ಸ್ವಾತಂತ್ರ್ಯದ ಅಮೃತ ಮಹೋತ್ಸವದ ಖುಷಿ ಹೆಚ್ಚಿಸಿದ ಸಾಧನೆ ಇದು; ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂ.1
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಖುಷಿ ಹೆಚ್ಚಿಸಿದ ಸಾಧನೆಗಳು ಅನೇಕ. ಅವುಗಳಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ನಂ.1ಸ್ಥಾನ ಗಳಿಸಿರೋದು ಕೂಡ ಸೇರಿದೆ. ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಭಾರತದ ಸಾಧನೆ ಅಮೋಘ.
ನವದೆಹಲಿ (ಆ16): ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಹೆಮ್ಮೆ ಪಡಲು ಅನೇಕ ಸಂಗತಿಗಳಿವೆ. ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ ಭಾರತ ಅನೇಕ ಕ್ಷೇತ್ರಗಳಲ್ಲಿ ಮೈಲುಗಲ್ಲು ಸಾಧಿಸಿದೆ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆ ಅತ್ಯಂತ ಕೆಳ ಮಟ್ಟದಲ್ಲಿತ್ತು. ಆದರೆ, ಈಗ 75 ವರ್ಷಗಳ ಬಳಿಕ ಭಾರತ ಹಾಲಿನ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆ. ಜಾಗತಿಕ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇ.23ರಷ್ಟು ಪಾಲು ಭಾರತದ್ದಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹಾಲು ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದೆ. ಹಾಲಿನ ಉತ್ಪಾದನೆ 1950-51ರಲ್ಲಿ 17 ಎಂಟಿಯಿಂದ (MT) 2020-21ರಲ್ಲಿ 209.96 ಎಂಟಿಗೆ (MT) ಏರಿಕೆಯಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಹಾಲಿನ ಲಭ್ಯತೆ 1950-51ರಲ್ಲಿ130 ಗ್ರಾಂ ಇದ್ದು, 2020-2021ರಲ್ಲಿ 427ಗ್ರಾಂಗೆ ಹೆಚ್ಚಳವಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ 305 ಕೋಟಿ ರೂ. ಮೊತ್ತದ ಸಬರ್ಕಾಂತ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಲಿ. ಉದ್ಘಾಟಿಸಿದ್ದರು. ಇದನ್ನು ಸಬರ್ ಡೈರಿ ಎಂದು ಕೂಡ ಕರೆಯಲಾಗುತ್ತದೆ. ಇದು ಗುಜರಾತ್ ಹಾಲು ಉತ್ಪಾದಕರ ಸಹಕಾರಿ ಮಾರಾಟ ಮಂಡಳಿ ಲಿ. (GCMMF) ಭಾಗವಾಗಿದ್ದು, ಇದು ಅನೇಕ ವಿಧದ ಡೈರಿ ಹಾಗೂ ಹಾಲಿನ ಉತ್ಪನ್ನಗಳನ್ನು ಅಮೂಲ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ.
ಮೀನು, ಮೊಟ್ಟೆ ಉತ್ಪಾದನೆಯಲ್ಲಿ ಕೂಡ ದೇಶದಲ್ಲಿ ಪ್ರಗತಿ ಕಂಡುಬಂದಿದೆ. 1950-51ರಲ್ಲಿ ದೇಶದಲ್ಲಿ 1832 ಮಿಲಿಯನ್ ಮೊಟ್ಟೆಗಳು ಉತ್ಪಾದನೆಯಾಗಿದ್ರೆ, 2019-20ರಲ್ಲಿ ಇದು 1,14,383 ಮಿಲಿಯನ್ ಗೆ ಏರಿಕೆಯಾಗಿದೆ. ಮೀನು (Fish) ಉತ್ಪಾದನೆ (Production) ಕೂಡ 1950-51ರಲ್ಲಿ 752 ಸಾವಿರ ಟನ್ ಗಳಷ್ಟಿದ್ದು, 2019-20ರಲ್ಲಿ 14070 ಸಾವಿರ ಟನ್ ಗಳಿಗೆ ಏರಿಕೆಯಾಗಿದೆ.
