ರಾಜ್ಯದಲ್ಲಿ ಹೊಸ ಆಲ್ಕೋಹಾಲ್‌ ಇನ್‌ ಬೇವರೇಜ್‌ (ಎಐಬಿ) ಪದ್ಧತಿಯಿಂದ ಬಿಯರ್‌ ಬೆಲೆ ಗಣನೀಯವಾಗಿ ಇಳಿದಿದೆ. ಆದರೆ, ಕೆಲವು ಅಂಗಡಿಗಳು ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದು, ಹೆಚ್ಚಿದ ಬೇಡಿಕೆಯಿಂದಾಗಿ ಜನಪ್ರಿಯ ಬ್ರ್ಯಾಂಡ್‌ಗಳ ಬಿಯರ್‌ ಸ್ಟಾಕ್ ಕೊರತೆ ಎದುರಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು: ರಾಜ್ಯದಲ್ಲಿ ಆಲ್ಕೋಹಾಲ್‌ ಇನ್‌ ಬೇವರೇಜ್‌(ಎಐಬಿ) ಪದ್ಧತಿ ಜಾರಿಯಾಗಿ 20 ದಿನವಾದರೂ ಇನ್ನೂ ಕೆಲವೆಡೆ ಮೊದಲಿನ ದುಬಾರಿ ದರಕ್ಕೇ ಬಿಯರ್‌ ಮಾರಾಟ ಮಾಡಲಾಗುತ್ತಿದೆ. ಮತ್ತೊಂದೆಡೆ, ಬಿಯರ್‌ ಅಗ್ಗವಾಗಿರುವುದರಿಂದ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಮದ್ಯದಂಗಡಿಗಳಿಗೆ ಬೇಡಿಕೆಗೆ ತಕ್ಕಂತೆ ‘ಸ್ಟಾಕ್‌’ ಪೂರೈಕೆಯಾಗುತ್ತಿಲ್ಲ.

ರಾಜ್ಯದಲ್ಲಿ ಹಲವು ದಶಕದಿಂದ ಬಲ್ಕ್‌ ಲೀಟರ್‌ ಆಧಾರಿತ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ಮೇ 11ರಿಂದ ದೇಶದಲ್ಲೇ ಮೊದಲ ಬಾರಿ ಮದ್ಯದಲ್ಲಿನ ಆಲ್ಕೋಹಾಲ್‌ ಅಂಶ ಆಧರಿಸಿದ ಎಐಬಿ ಪದ್ಧತಿ ಜಾರಿಯಾಗಿದೆ. ಇದರಿಂದಾಗಿ ಬಿಯರ್‌ಗಳ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮಾಮೂಲಿಗಿಂತ ಎರಡ್ಮೂರು ಪಟ್ಟು ಮಾರಾಟವಾಗುತ್ತಿವೆ. ಆದರೆ ಮದ್ಯದಂಗಡಿಗಳ ಬೇಡಿಕೆಗೆ ತಕ್ಕಂತೆ ಸ್ಟಾಕ್‌ ಸರಬರಾಜಾಗುತ್ತಿಲ್ಲ.

ಹೊಸ ಎಐಬಿ ಪದ್ಧತಿಯಲ್ಲಿ ಬಿಯರ್‌ ಮತ್ತು ಕೆಲ ಪ್ರೀಮಿಯಂ ಮದ್ಯಗಳ ಬೆಲೆ ಇಳಿಕೆಯಾಗಿದ್ದರೂ ಇನ್ನೂ ಕೆಲವೆಡೆ ಹಳೆಯ ದುಬಾರಿ ದರಕ್ಕೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಇದನ್ನು ಪ್ರಶ್ನಿಸಿದರೆ, ನಮ್ಮಲ್ಲಿ ಇನ್ನೂ ಹಳೆಯ ಸ್ಟಾಕ್ ಇದೆ ಎಂದು ಸಬೂಬು ಹೇಳಲಾಗುತ್ತಿದೆ. ಎಲ್ಲಾ ಬ್ರ್ಯಾಂಡ್‌ಗಳ ಹೊಸ ದರದ ಲೇಬಲ್‌ಗಳನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಳವಡಿಸದಿರುವುದು ಇದಕ್ಕೆ ಕಾರಣ.

ಆದರೆ ಮದ್ಯದಂಗಡಿಗಳಿಗೆ ಮಾತ್ರ ಹೊಸ ದರದಂತೆ ಕಡಿಮೆ ಬೆಲೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮವು (ಕೆಎಸ್‌ಬಿಸಿಎಲ್‌) ಮದ್ಯ ಸರಬರಾಜು ಮಾಡುತ್ತಿದೆ. ಇದನ್ನು ಮುಚ್ಚಿಡುತ್ತಿರುವ ಕೆಲ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ವೈನ್ ಸ್ಟೋರ್‌ನವರು ಹಳೆಯ ಲೇಬಲ್‌ ತೋರಿಸಿ ಅಧಿಕ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಕಿಂಗ್‌ ಫಿಶರ್‌ಗೆ ಭಾರೀ ಡಿಮ್ಯಾಂಡ್‌

ಕಿಂಗ್‌ ಫಿಶರ್‌ ಬಿಯರ್‌ ದರ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಬಹಳಷ್ಟು ಬೇಡಿಕೆ ಉಂಟಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್‌ ಸರಬರಾಜು ಆಗುತ್ತಿಲ್ಲ. 650 ಎಂಎಲ್‌ನ ಕಿಂಗ್‌ಫಿಶರ್‌ ಪ್ರೀಮಿಯಂ ಬೆಲೆ 185 ರಿಂದ 110 ಕ್ಕೆ ಇಳಿಕೆಯಾಗಿದೆ. ಪಿಂಟ್‌ 125 ರಿಂದ 60, ಅರ್ಧ ಲೀಟರ್‌ ಟಿನ್‌ 145 ರಿಂದ 80, 350 ಎಂಎಲ್‌ನ ಟಿನ್‌ 100 ರಿಂದ 60 ರು.ಗೆ ಇಳಿಕೆಯಾಗಿರುವುದು ಭಾರೀ ಬೇಡಿಕೆ ಸೃಷ್ಟಿಗೆ ಕಾರಣವಾಗಿದೆ.

ಶುಲ್ಕ ಹೆಚ್ಚಳ ವಿರೋಧಿಸಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಕೆ

ಶುಭ ಕಾರ್ಯಗಳ ಸಂದರ್ಭದಲ್ಲಿ ಮನೆ ಅಥವಾ ಖಾಸಗಿ ಸ್ಥಳಗಳಲ್ಲಿ ಆಯೋಜಿಸುವ ಪಾರ್ಟಿಗೆ ಪಡೆಯುವ ತಾತ್ಕಾಲಿಕ ಮದ್ಯದ ಪರ್ಮಿಟ್‌(ಸಿಎಲ್‌ 5) ಶುಲ್ಕ ದುಪ್ಪಟ್ಟು ಮಾಡಿರುವುದನ್ನು ವಿರೋಧಿಸಿ ಸೋಮವಾರ ಮದ್ಯ ಮಾರಾಟಗಾರರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಫೆಡರೇಶನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ ಕರ್ನಾಟಕ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ, ‘ಸಿಎಲ್‌ 5 ಲೈಸೆನ್ಸ್‌ ಪಡೆಯಲು ಇದ್ದ ಶುಲ್ಕವನ್ನು ಸರ್ಕಾರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದನ್ನು ವಿರೋಧಿಸಿ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗೆ ಸಂಘದಿಂದ ಸೋಮವಾರ ಆಕ್ಷೇಪಣೆ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದರು.

Scroll to load tweet…