಡೆಂಟ್ ಗ್ರೂಪ್‌ನ ಪ್ರಮುಖ ವಿಶೇಷತೆ ಎಂದರೆ, ಯಾವುದೇ ಯೋಜನೆಯಲ್ಲೂ ಶೂನ್ಯ ಸಾಲ ನೀತಿಯನ್ನು ಅನುಸರಿಸಿರುವುದು. ಬಂಡವಾಳ-ಭಾರೀ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದು ಅಪರೂಪದ ಸಾಧನೆ.
ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ – ವಿಶಿಷ್ಟ ಯೋಜನೆ
ಬೆಂಗಳೂರು ಸಮೀಪದ ಸರ್ಜಾಪುರ ಪ್ರದೇಶದಲ್ಲಿರುವ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಯೋಜನೆ ಕಾನ್ಫಿಡೆಂಟ್ ಗ್ರೂಪ್‌ನ ಪ್ರತಿಷ್ಠಿತ ಯೋಜನೆಯಾಗಿದೆ. ಸುಮಾರು ₹3,000 ಕೋಟಿ ಹೂಡಿಕೆಯೊಂದಿಗೆ, ಶೂನ್ಯ ಸಾಲದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆ 300 ಎಕರೆ ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿ ಐಷಾರಾಮಿ ವಿಲ್ಲಾಗಳು, ಕಾಂಡೊಮಿನಿಯಂಗಳು, ಗಾಲ್ಫ್ ಅಕಾಡೆಮಿ, ರೆಸಾರ್ಟ್ ಮತ್ತು ಪ್ರಕೃತಿಗೆ ಸಮೀಪದ ವಾಸವ್ಯವಸ್ಥೆ ಒದಗಿಸಲಾಗಿದೆ.
ದೂರದೃಷ್ಟಿಯ ನಿರ್ಧಾರಗಳು
ಸರ್ಜಾಪುರ ಪ್ರದೇಶ ಐಟಿ ಹಬ್ ಆಗುವ ಮುನ್ನವೇ ಅಲ್ಲಿ 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಡಾ. ರಾಯ್ ಅವರ ದೂರದೃಷ್ಟಿ ಇಂದು ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿದೆ. 15 ವರ್ಷಗಳಲ್ಲಿ ಆ ಭೂಮಿಯ ಮೌಲ್ಯ ನೂರು ಪಟ್ಟು ಹೆಚ್ಚಾಗಿ, ಅದನ್ನು ಅತ್ಯಂತ ಮೌಲ್ಯಯುತ ಆಸ್ತಿಯನ್ನಾಗಿ ಪರಿವರ್ತಿಸಿದೆ.
ಐಷಾರಾಮಿ ಕಾರುಗಳ ಸಂಗ್ರಹ
ಡಾ. ಸಿ.ಜೆ. ರಾಯ್ ಅವರು ಪ್ರಸಿದ್ಧ ಐಷಾರಾಮಿ ಕಾರು ಪ್ರಿಯರಾಗಿದ್ದರು. 12ಕ್ಕೂ ಹೆಚ್ಚು ರೋಲ್ಸ್–ರಾಯ್ಸ್, ಬುಗಾಟಿ ವೇಯ್ರಾನ್, ಲಂಬೋರ್ಘಿನಿ ಸೇರಿದಂತೆ ಅಪರೂಪದ ಕಾರುಗಳ ಸಂಗ್ರಹವನ್ನು ಹೊಂದಿದ್ದರು. ಈ ಕಾರುಗಳನ್ನು ಅವರು ಕೇವಲ ಆಸಕ್ತಿಯಿಂದಲ್ಲ, ದೀರ್ಘಾವಧಿಯ ಹೂಡಿಕೆಯ ರೂಪದಲ್ಲಿಯೂ ಕಂಡಿದ್ದರು.
