ವಿಶ್ವಸಂಸ್ಥೆ(ಅ.08): ಇತ್ತಿಚೀಗಷ್ಟೇ ಸಾಮಾನ್ಯ ಸಭೆ ನಡೆಸಿ ಸುಸ್ತಾಗಿರುವ ವಿಶ್ವಸಂಸ್ಥೆ, ಇದೀಗ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ವಿಶ್ವ ಶಾಂತಿಗಾಗಿ ಹುಟ್ಟಿಕೊಂಡಿರುವ ವಿಶ್ವಸಂಸ್ಥೆ ಬರೋಬ್ಬರಿ 230 ಮಿಲಿಯನ್ ಡಾಲರ್ ಹಣದ ಕೊರತೆ ಎದುರಿಸುತ್ತಿದೆ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್, ಅಕ್ಟೋಬರ್ ಅಂತ್ಯದ ವೇಳೆಗೆ ಖರ್ಚಿಗೆ ಹಣವಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಯುಎನ್ ಸೆಕ್ರೆಟರಿಯೇಟ್’ನ 37,000 ಉದ್ಯೋಗಿಗಳನ್ನು ಉದ್ದೇಶಿಸಿ ಗುಟೆರೆಸ್ ಪತ್ರ ಬರೆದಿದ್ದು, ವೇತನ ಮತ್ತು ಭತ್ಯೆಗಳ ಪಾವತಿಗಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಸದಸ್ಯ ರಾಷ್ಟ್ರಗಳು 2019 ರಲ್ಲಿ ನಿಯಮಿತ ಬಜೆಟ್ ಕಾರ್ಯಾಚರಣೆಗಳಿಗೆ ಬೇಕಾದ ಒಟ್ಟು ಮೊತ್ತದ ಶೇ. 70 ರಷ್ಟು ಮಾತ್ರ ಪಾವತಿಸಿದ್ದು,  ಅಕ್ಟೋಬರ್ ಅಂತ್ಯದ ನಗದು ಕೊರತೆಯಾಗಲಿದೆ ಎಂದು ಗುಟೆರೆಸ್ ಸ್ಪಷ್ಟಪಡಿಸಿದ್ದಾರೆ. 

ಈ ಕೂಡಲೇ ವೆಚ್ಚ ಕಡಿತದ ಕ್ರಮ ಅನುಸರಿಸುವಂತೆ ಆದೇಶಿಸಿರುವ ಗುಟೆರೆಸ್, ಸಭೆ, ಸಮಾವೇಶಗಳನ್ನು ಮುಂದೂಡುವಂತೆ ಸಂದೇಶ ರವಾನಿಸಿದ್ದಾರೆ. 

ಅಧಿಕಾರಿಗಳ ಪ್ರಯಾಣದ ಮೇಲೆ ನಿರ್ಬಂಧ ಹೇರುವುದಕ್ಕೆ ತೀರ್ಮಾನಿಸಿರುವ ಗುಟೆರೆಸ್, ವಿದ್ಯುತ್ ಉಳಿತಾಯಕ್ಕೆ ಮನವಿ ಮಾಡಿದ್ದಾರೆ. ನಮ್ಮ ಆರ್ಥಿಕ ಆರೋಗ್ಯದ ಕುರಿತು ಅಂತಿಮ ಜವಾಬ್ದಾರಿ ಸದಸ್ಯ ರಾಷ್ಟ್ರಗಳದ್ದಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.