ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ ಟಿವಿ ಚಾನೆಲ್‌ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ವೀಕ್ಷಕರ ಸಂಖ್ಯೆ ಕುಸಿತ ಮತ್ತು ಜಾಹೀರಾತು ಆದಾಯ ಡಿಜಿಟಲ್‌ಗೆ ವರ್ಗಾವಣೆ ಆಗುತ್ತಿರುವ ಕಾರಣ,   50 ಚಾನೆಲ್‌ಗಳು ತಮ್ಮ ಪರವಾನಗಿಯನ್ನು ವಾಪಸ್ ನೀಡಿ, ಬಾಗಿಲು ಮುಚ್ಚಲು ಮುಂದಾಗಿವೆ. ಇದರ ಡಿಟೇಲ್ಸ್​ ಇಲ್ಲಿದೆ.

ಟಿವಿ ಚಾನೆಲ್​ಗಳು ಬಂದ ಮೇಲೆ ಪತ್ರಿಕೆಗಳು ಉಳಿಯುವುದೇ ಕಷ್ಟ ಎಂದು ಹೇಳಲಾಗಿತ್ತು. ಆದರೆ ಟಿವಿ ಮಾಧ್ಯಮಗಳು ಬಂದ ಮೇಲೆ ಬಹುತೇಕ ಪತ್ರಿಕೆಗಳು ತಮ್ಮ ಪ್ರಸಾರ ಸಂಖ್ಯೆಯಲ್ಲಿ ಕಡಿತ ಕಂಡಿವೆ. ಪತ್ರಿಕೆ ಓದುವ ಒಂದಷ್ಟು ಹಳೆಯ ಮಂದಿ ಇಂದಿಗೂ ಅವುಗಳನ್ನೇ ಅವಲಂಬಿಸಿದ್ದಾರೆ. ಆದರೆ ಇಂದಿನ ಪೀಳಿಗೆಯ ಬಹಳಷ್ಟು ಮಂದಿ ಪತ್ರಿಕೆಗಳತ್ತ ಮುಖ ಮಾಡಿ ನೋಡುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ. ಆದ್ದರಿಂದ ಯಾವಾಗ, ಏನು, ಒಂದಷ್ಟು ಜನರೇಷನ್​ ಮುಗಿದ ಮೇಲೆ ಮುಂದಿನ ಕಥೆ ಏನು ಎನ್ನುವ ಗೊಂದಲದಲ್ಲಿ ಪತ್ರಿಕೋದ್ಯಮವೂ ಇರುವ ನಡುವೆಯೇ, ಇದೀಗ ಟಿವಿ ಮಾಧ್ಯಮಗಳಿಗೂ ಇದೇ ಸ್ಥಿತಿ ಬಂದೊದಗಿದೆ. ಟಿವಿಯ ಎದುರು ಕುಳಿತು ಒಂದು ರಿಮೋಟ್​ಗಾಗಿ ಕಚ್ಚಾಡುವ ಜಾಯಮಾನ ಇದಲ್ಲ. ಮನೆಯಲ್ಲಿ ಎಷ್ಟೇ ಜನರು ಇದ್ದರೂ, ಟಿವಿ ರಿಮೋಟ್​ ಅನ್ನು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ಸ್ಮಾರ್ಟ್​ ಫೋನ್​ ತಂದೊಡ್ಡಿದೆ. ತಮಗಿಷ್ಟವಾದದ್ದನ್ನು, ಯಾವಾಗ, ಹೇಗೆ ಬೇಕಾದರೂ ನೋಡಲು ಸಾಧ್ಯವಾದ್ದರಿಂದ ಕೆಲವು ಟಿವಿ ಚಾನೆಲ್​ಗಳು ಕೂಡ ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಜನರು ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, 50 ಘಟಾನುಘಟಿ ಚಾನೆಲ್​ಗಳು ಇದೀಗ ತಮಗೆ ನೀಡಿರುವ ಲೈಸೆನ್ಸ್​ ವಾಪಸ್​ ನೀಡುತ್ತಿವೆ. ಚಾನೆಲ್​ಗಳನ್ನು ಬಂದ್​ ಮಾಡಲು ಮುಂದಾಗಿದೆ. ಇವುಗಳಲ್ಲಿ ಪ್ರಮುಖವಾದದ್ದು, ಜಿಯೋಸ್ಟಾರ್, ಜೀ ಎಂಟರ್‌ಟೈನ್‌ಮೆಂಟ್, ಈನಾಡು ಟೆಲಿವಿಷನ್, ಟಿವಿ ಟುಡೇ ನೆಟ್‌ವರ್ಕ್ ಮತ್ತು ಎಬಿಪಿ ನೆಟ್‌ವರ್ಕ್ ಸೇರಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಹೆಚ್ಚುತ್ತಿರುವ ಸವಾಲುಗಳು