ಮನರಂಜನಾ ಕ್ಷೇತ್ರದಲ್ಲಿ ಹೆಜ್ಜೆ
2012ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ಕ್ಯಾಸನೋವಾ ಮೂಲಕ ಕಾನ್ಫಿಡೆಂಟ್ ಗ್ರೂಪ್ ಮನರಂಜನಾ ಕ್ಷೇತ್ರಕ್ಕೆ ಪ್ರವೇಶಿಸಿತು. ನಂತರ ಮಲಯಾಳಂ ಮತ್ತು ಕನ್ನಡದಲ್ಲಿ 11ಕ್ಕೂ ಹೆಚ್ಚು ಚಿತ್ರಗಳಿಗೆ ಹಣಕಾಸು ಒದಗಿಸಿದೆ. ಮೋಹನ್‌ಲಾಲ್ ಅಭಿನಯದ ಮರಕ್ಕರ್ ಮತ್ತು ಸುರೇಶ್ ಗೋಪಿ ಅಭಿನಯದ ಮೇ ಹೂ ಮೂಸಾ ಸೇರಿದಂತೆ ಹಲವು ದೊಡ್ಡ ಬಜೆಟ್ ಚಿತ್ರಗಳು ಇದರ ಭಾಗವಾಗಿವೆ. ಟಿವಿ ಕ್ಷೇತ್ರದಲ್ಲಿಯೂ, ಐಡಿಯಾ ಸ್ಟಾರ್ ಸಿಂಗರ್ ಸೇರಿದಂತೆ ಅನೇಕ ಜನಪ್ರಿಯ ರಿಯಾಲಿಟಿ ಶೋಗಳಿಗೆ ಪ್ರಾಯೋಜಕತ್ವ ನೀಡಿದ್ದು, ಅವುಗಳೆಲ್ಲವೂ ಮೆಗಾ ಹಿಟ್ ಆಗಿವೆ.
ಗೌರವ ಕಾನ್ಸುಲ್ ಪದವಿ
ಡಾ. ಸಿ.ಜೆ. ರಾಯ್ ಅವರು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸುಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಭಾರತ ಮತ್ತು ಸ್ಲೋವಾಕಿಯಾದ ನಡುವಿನ ವ್ಯಾಪಾರ ಮತ್ತು ವ್ಯವಹಾರ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿದೇಶದಲ್ಲಿ ಬಿಸಿನೆಸ್ ಇದ್ದರೂ ಅವರ ನಿವಾಸ ಬೆಂಗಳೂರು ಕೇಂದ್ರವಾಗಿದ್ದು, ಅವರ ಅಧಿಕಾರ ವ್ಯಾಪ್ತಿ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಒಳಗೊಂಡಿತ್ತು.
ಸಾಮಾಜಿಕ ಸೇವೆ ಮತ್ತು ದಾನಧರ್ಮ
ಸಮಾಜದ ಪ್ರತಿಯೊಬ್ಬರಿಗೂ ಕೈಹಿಡಿಯುವ ದೃಷ್ಟಿಕೋನ ಡಾ. ರಾಯ್ ಅವರ ವ್ಯಕ್ತಿತ್ವದ ಪ್ರಮುಖ ಭಾಗವಾಗಿದೆ. ಕೇರಳದ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ 100ಕ್ಕೂ ಹೆಚ್ಚು ಮನೆಗಳನ್ನು ಸಂಪೂರ್ಣ ವೆಚ್ಚ ಭರಿಸಿ ಪುನರ್‌ನಿರ್ಮಿಸಿದ್ದಾರೆ.
ಇದಲ್ಲದೆ, 100ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳಿಗೆ ನೆರವು, ಉಚಿತ ಕಣ್ಣಿನ ಪೊರೆ ಶಿಬಿರಗಳು,,ಡಯಾಲಿಸಿಸ್ ಯಂತ್ರಗಳ ದೇಣಿಗೆ, ಕ್ಯಾನ್ಸರ್ ಔಷಧಿಗಳಿಗೆ ರಿಯಾಯಿತಿ, ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣ ಪ್ರಾಯೋಜನೆ. ಇವುಗಳ ಮೂಲಕ ಕಾನ್ಫಿಡೆಂಟ್ ಗ್ರೂಪ್ ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ.
ಕುಟುಂಬ ಮತ್ತು ವೈಯಕ್ತಿಕ ಜೀವನ
ವ್ಯವಹಾರದಲ್ಲಿ ನಿರತರಾಗಿದ್ದರೂ, ಡಾ. ರಾಯ್ ಅವರು ತಮ್ಮ ಕುಟುಂಬಕ್ಕೆ ಅತ್ಯಂತ ಮಹತ್ವ ನೀಡಿದ್ದರು. ಪತ್ನಿ ಲಿನಿ ರಾಯ್ ಮತ್ತು ಮಕ್ಕಳಾದ ರೋಹಿತ್ ಹಾಗೂ ರಿಯಾ ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅವರ ದಿನಚರಿಯ ಭಾಗವಾಗಿತ್ತು. ಮಗ ರೋಹಿತ್ ಈಗಾಗಲೇ ಕಾನ್ಫಿಡೆಂಟ್ ಗ್ರೂಪ್‌ನಲ್ಲಿ ಅಂತರರಾಷ್ಟ್ರೀಯ ವ್ಯವಹಾರ ಮತ್ತು ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