ಭಾರತ ವಾರ್ಷಿಕ 8.5 ಲಕ್ಷ ಕೋಟಿ ರೂ. ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ. ಇಷ್ಟು ದೊಡ್ಡ ಮೊತ್ತ ಅಕ್ಕಿ ಹಾಗೂ ಗೋಧಿ ವಹಿವಾಟಿನಿಂದ ಕೂಡ ಸಿಗೋದಿಲ್ಲ ಎಂದು ಕೆಲವು ಸಮಯದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಲು ಉತ್ಪಾದಕರ ಒಕ್ಕೂಟಗಳು ಭಾರತದಲ್ಲಿ ಕ್ಷೀರ ಕ್ರಾಂತಿ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗ್ರಾಮೀಣ ಭಾಗದ ಸಣ್ಣ ರೈತರಿಗೆ ಹೈನುಗಾರಿಕೆ ಇಂದು ಆದಾಯದ ಪ್ರಮುಖ ಮೂಲವಾಗಿದೆ ಕೂಡ.
Milk Price Hike: ಅಮುಲ್, ಮದರ್ ಡೈರಿ ಹಾಲಿನ ದರ ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ
ಆಪರೇಷನ್ ಫ್ಲಡ್ ಕಾರ್ಯಕ್ರಮ
ಆಪರೇಷನ್ ಫ್ಲಡ್ (Operation Flood) ಕಾರ್ಯಕ್ರಮ ದೇಶಾದ್ಯಂತ 1970ರಲ್ಲಿ ಪ್ರಾರಂಭಗೊಂಡಿತು. ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ ನೂರಾರು ಹಾಲಿನ ಒಕ್ಕೂಟಗಳು ಸ್ಥಾಪನೆಗೊಂಡವು. ಈ ಸಂಘಟನೆಗಳು ಹೈನುಗಾರರು ಹಾಗೂ ಗ್ರಾಹಕರ ನಡುವಿನ ನೇರ ವಹಿವಾಟವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಿವೆ. ಈ ಕಾರ್ಯಕ್ರಮದಡಿಯಲ್ಲೇ ಆಯಾ ರಾಜ್ಯಗಳ ಹಾಲು ಉತ್ಪಾದಕರ ಒಕ್ಕೂಟಗಳು ಹುಟ್ಟಿಕೊಂಡವು. ಒಟ್ಟಾರೆ ದೇಶಾದ್ಯಂತ ಶ್ವೇತ ಕ್ರಾಂತಿಗೆ ನಾಂದಿ ಹಾಡಿದ್ದು ಅಮುಲ್ (Amul) ಸಂಸ್ಥೆ.ಭಾರತದ ಕ್ಷೀರ ಕ್ರಾಂತಿ ಹರಿಕಾರ ವರ್ಗೀಸ್ ಕುರಿಯನ್ ಗುಜರಾತ್ ಕೈರಾ ಜಿಲ್ಲೆಯ ಆನಂದ್ ನಲ್ಲಿ ಹೈನುಗಾರರನ್ನುಒಗ್ಗೂಡಿಸಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿದರು. ಮುಂದೆ ಇದು ʼಅಮುಲ್ʼ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನೊಂದಿಗೆ ಭಾರತದ ಮನೆಮಾತಾಗಿದ್ದುಇತಿಹಾಸ.
Business Idea : ಮೂರು ಲಕ್ಷ ಹೂಡಿಕೆ ಮಾಡಿ, ಪ್ರತಿ ತಿಂಗಳು 60 ಸಾವಿರ ಗಳಿಸಿ
ಹಾಲಿನ ದರ ಕೂಡ ಇತ್ತೀಚಿನ ದಿನಗಳಲ್ಲಿ ಏರಿಕೆ ಕಾಣುತ್ತಿದೆ. ಖಾಸಗಿ ಹಾಗೂ ಸಹಕಾರಿ ಒಕ್ಕೂಟಗಳು ಉತ್ಪಾದನಾ ವೆಚ್ಚದ ಏರಿಕೆ ಹಿನ್ನೆಲೆಯಲ್ಲಿ ಹಾಲಿನ ದರ ಕೂಡ ಹೆಚ್ಚಿಸಿವೆ. ಹಸುಗಳಿಗೆ ನೀಡುವ ಕ್ಯಾಟಲ್ ಫೀಡ್ ಬೆಲೆ ಕೂಡ ಏರಿಕೆಯಾಗಿರೋದ್ರಿಂದ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ.