ಬೆಳಗಾವಿ ಮೂಲದ ಅಂಥ್ರೋಪಿಕ್‌ ಸಾಫ್ಟ್‌ವೇರ್‌ ಪ್ರೈ.ಲಿ. ಕಂಪನಿಯು, ತನ್ನದೇ ಹೆಸರು ಬಳಸುತ್ತಿರುವ ಅಮೆರಿಕದ ಪ್ರಸಿದ್ಧ ಎಐ ಸಂಸ್ಥೆ ಅಂಥ್ರೋಪಿಕ್‌ ಪಿಬಿಸಿ ವಿರುದ್ಧ ಮೊಕದ್ದಮೆ ಹೂಡಿದೆ. ಭಾರತದಲ್ಲಿ 'ಅಂಥ್ರೋಪಿಕ್‌' ಹೆಸರಿನ ಮೇಲಿನ ಪ್ರಾಥಮಿಕ ಹಕ್ಕು ತಮಗೇ ಸೇರಿದೆ ಎಂದು ಹೇಳಿದೆ.

ಬೆಳಗಾವಿ: ಕರ್ನಾಟಕ ಮೂಲದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಯೊಂದು ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ (ಎಐ)ಯ ಪ್ರಮುಖ ಸಂಸ್ಥೆ ಅಂಥ್ರೋಪಿಕ್‌ ಪಿಬಿಸಿ ವಿರುದ್ಧ ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ತನ್ನ ಬ್ರ್ಯಾಂಡ್ ಹೆಸರು ಮತ್ತು ಆನ್‌ಲೈನ್ ಗುರುತನ್ನು ರಕ್ಷಿಸುವ ಕಾನೂನುಗಳನ್ನು ಅಮೆರಿಕ ಮೂಲದ ಸಂಸ್ಥೆ ಉಲ್ಲಂಘಿಸಿದೆ ಎಂದು ಆರೋಪಿಸಿದೆ.

Add Asianetnews Kannada as a Preferred SourcegooglePreferred

ಅಂಥ್ರೋಪಿಕ್‌ನ ಪ್ರಾಥಮಿಕ ಹಕ್ಕನ್ನು ನಮಗೇ ನೀಡಬೇಕು

ಬೆಳಗಾವಿ ನಗರದ ಬಾಕ್ಸೈಟ್‌ ರಸ್ತೆಯಲ್ಲಿರುವ ಅಜಂ ನಗರದಲ್ಲಿರುವ ಅಂಥ್ರೋಪಿಕ್‌ ಸಾಫ್ಟ್‌ವೇರ್‌ ಪ್ರೈ.ಲಿ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅಯ್ಯಾಜ್ ಮುಲ್ಲಾ ಅವರು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಮೆರಿಕ ಮೂಲದ ಅಂಥ್ರೋಪಿಕ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ನಮ್ಮದೆ ಹೆಸರನ್ನು ಹೊಂದಿದ್ದು, ಅಂಥ್ರೋಪಿಕ್‌ನ ಪ್ರಾಥಮಿಕ ಹಕ್ಕನ್ನು ನಮಗೇ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ನಾಯಕ್, ಮಾ.9ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬೆಂಗಳೂರಿನಲ್ಲಿರುವ ಅಂಥ್ರೋಪಿಕ್‌ ಕಚೇರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಅಂಥ್ರೋಪಿಕ್‌ ಪಿಬಿಸಿಗೆ ಮತ್ತೊಮ್ಮೆ ಸಮನ್ಸ್

ಇದೇ ಪ್ರಕರಣಕ್ಕೆ ಸಂಬಂಧಿಸಿ, ಜನವರ ಮೊದಲ ವಾರದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಮುಖ್ಯ ಕಚೇರಿಗೆ ಪತ್ರ ರವಾನಿಸಿ ಫೆ.16ರಂದು ಹಾಜರಾಗಲು ಕೋರ್ಟ್‌ ತಿಳಿಸಿತ್ತು. ಆದರೆ, ಕಂಪನಿಯ ಸಿಬ್ಬಂದಿ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಅಮೆರಿಕ ಮೂಲದ ಎಐ ಕಂಪನಿ ಅಂಥ್ರೋಪಿಕ್‌ ಪಿಬಿಸಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿ, ಮಾ.9ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಅಮೆರಿಕದ ಈ ಕಂಪನಿಗೆ ಭಾರತದಲ್ಲಿ ಯಾವುದೇ ನೋಂದಣಿ ಅಥವಾ ಕಚೇರಿ ಇರಲಿಲ್ಲ. ಇತ್ತೀಚೆಗೆ ಅದು ಭಾರತದಲ್ಲಿ ಎಂಸಿಎ ಮೂಲಕ ನೋಂದಣಿ ಪೂರ್ಣಗೊಳಿಸಿ, ಬೆಂಗಳೂರಿನ ದೊಮ್ಮಲೂರು ಪ್ರದೇಶದಲ್ಲಿ ಕಚೇರಿ ಸ್ಥಾಪಿಸಿದೆ. ಹೀಗಾಗಿ, ಇಲ್ಲಿನ ಅಂಥ್ರೋಪಿಕ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಷ್ ಅವರಿಗೆ ಸಮನ್ಸ್ ನೀಡುವಂತೆ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಸೂಚಿಸಿದ್ದಾರೆ.

