ದುಡಿದ ಹಣವನ್ನು ಸಮರ್ಪಕವಾಗಿ ಬಳಸುತ್ತಿದ್ದೀರಾ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಇಂದಿನ ದುಬಾರಿ ದುನಿಯಾದಲ್ಲಿ ದುಡಿದ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡೋದೆ ದೊಡ್ಡ ಸವಾಲು. ಹೀಗಿರೋವಾಗ ನಮ್ಮ ಹಣಕಾಸಿನ ನಿರ್ವಹಣೆ ಉತ್ತಮವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business DesK: ಕೈ ತುಂಬಾ ಸಂಪಾದನೆ ಮಾಡೋದು ಎಷ್ಟು ಮುಖ್ಯವೋ, ಹಾಗೆಯೇ ಸಂಪಾದಿಸಿದ ಹಣವನ್ನು ಜಾಣತನದಿಂದ ಬಳಸೋದು ಕೂಡ ಅಷ್ಟೇ ಮುಖ್ಯ. ಅದಕ್ಕೆ ಹೇಳೋದು ಎಷ್ಟು ಸಂಪಾದಿಸುತ್ತೇವೆ ಅನ್ನೋದಕ್ಕಿಂತ ಅದನ್ನು ಹೇಗೆ ಖರ್ಚು ಮಾಡುತ್ತೇವೆ ಅನ್ನೋದು ಮಹತ್ವ ಪಡೆದುಕೊಳ್ಳುತ್ತದೆ. ಇಂದಿನ ಜೀವನಶೈಲಿಯಲ್ಲಿ ಕೈಯಲ್ಲಿರುವ ಹಣ ಖಾಲಿಯಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ. ದುಡಿಯೋದೇ ಖರ್ಚು ಮಾಡೋದಕ್ಕೆ ಎಂಬ ಮನಸ್ಥಿತಿ ಬಹುತೇಕರಲ್ಲಿದೆ. ನೋಡಿದ್ದೆಲ್ಲ ಖರೀದಿಸುವ ಅಭ್ಯಾಸವೂ ಹೆಚ್ಚಿದೆ. ಖರ್ಚು ಮಾಡಲು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಬೇಕಾದ ವಸ್ತುಗಳನ್ನು ಖರೀದಿಸುವ ಅವಕಾಶವಿರುವ ಕಾರಣ ಆಫರ್ ಗೆ ಮರುಳಾಗಿ ಖರೀದಿಸುವ ಮನೋಸ್ಥಿತಿ ಹೆಚ್ಚಿದೆ ಎಂದೇ ಹೇಳಬಹುದು. ಹೀಗಾಗಿ ಲಕ್ಷಗಟ್ಟಲೆ ಸಂಪಾದನೆ ಮಾಡಿದರೂ ಕೆಲವೊಮ್ಮೆ ತಿಂಗಳ ಕೊನೆಯಲ್ಲಿ ಜೇಬು, ಬ್ಯಾಂಕ್ ಖಾತೆ ಎಲ್ಲ ಖಾಲಿಯಾಗಿ ಕ್ರೆಡಿಟ್ ಕಾರ್ಡ್ ಮೊರೆ ಹೋಗುವಂತಹ ಪರಿಸ್ಥಿತಿ ಕೆಲವರದ್ದು. ಹಾಗಾದ್ರೆ ನಮ್ಮ ಹಣಕಾಸಿನ ಆರೋಗ್ಯ ಉತ್ತಮವಾಗಿದೆಯೋ ಇಲ್ಲವೋ? ಎಂಬುದನ್ನು ಪರಿಶೀಲಿಸೋದು ಹೇಗೆ? ನಮ್ಮ ಹಣಕಾಸಿನ ಸ್ಥಿತಿ ಉತ್ತಮ ಟ್ರ್ಯಾಕ್ ನಲ್ಲಿದೆ ಎಂಬುದನ್ನು ಸೂಚಿಸುವ ಅಂಶಗಳು ಯಾವುವು? ಇಲ್ಲಿದೆ ಮಾಹಿತಿ.
ಆದಾಯದ ನಿರಂತರ ಹರಿವು
ನಿಮ್ಮ ಆದಾಯದ ಹರಿವು ನಿರಂತರವಾಗಿದ್ದು, ತಿಂಗಳಿಗೆ ಎಷ್ಟು ಗಳಿಕೆ ಮಾಡುತ್ತಿದ್ದೀರಿ ಎಂಬ ಲೆಕ್ಕಚಾರ ನಿಮಗಿದ್ದು, ಅದಕ್ಕೆ ಅನುಗುಣವಾಗಿ ವೆಚ್ಚ ಮಾಡುತ್ತಿದ್ದರೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಎಂದೇ ಅರ್ಥ. ನಿಮ್ಮ ಆರ್ಥಿಕ ಇತಿಮಿತಿಗಳ ಅರಿವಿದ್ದು, ಅದಕ್ಕೆ ಅನುಗುಣವಾಗಿ ವೆಚ್ಚ ಮಾಡುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದೇ ಅರ್ಥ.
