ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1
*2022 ರ ಜನವರಿಯಿಂದ ಅಕ್ಟೋಬರ್ ತನಕ ನಡೆದ ವಹಿವಾಟಿನ ಪರಿಗಣನೆ
*ಬೆಂಗಳೂರಿನಲ್ಲಿ 14.82 ಮಿಲಿಯನ್ ಡಿಜಿಟಲ್ ಪಾವತಿ
*ಹೈದರಾಬಾದ್ ನಲ್ಲಿ 10.36 ಮಿಲಿಯನ್ ಡಿಜಿಟಲ್ ವಹಿವಾಟು
ಬೆಂಗಳೂರು (ಡಿ.9): ಡಿಜಿಟಲ್ ಪಾವತಿ ಇಂದು ನಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸಿದೆ. ಇದೇ ಕಾರಣಕ್ಕೆ ಇಂದು ಭಾರತದಲ್ಲಿ ಯುಪಿಐ, ಡಿಜಿಟಲ್ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗದ ಜನರು ಕೂಡ ಡಿಜಿಟಲ್ ಪಾವತಿಯತ್ತ ಮುಖ ಮಾಡುತ್ತಿದ್ದಾರೆ. ತಳ್ಳುಗಾಡಿಯಿಂದ ಹಿಡಿದು ಸೂಪರ್ ಮಾರ್ಕೆಟ್ ತನಕ ವ್ಯಾಪಾರಿಗಳು ಕೂಡ ಡಿಜಿಟಲ್ ಪಾವತಿ ವಿಧಾನವನ್ನು ನೆಚ್ಚಿಕೊಂಡಿದ್ದಾರೆ. ಸರಳ, ಸುಲಭವಾದ ಡಿಜಿಟಲ್ ವಹಿವಾಟು ಭಾರತೀಯರನ್ನು ಸೆಳೆದಿದೆ. ಅದರಲ್ಲೂ ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಅತ್ಯಧಿಕ ಯುಪಿಐ ವಹಿವಾಟು ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಟಿ ಸಿಟಿ ಬೆಂಗಳೂರಿನಲ್ಲಿ 2022 ರ ಜನವರಿಯಿಂದ ಅಕ್ಟೋಬರ್ ತನಕದ ಅವಧಿಯಲ್ಲಿ 14.82 ಮಿಲಿಯನ್ ಡಿಜಿಟಲ್ ಪಾವತಿ ನಡೆದಿದೆ. ಇದು ದೇಶದಲ್ಲೇ ಅತ್ಯಧಿಕ ಯುಪಿಐ ಪಾವತಿಯಾಗಿದ್ದು, 3,620 ಕೋಟಿ ರೂ. ವಹಿವಾಟು ನಡೆದಿದೆ ಎಂದು ಪಾವತಿ ತಂತ್ರಜ್ಞಾನ ಸಂಸ್ಥೆ ವಲ್ಡ್ ಲೈನ್ ಇಂಡಿಯಾದ ಅಧ್ಯಯನ ವರದಿ ತಿಳಿಸಿದೆ. ಈ ವರದಿ ಪ್ರಕಾರ ಹಬ್ಬದ ಸಮಯದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಡಿಜಿಟಲ್ ವಹಿವಾಟು ನಡೆದಿದೆ.
ಯಾವೆಲ್ಲ ನಗರಗಳಲ್ಲಿ ಎಷ್ಟು ವಹಿವಾಟು ನಡೆದಿದೆ?
