ಈ ಹಿಂದೆ ಚೀನಾ ಆಟಿಕೆಗಳು ಹಾಗೂ ಆ್ಯಪ್‌ಗಳ ಮೇಲೆ ನಿರ್ಬಂಧ/ಕಟ್ಟಳೆಗಳನ್ನು ಹೇರಿದ್ದ ಕೇಂದ್ರ ಸರ್ಕಾರ ಈಗ ಚೀನಾ ಮೇಲೆ ಮತ್ತೊಂದು ಪ್ರಹಾರ ಮಾಡಿದೆ. ಚೀನಾ, ಕೊರಿಯಾ ಸೇರಿ ಹಲವು ವಿದೇಶಗಳಿಂದ ಬರುವ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್‌ ವಸ್ತುಗಳ ಆಮದಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ಹೇರಿದೆ.

ನವದೆಹಲಿ: ಈ ಹಿಂದೆ ಚೀನಾ ಆಟಿಕೆಗಳು ಹಾಗೂ ಆ್ಯಪ್‌ಗಳ ಮೇಲೆ ನಿರ್ಬಂಧ/ಕಟ್ಟಳೆಗಳನ್ನು ಹೇರಿದ್ದ ಕೇಂದ್ರ ಸರ್ಕಾರ ಈಗ ಚೀನಾ ಮೇಲೆ ಮತ್ತೊಂದು ಪ್ರಹಾರ ಮಾಡಿದೆ. ಚೀನಾ, ಕೊರಿಯಾ ಸೇರಿ ಹಲವು ವಿದೇಶಗಳಿಂದ ಬರುವ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್‌ ವಸ್ತುಗಳ ಆಮದಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ಹೇರಿದೆ. ದೇಶೀಯವಾಗಿ ಈ ವಸ್ತುಗಳ ಉತ್ಪಾದನೆ ಹೆಚ್ಚಿಸುವ ಮತ್ತು ಭಾರತಕ್ಕೆ ಗಡಿಯಲ್ಲಿ ಕೊಡಬಾರದ ಕಾಟ ಕೊಡುತ್ತಿರುವ ಚೀನಾಗೆ ಹೊಡೆತ ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ. ‘ಆತ್ಮನಿರ್ಭರ ಭಾರತ’ದ ಅಡಿಯಲ್ಲಿ ದೇಶದಲ್ಲೇ ಕಂಪ್ಯೂಟರ್‌ ಉತ್ಪನ್ನಗಳ ಉತ್ಪಾದನೆಗೆ ಸರ್ಕಾರವು ಉತ್ಪಾದನೆ ಆಧಾರಿತ ಸಹಾಯಧನ (ಪಿಎಲ್‌ಐ) ನೀಡುತ್ತಿದ್ದು, ಈ ಯೋಜನೆಗೆ ಮತ್ತಷ್ಟುಉತ್ತೇಜನ ಸಿಗಬೇಕಿದೆ. ಇದೇ ಕಾರಣಕ್ಕೆ ಚೀನಾದಿಂದ ಬರುವ ವಸ್ತುಗಳ ಮೇಲೆ ನಿರ್ಬಂಧ ಹೇರಿಕೆ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ. ಭಾರತದ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಆಮದಿನಲ್ಲಿ ಚೀನಾ ಪಾಲು ಶೇ.70ರಿಂದ 80 ರಷ್ಟಿದೆ. ಹೀಗಾಗಿ ಈಗ ಭಾರತ ಹೇರಿರುವ ನಿರ್ಬಂಧವು ಚೀನಾ ಮಾಡುವ ಕಂಪ್ಯೂಟರ್‌ ರಫ್ತಿಗೆ ಭಾರಿ ಪೆಟ್ಟು ನೀಡಲಿದೆ.

ಲೈಸೆನ್ಸ್‌ ಕಡ್ಡಾಯ:

ಆದರೆ ಇದು ಸಂಪೂರ್ಣ ನಿಷೇಧವಲ್ಲ. ನಿರ್ಬಂಧ ಮಾತ್ರ. ಅನಿವಾರ್ಯವಾಗಿ ಮೇಲ್ಕಂಡ ಯಾವುದೇ ವಸ್ತುಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಅಥವಾ ಲೈಸೆನ್ಸ್‌ ಪಡೆಯುವುದು ಕಡ್ಡಾಯ. ಅಲ್ಲದೆ, ಈ ನಿರ್ಬಂಧದ ಹೊರತಾಗಿಯೂ ಕೆಲವೊಂದು ವಿನಾಯ್ತಿಯನ್ನು ನೀಡಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಪ್ರಧಾನ ನಿರ್ದೇಶನಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ ಉತ್ತರಾಖಂಡದಿಂದ್ಲೇ ಪ್ರಯಾಣಿಸಿ!

ಯಾವುದಕ್ಕೆ ನಿರ್ಬಂಧ?:

ಆದೇಶದ ಅನ್ವಯ ಲ್ಯಾಪ್‌ಟಾಪ್‌ (Laptop), ಟ್ಯಾಬ್ಲೆಟ್‌, ಆಲ್‌ ಇನ್‌ ಒನ್‌ ಕಂಪ್ಯೂಟ​ರ್ಸ್, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳ ಆಮದಿನ ಮೇಲೆ ನಿರ್ಬಂಧ ಹೇರಲಾಗಿದೆ.