ಬೆಳಗಾವಿ ಅಂಥ್ರೋಪಿಕ್‌ನ ವಾದವೇನು?

ನಮ್ಮ ಕಂಪನಿ 2017ರಲ್ಲಿ ಭಾರತದಲ್ಲಿ ನೋಂದಾಯಿತ ಸಂಸ್ಥೆಯಾಗಿದೆ. ಹೀಗಾಗಿ, ಅಂಥ್ರೋಪಿಕ್‌ ಎಂಬ ಹೆಸರಿನ ಮೇಲಿನ ಪ್ರಾಥಮಿಕ ಹಕ್ಕು ನಮ್ಮದೇ. ಅಮೆರಿಕದ ಕಂಪನಿ 2021ರಲ್ಲಿ ಸ್ಥಾಪನೆ ಆಗಿರುವುದರಿಂದ ಭಾರತದಲ್ಲಿ ಅದರ ಹೆಸರಿನ ಬಳಕೆ ನಮ್ಮ ನಂತರದ್ದು. ಅಲ್ಲದೆ, ಒಂದೇ ಹೆಸರಿನಿಂದಾಗಿ ವ್ಯವಹಾರದಲ್ಲಿ ಗೊಂದಲ ಉಂಟಾಗಿ ಹೂಡಿಕೆ ಹಾಗೂ ವ್ಯವಹಾರದ ಅವಕಾಶಗಳಿಗೆ ಅಡಚಣೆ ಉಂಟಾಗಿದೆ. ಆನ್‌ಲೈನ್ ಟ್ರಾಫಿಕ್ ಕೂಡ ತಪ್ಪಾಗಿ ಬೇರೆ ಕಂಪನಿಗೆ ಸಾಗುತ್ತಿದೆ ಎಂಬುದು ಬೆಳಗಾವಿ ಮೂಲದ ಅಂಥ್ರೋಪಿಕ್‌ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಾದ.

ಇದನ್ನೂ ಓದಿ: ಅಮೆರಿಕ ಮೂಲದ AI ಕಂಪನಿ Anthropic ಸಿಟಿಓ ಆಗಿ ನೇಮಕವಾದ PESIT ಮಾಜಿ ವಿದ್ಯಾರ್ಥಿ, ಉತ್ತರ ಕರ್ನಾಟಕದ ರಾಹುಲ್‌ ಪಾಟೀಲ್‌!

ಈ ಪ್ರಕರಣ ಪಾಸಿಂಗ್ ಆಫ್ ಎಂಬ ಸಾಮಾನ್ಯ ಕಾನೂನು ಸಿದ್ಧಾಂತದ ಆಧಾರದ ಮೇಲೆ ದಾಖಲಾಗಿದ್ದು, ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳಲ್ಲಿ ಹೆಸರಿನ ನಿರಂತರ ಬಳಕೆ ಮತ್ತು ಮೊದಲ ಹಕ್ಕು ಯಾರಿಗಿದೆಯೋ ಅವರಿಗೆ ಕಾನೂನು ರಕ್ಷಣೆ ಸಿಗಬಹುದು ಎಂಬ ವಾದವನ್ನು ಮುಲ್ಲಾ ಅವರು ಮುಂದಿಟ್ಟಿದ್ದಾರೆ.

ಅಮೆರಿಕ ಕಂಪನಿ ಭಾರತದಲ್ಲಿ ಅಂಥ್ರೋಪಿಕ್‌ ಹೆಸರಿನಲ್ಲಿ ಸೇವೆ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ತಡೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಿನಂತಿಸಿದ್ದಾರೆ. ಕಂಪನಿ ಮುಂದಿನ ದಿನಾಂಕಕ್ಕೂ ಹಾಜರಾಗದಿದ್ದರೆ ತಡೆ ಆದೇಶ ಪಡೆಯಲು ಪ್ರಯತ್ನ ಮುಂದುವರೆಯಲಿದೆ ಎಂದು ಮುಲ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್‌ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್