ಹೊಸಪೇಟೆಯಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತನ ಸಹಾಯ ಪಡೆದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಖದೀಮನು ಎಟಿಎಂ ಕಾರ್ಡ್ ಬದಲಾಯಿಸಿ, ಬೇರೆಡೆ ಹಂತ ಹಂತವಾಗಿ 1.27 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾನೆ. 

ವಿಜಯನಗರ(ಮಾ.25): ಮೊದಲ ಬಾರಿ ಎಟಿಎಂ ಬಳಸುವ ಯುವಕರು, ಎಟಿಎಂ ಬಳಕೆ ಗೊತ್ತಿಲ್ಲದ ಹಿರಿಯರು ಇನ್ಮುಂದೆ 'ಹಣ ಡ್ರಾ ಮಾಡ್ಕೊಡಪ್ಪ' ಅಂತಾ ಎಟಿಎಂನಲ್ಲಿ ಗೊತ್ತು ಗುರಿಯಿಲ್ಲದವರ ಬಳಿ ಸಹಾಯ ಕೇಳುವ ಮುನ್ನ ಎಚ್ಚರ. ಗೊತ್ತಿಲ್ಲದೇ ಅಪರಿಚಿತ ವ್ಯಕ್ತಿ ಕೈಗೆ ಎಟಿಎಂ ಕಾರ್ಡ್ ಕೊಟ್ಟರೇ ಮುಗಿತು ಕಥೆ.. ಯಾಕೆಂದರೆ ಇದನ್ನೇ ಬಂಡಾವಳ ಮಾಡಿಕೊಂಡಿರುವ ಖದೀಮರು ಎಟಿಎಂ ಸುತ್ತಮುತ್ತಲೇ ಬೀಡುಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಸಹಾಯ ಮಾಡುವವನಂತೆ ಬಂದ ಖದೀಮ!

ಎಟಿಎಂಗೆ ಹಣ ಡ್ರಾ ಮಾಡಿಕೊಳ್ಳಲು ಬರುವ ಅನಕ್ಷರಸ್ಥರು, ಬ್ಯಾಂಕಿಂಗ್, ಎಟಿಎಂ ಬಳಕೆ ಬಗ್ಗೆ ಗೊತ್ತಿಲ್ಲದ ಜನರೇ ಈ ಖದೀಮರ ಟಾರ್ಗೆಟ್. ಎಟಿಎಂ ಆಗಲಿ, ಓಟಿಪಿ ಆಗಲಿ ಯಾರಿಗೂ ಕೊಡಬಾರದು, ಶೇರ್ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ನೋಡಿ ಅಪರಿಚಿತನಿಗೆ ಎಟಿಎಂ ಕೊಟ್ಟು ಹಣ ಡ್ರಾ ಮಾಡಿಕೊಡಲು ಹೇಳಿ ಎಟಿಎಂ ಕಾರ್ಡ್ ಕೊಟ್ಟಿದ್ದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ..!

ಉಮೇಶ್ ಗೌಡ ಎಂಬುವವರು ಹಣ ವಿತ್‌ಡ್ರಾ ಮಾಡಿಕೊಳ್ಳಲು ಹೊಸಪೇಟೆ ಬಸ್‌ ನಿಲ್ದಾಣದ ಮುಂದೆ ಇರೋ ಕೆನರಾ ಬ್ಯಾಂಕ್‌ ಎಟಿಎಂಗೆ ಹೋಗಿದ್ದಾರೆ. ಮೊದಲಿಗೆ 9 ಸಾವಿರ ಹಣ ವಿತ್ ಡ್ರಾ ಮಾಡಿದ್ದಾರೆ. ಮತ್ತೊಮ್ಮೆ 9 ಸಾವಿರ ಮಾಡಲು ಹೋದಾಗ ಟೆಕ್ನಿಕಲ್ ಸಮಸ್ಯೆಯಿಂದ ಹಣ ಬಂದಿಲ್ಲ. ಇದೇ ವೇಳೆ ಅಪರಿಚಿತ ಯುವಕ ಹಿಂದೆ ಬಂದು ನಿಂತಿದ್ದಾನೆ. 'ಎಟಿಎಂ ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ' ಎಂದು ನಂಬಿಸಿದ್ದಾನೆ. ಇದನ್ನ ನಂಬಿದ ಉಮೇಶ್ ಗೌಡ, ಎಟಿಎಂ ಕಾರ್ಡ್ ಕೊಟ್ಟಿದ್ದಾನೆ.

ಎಟಿಎಂ ಕಾರ್ಡ್‌ ಪಡೆದು ಅದನ್ನ ಮಷಿನ್ ಒಳಗೆ ಹಾಕಿದಂತೆ ನಟಿಸಿ ಹಣ ಬರುತ್ತಿಲ್ಲ ಎಂದು ಹೇಳಿದ್ದಾನೆ. ಆದರೆ ಖತರ್ನಾಕ್ ಖದೀಮ ಎಟಿಎಂ ಕಾರ್ಡ್ ವಾಪಸ್ ಕೊಡುವಾಗ ಬೇರೆ ಯಾವುದೋ ಕಾರ್ಡ್ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಇದೇ ಎಟಿಎಂ ಮುಂದೆ ನಿಂತ ವೇಳೆಯೇ ಅಪರಿಚಿತ ಯುವಕ ಬೇರೆ ಕಡೆ ಎಟಿಎಂಗೆ ಹೋಗಿ ಹಂತ ಹಂತವಾಗಿ 1 ಲಕ್ಷದ 27 ಸಾವಿರ ರೂಪಾಯಿ ಹಣ ವಿತ್ ಡ್ರಾ ಮಾಡಿದ್ದಾನೆ. ಆದರೆ ಎಟಿಎಂ ಡ್ರಾ ಮಾಡಿದಾಗ ಬ್ಯಾಂಕ್‌ ಅಕೌಂಟ್‌ಗೆ ಸೇರಿಸಿರುವ ಮೊಬೈಲ್ ನಂಬರ್‌ಗೆ ಹಂತ ಹಂತವಾಗಿ ಹಣ ಡ್ರಾ ಆಗಿರುವ ಬಗ್ಗೆ ಮಸೇಜ್‌ಗಳು ಬಂದಿವೆ. ಇದನ್ನ ನೋಡಿದ ಉಮೇಶ್ ಗೌಡ ಗಾಬರಿಯಾಗಿದ್ದಾನೆ. ತಕ್ಷಣ ಬ್ಯಾಂಕ್ ಗಮನಕ್ಕೆ ತಂದಿದ್ದಾನೆ. ಸದ್ಯ ಈ ಪ್ರಕರಣ ಬಗ್ಗೆ ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು. ಸಿಸಿ ಕ್ಯಾಮೆರಾಗಳ ಆಧರಿಸಿ ಆರೋಪಿಯನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.