ಎಟಿಎಂ ದೈನಂದಿನ ವಹಿವಾಟು ಮಿತಿ ಹೆಚ್ಚಿಸಿದ ಕೆನರಾ ಬ್ಯಾಂಕ್; ಡೆಬಿಟ್ ಕಾರ್ಡ್ ಬಳಕೆ ಮಿತಿ ಎಷ್ಟು?
ಸಮರ್ಪಕ ಯೋಜನೆಗಳಲ್ಲಿ ಹೂಡಿಕೆ
ಗಳಿಸಿದ ಹಣವನ್ನು ಖರ್ಚು ಮಾಡಿದ್ರೆ ಸಾಕಾ? ಭವಿಷ್ಯಕ್ಕಾಗಿ ಕೂಡಿಡೋದು ಕೂಡ ಅಗತ್ಯ ಅಲ್ಲವೆ? ನೀವು ಕೂಡ ಭವಿಷ್ಯದ ಹಿತದೃಷ್ಟಿಯಿಂದ ಅಥವಾ ನಿವೃತ್ತಿ ನಂತರದ ಬದುಕಿಗಾಗಿ ಒಂದಿಷ್ಟು ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ ನೀವು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೀರಿ ಎಂದರ್ಥ. ಪಿಪಿಎಫ್ (PPF), ಎನ್ ಪಿಎಸ್ (NPS), ಎನ್ ಎಸ್ ಸಿ (NSC) ಮುಂತಾದ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ರೆ ಹಣಕಾಸಿನ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಂಡಿದ್ದೀರಿ ಎಂದೇ ಅರ್ಥ.
ಸರಿಯಾದ ಹಂಚಿಕೆ
ದುಡಿದ ಹಣವನ್ನು ಸರಿಯಾಗಿ ಹಂಚಿಕೆ ಮಾಡೋದು ಅತ್ಯಗತ್ಯ. ತಿಂಗಳ ಖರ್ಚು-ವೆಚ್ಚ, ಮನೆ ಬಾಡಿಗೆ ಅಥವಾ ಇಎಂಐ, ಉಳಿತಾಯ ಅಥವಾ ಹೂಡಿಕೆ, ತುರ್ತು ನಿಧಿ ಹೀಗೆ ಹಣವನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಅಭ್ಯಾಸ ನಿಮಗಿದ್ರೆ ನೀವು ಹಣಕಾಸಿನ ವಿಚಾರದಲ್ಲಿ ಸೇಫ್ ಝೋನ್ ನಲ್ಲಿದ್ದೀರಿ ಎಂದೇ ಅರ್ಥ.
ಕ್ರೆಡಿಟ್ ಕಾರ್ಡ್ ಸಾಲವಿಲ್ಲ
ಬಹುತೇಕರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಆದ್ರೆ ಅದನ್ನು ಸಮರ್ಪಕವಾಗಿ ಬಳಸುವ ವಿಧಾನ ಗೊತ್ತಿರಬೇಕು. ಕ್ರೆಡಿಟ್ ಕಾರ್ಡ್ ಇದೆ ಎಂದು ನೋಡಿದ್ದೆಲ್ಲ ಖರೀದಿಸುವ ಮನೋಸ್ಥಿತಿ ಬೆಳೆಸಿಕೊಂಡ್ರೆ ಸಾಲ ಬೆಳೆಯುತ್ತದೆ. ನೀವು ಕ್ರೆಡಿಟ್ ಕಾರ್ಡ್ ಸಾಲದಿಂದ ದೂರವಿರುವಲ್ಲಿ ಯಶಸ್ವಿಯಾಗಿದ್ದೀರಿ ಎಂದಾದ್ರೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಎಂದೇ ಅರ್ಥ.
Business Ideas : ರೇಷನ್ ಅಂಗಡಿ ಶುರು ಮಾಡೋದು ಹೇಗೆ ಗೊತ್ತಾ?
ಸಮಯಕ್ಕೆ ಸರಿಯಾಗಿ ಗೃಹಸಾಲದ ಇಎಂಐ ಪಾವತಿ
ಪ್ರತಿ ತಿಂಗಳು ಗೃಹಸಾಲದ ಇಎಂಐಯನ್ನು ಪಾವತಿಸಲು ನಿಮಗೆ ಯಾವುದೇ ಹಣಕಾಸಿ ಅಡಚಣೆ ಉಂಟಾಗದಿದ್ರೆ ನಿಮ್ಮ ಹಣಕಾಸಿನ ಸ್ಥಿತಿ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಇಎಂಐ ಪಾವತಿ ಮಾಡೋದ್ರಿಂದ ನಿಮ್ಮ ಅಗತ್ಯ ಖರ್ಚು-ವೆಚ್ಚಗಳ ಮೇಲೆ ಯಾವುದೇ ಪರಿಣಾಮ ಉಂಟಾಗುತ್ತಿಲ್ಲ ಎಂದಾದ್ರೆ ನೀವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೀರಿ ಎಂದೇ ಅರ್ಥ.