ಯುಪಿಐ ವಹಿವಾಟಿನಲ್ಲಿ ಬೆಂಗಳೂರು ದೇಶದ ಟಾಪ್ ಐದು ನಗರಗಳಲ್ಲಿ ಮೊದಲನೇ ಸ್ಥಾನ ಗಳಿಸಿದೆ. ನಂತರದ ಸ್ಥಾನದಲ್ಲಿ ಅಂದರೆ ದ್ವಿತೀಯ ಸ್ಥಾನದಲ್ಲಿ ಹೈದರಾಬಾದ್ ಇದೆ. ಹೈದರಾಬಾದ್ ನಲ್ಲಿ 10.36 ಮಿಲಿಯನ್ ಡಿಜಿಟಲ್ ಪಾವತಿ (Digital payment) ನಡೆದಿದೆ. ಸುಮಾರು 3,050 ಕೋಟಿ ರೂ. ಮೊತ್ತದ ಯುಪಿಐ ವಹಿವಾಟು (UPI transaction) ನಡೆದಿದೆ. ಇನ್ನು ಚೆನ್ನೈನಲ್ಲಿ 9.76 ಮಿಲಿಯನ್ ಯುಪಿಐ ವಹಿವಾಟು (UPI transaction) ನಡೆದಿದೆ. ಈ ಮೂಲಕ 2,250 ಕೋಟಿ ರೂ. ಮೊತ್ತದ ವರ್ಗಾವಣೆ ನಡೆದಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 9.4 ಮಿಲಿಯನ್ ಯುಪಿಐ ವಹಿವಾಟು ನಡೆದಿದ್ದು, 2,740 ಕೋಟಿ ರೂ. ಮೊತ್ತದ ಡಿಜಿಟಲ್ ಪಾವತಿ ನಡೆದಿದೆ. ಪುಣೆಯಲ್ಲಿ 7.88 ಮಿಲಿಯನ್ ಯುಪಿಐ ವಹಿವಾಟು ನಡೆದಿದೆ. 1,730 ಕೋಟಿ ರೂ. ಮೊತ್ತದ ವರ್ಗಾವಣೆ ಆಗಿದೆ.
ದುಡಿದ ಹಣವನ್ನು ಸಮರ್ಪಕವಾಗಿ ಬಳಸುತ್ತಿದ್ದೀರಾ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಈ ಕೆಲಸಗಳಿಗೆ ಬಳಕೆ
ಹತ್ತು ತಿಂಗಳ ಅವಧಿಯಲ್ಲಿ ದಿನಸಿ ಅಂಗಡಿಗಳು, ಹೋಟೆಲ್ ಗಳು, ಜವಳಿ ಅಂಗಡಿಗಳು, ಮೆಡಿಕಲ್, ಜ್ಯುವೆಲ್ಲರಿ ಶಾಪ್ ಗಳು, ಇ-ಕಾಮರ್ಸ್ ತಾಣಗಳು ಮುಂತಾದ ಕಡೆ ಯುಪಿಐ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿರೋದು ಕಂಡುಬಂದಿದೆ. ಗೇಮಿಂಗ್, ಹಣಕಾಸು ವಹಿವಾಟು ಕ್ಷೇತ್ರದಲ್ಲಿ ಕೂಡ ಯುಪಿಐ ಪಾವತಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ.
ಭಾರತದಲ್ಲಿ ನಗದು ಚಲಾವಣೆಯಿಂದ ಡಿಜಿಟಲ್ ಪೇಮೆಂಟ್ (Digital payment) ವರ್ಗಾವಣೆ ಪ್ರಮುಖ ಘಟ್ಟವಾಗಿದೆ. ಯುಪಿಐ (UPI), ವ್ಯಾಲೆಟ್ (Wallet), ಪಿಪಿಐ (PPI), ಇಂಟರ್ ಆಪರೇಬಲ್ ಪಾವತಿಗಳಿಂದ (Payments) ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಇಂಟರ್‌ನೆಟ್ ಬ್ಯಾಕಿಂಗ್ (Internet Banking) ಮೂಲಕ ಮಾತ್ರ ಸೀಮಿತವಾಗಿದ್ದ ಇ- ಟ್ರಾನ್ಸಾಕ್ಷನ್ ಇದೀಗ ಯಾರೂ ಬೇಕಾದರು ಸುಲಭವಾಗಿ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. QR ಕೋಡ್, NFCಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿ (Digital payment) ವೇಗ ಹೆಚ್ಚಾಯಿತು. ಡಿಜಿಟಲ್ ಪಾವತಿ ಆ್ಯಪ್ ಗಳು ಭಾರತದಲ್ಲಿ ನಗದುರಹಿತ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.
Business Ideas : ರೇಷನ್ ಅಂಗಡಿ ಶುರು ಮಾಡೋದು ಹೇಗೆ ಗೊತ್ತಾ?
ಆರ್ಥಿಕ ವರ್ಷ 2016ರಲ್ಲಿ ಶೇ. 11.26ರಷ್ಟಿದ್ದ ಡಿಜಿಟಲ್ ವಹಿವಾಟು ಇದೀಗ ಶೇ. 80.4ಕ್ಕೆ ಏರಿಕೆಯಾಗಿದೆ. 2027ರ ವೇಳೆಗೆ ಈ ಪ್ರಮಾಣ ಶೇಕಡಾ 88ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಎಸ್‌ಬಿಐ (SBI) ಇಕೋರ್ಯಾಪ್ ವರದಿ ಹೇಳಿದೆ.