ವಿಶ್ವಸಂಸ್ಥೆಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ!
ವಿಶ್ವಸಂಸ್ಥೆಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ| ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್| ವಿಶ್ವ ನಾಯಕರ ಉಪಸ್ಥತಿಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಮೋದಿ| ಮಹಾತ್ಮಾ ಗಾಂಧೀಜಿಯವರ ವಿಶ್ವಸಂಸ್ಥೆ ಅಂಚೆ ಚೀಟಿ ಬಿಡುಗಡೆ| ಕ್ಯಾಂಪಸ್ ಸ್ಟೇಟ್ ವಿವಿಯಲ್ಲಿ ಪ್ರಧಾನಿ ಮೋದಿ ಅವರಿಂದ ಗಾಂಧಿ ಶಾಂತಿ ಉದ್ಯಾನವನ ಉದ್ಘಾಟನೆ|
ವಿಶ್ವಸಂಸ್ಥೆ(ಸೆ.25): ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಲಾಗಿದ್ದು, ಗಾಂಧೀಜಿಯವರ ಆಲೋಚನೆಗಳು ಮತ್ತು ಮೌಲ್ಯಗಳ ಪ್ರತಿಬಿಂಬವಾಗಿ ಈ ಪಾರ್ಕ್ ಕೆಲಸ ಮಾಡಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆಯಲ್ಲಿ ನಡೆದ ಸಮಕಾಲೀನ ಜಗತ್ತಿನಲ್ಲಿ ಮಹಾತ್ಮಾ ಗಾಂಧಿಯವರ ಪ್ರಸ್ತುತತೆ ಕುರಿತು ಮಾತನಾಡಿದ ಪ್ರಧಾನಿ, ಗಾಂಧಿಜೀ ಭಾರತೀಯರಾಗಿದ್ದರೂ ಅವರು ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ವಿಶ್ವಸಂಸ್ಥೆ ಅಂಚೆ ಚೀಟಿಯನ್ನು ವಿಶ್ವ ನಾಯಕರು ಬಿಡುಗಡೆ ಮಾಡಿದರು. ಇಂದು ಓಲ್ಡ್ ವೆಸ್ಟ್ ಬುರಿಯಲ್ಲಿರುವ ನ್ಯೂಯಾರ್ಕ್ ಕ್ಯಾಂಪಸ್ ಸ್ಟೇಟ್ ವಿವಿಯಲ್ಲಿ ಪ್ರಧಾನಿ ಮೋದಿ ಗಾಂಧಿ ಶಾಂತಿ ಉದ್ಯಾನವನ ಉದ್ಘಾಟಿಸಲಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ 150 ಗಿಡಗಳನ್ನು ಇಲ್ಲಿ ನೆಡಲಾಗಿದೆ.