ಯಾವುದಕ್ಕೆ ವಿನಾಯ್ತಿ?:

ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ, ರಿಪೇರಿ ಮತ್ತು ವಾಪಸ್‌, ವಸ್ತುಗಳ ಉತ್ಪಾದನೆ ಉದ್ದೇಶಕ್ಕಾಗಿ 20 ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಒಂದು ಬಾರಿಯ ಸರ್ಕಾರ ವಿನಾಯ್ತಿ ನೀಡಲಾಗಿದೆ. ಅಲ್ಲದೆ ಬ್ಯಾಗೇಜ್‌ ನಿಯಮದ ಅನ್ವಯ ತರುವ ಉಪಕರಣಗಳಿಗೂ ವಿನಾಯ್ತಿ ಇದೆ.

ಸುಂಕ ಭಾರ:

ಇದರ ಜೊತೆಗೆ ಪೋಸ್ಟ್‌ ಅಥವಾ ಕೊರಿಯರ್‌ ಮೂಲಕ 1 ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆನ್‌ ಇನ್‌ ಒನ್‌ ಕಂಪ್ಯೂಟರ್‌, ಅಲ್ಟ್ರಾ ಸ್ಮಾಲ್‌ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಸೂಕ್ತ ಸುಂಕ (ಕಸ್ಟಮ್ಸ್‌) ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸುಂಕದ ಕಾರಣ ತನ್ನಿಂತಾನೇ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಆಮದಿಗೆ ತನ್ನಿಂತಾನೇ ಕಡಿವಾಣ ಬೀಳುತ್ತೆ ಎಂಬುದು ಸರ್ಕಾರದ ಲೆಕ್ಕಾಚಾರ.

ಬ್ರೂಸ್ಲಿ ಅಭಿಮಾನಿಯ ಅದ್ಬುತ ಕಥನ: ಚೀನಾ ಪಠ್ಯಪುಸ್ತಕದಲ್ಲಿ ಪಾಠವಾದ ಭಾರತೀಯ

ಚೀನಾಕ್ಕೆ ಹೊಡೆತ:

ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಶೇ.65ರಷ್ಟುವಸ್ತುಗಳು ಕೇವಲ ಮೂರು ಉತ್ಪನ್ನಗಳಿಗೆ ಸೀಮಿತವಾಗಿವೆ. ಅವುಗಳೆಂದರೆ ಎಲೆಕ್ಟ್ರಾನಿಕ್ಸ್‌, ಮಷಿನರಿ ಮತ್ತು ಆಗ್ರ್ಯಾನಿಕ್‌ ಕೆಮಿಕಲ್ಸ್‌, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ (LapTop), ಬಿಡಿಭಾಗಗಳು, ಸೋಲಾರ್‌ ಸೆಲ್‌ ಮಾಡ್ಯೂಲ್‌ ಮತ್ತು ಐಸಿ (IC) ಸೇರಿದಂತೆ ಕೆಲವಸ್ತುಗಳಿಗೆ ಭಾರತ ಪೂರ್ಣವಾಗಿ ಚೀನಾವನ್ನೇ ಅವಲಂಬಿಸಿದೆ. ಅದರಲ್ಲೂ ಭಾರತದ ಕಂಪ್ಯೂಟರ್‌ ಆಮದಿನಲ್ಲಿ ಚೀನಾ ಪಾಲು ಶೇ.70ರಿಂದ 80ರಷ್ಟಾಗಿದೆ. ಹೀಗಾಗಿ ಈ ವಸ್ತುಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಉತ್ಪಾದಕತೆ ಆಧರಿತ ಬೋನಸ್‌, ಎಲೆಕ್ಟ್ರಾನಿಕ್‌ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಭಾರತವು 2022-23ನೇ ಸಾಲಿನಲ್ಲಿ 43700 ಕೋಟಿ ರು. ಮೌಲ್ಯದ ಕಂಪ್ಯೂಟರ್‌ಗಳನ್ನು, 4500 ಕೋಟಿ ರು. ಮೌಲ್ಯದ ಡಾಟಾ ಪ್ರೊಸೆಸಿಂಗ್‌ ಮಷಿನ್‌ಗಳನ್ನು, ಸುಮಾರು 10 ಕೋಟಿ ರು. ಮೌಲ್ಯದ ಮೈಕ್ರೋ ಕಂಪ್ಯೂಟರ್‌/ ಪ್ರೊಸೆಸರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿತ್ತು.

ನಿರ್ಬಂಧ ಏಕೆ?

ಭಾರತದ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಆಮದಿನಲ್ಲಿ ಚೀನಾದ ಪಾಲು ಶೇ.70ರಿಂದ ಶೇ.80ರಷ್ಟಿದೆ. ದೇಶದಲ್ಲೇ ಇವುಗಳ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರದಿಂದ ನಿರ್ಬಂಧ.

ಯಾವುದಕ್ಕೆ ನಿರ್ಬಂಧ?

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್‌ ಇನ್‌ ಒನ್‌ ಕಂಪ್ಯೂಟ​ರ್‍ಸ್, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳು.

ಇದು ನಿಷೇಧ ಅಲ್ಲ

ಇದು ನಿರ್ಬಂಧ ಮಾತ್ರ. ನಿಷೇಧವಲ್ಲ. ಯಾರಾದರೂ ಕಂಪ್ಯೂಟರ್‌ ಆಮದು ಮಾಡಿಕೊಳ್ಳಲು ಅವಕಾಶವಿದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಜತೆಗೆ ಸುಂಕ ಪಾವತಿಸಬೇಕು.