ಈ ವರದಿಯ ಪ್ರಕಾರ, ಸಂಪರ್ಕಿತ ಟಿವಿಗಳು ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಬಳಕೆಗೆ ಬಳಕೆದಾರರ ಆದ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಯದಲ್ಲಿನ ಹೆಚ್ಚುತ್ತಿರುವ ಸವಾಲುಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 50 ದೂರದರ್ಶನ ಚಾನೆಲ್‌ಗಳು ತಮ್ಮ ಪರವಾನಗಿಗಳನ್ನು ಬಿಟ್ಟುಕೊಟ್ಟಿವೆ ಎಂದು ಹೇಳಲಾಗಿದೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾದ ಪೋಷಕ ಕಂಪೆನಿಯಾದ ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ ಸಹ ಅದೇ ಚಾನೆಲ್‌ಗಳನ್ನು ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡಲು ಸಚಿವಾಲಯದ ಅನುಮೋದನೆ ಪಡೆದ ನಂತರ 26 ಡೌನ್‌ಲಿಂಕಿಂಗ್ ಅನುಮತಿಗಳನ್ನು ಬಿಟ್ಟುಕೊಟ್ಟಿದೆ ಎಂದು ಇದರಲ್ಲಿ ತಿಳಿಸಲಾಗಿದೆ.

ಕಾರಣ ಇಲ್ಲಿದೆ...

ವೀಕ್ಷಕರ ಸಂಖ್ಯೆ ಕಡಿಮೆ ಇರುವುದು ಒಂದು ಕಾರಣವಾದರೆ, ವೀಕ್ಷಕರು ಇಲ್ಲದೇ ಹೋದರೂ ತಮ್ಮ ನೆಟ್​ವರ್ಕ್​ಗಳಿಗೆ ಟಿವಿ ಚಾನೆಲ್​ಗಳು ನೀಡಬೇಕಿರುವ ಕೋಟ್ಯಂತರ ರೂಪಾಯಿ ಬಾಡಿಗೆ ಇನ್ನೊಂದೆಡೆಯಾದರೆ, ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣದಿಂದ ಜಾಹೀರಾತುಗಳು ಕೂಡ ಡಿಜಿಟಲ್​ ಮಾಧ್ಯಮಕ್ಕೆ ವರ್ಗಾವಣೆ ಆಗಿರುವ ಕಾರಣದಿಂದ ಟಿವಿ ಚಾನೆಲ್​ಗಳು ಸಂಕಷ್ಟಕ್ಕೆ ಸಿಲುಕಿವೆ. ಟಿವಿಗಳು ಜಾಹೀರಾತುಗಳಿಂದಲೇ ನಡೆಯುತ್ತಿರುವುದು. ಆದರೆ ಟಿವಿ ಚಾನೆಲ್​ಗಳಿಗೆ ಹೋಲಿಸಿದರೆ ಡಿಜಿಟಲ್​ ಪ್ಲಾಟ್​ಫಾರ್ಮ್​ನಲ್ಲಿ ಜಾಹೀರಾತು ಶುಲ್ಕಗಳೂ ಕಡಿಮೆ ಇವೆ. ಪ್ರತಿಯೊಬ್ಬರ ಇಡೀ ಜಾತಕವೂ ಗೂಗಲ್​ನಲ್ಲಿ ಲಭ್ಯ ಇರುವ ಕಾರಣ, ಅವರಿಗೆ ಏನು ಇಷ್ಟವೋ ಆ ಜಾಹೀರಾತುಗಳನ್ನೇ ತೋರಿಸುವ ತಾಕತ್ತು ಡಿಜಿಟಲ್​ನಿಂದ ಸುಲಭವಾಗಿದೆ. ಇವೆಲ್ಲಾ ಕಾರಣಗಳಿಂದ ಈಗ ಚಾನೆಲ್​ಗಳು ತಮ್ಮ ಪರವಾನಗಿಯನ್ನು ವಾಪಸ್​ ಮಾಡುತ್ತಿವೆ ಎಂದು ವರದಿಯಾಗಿದೆ.

ಕುಸಿದ ರೇಟಿಂಗ್​

ಡಿಸೆಂಬರ್ 11, 2025 ರಂದು ಬಿಡುಗಡೆಯಾದ ಕ್ರಿಸಿಲ್ ವರದಿಯ ಪ್ರಕಾರ, ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಭಾರತೀಯ ಖಾಸಗಿ ನೇರ-ಮನೆ (ಡಿಟಿಎಚ್) ಟಿವಿ ಚಾನೆಲ್​ ಪೂರೈಕೆದಾರರು ಕಳೆದ ಹಣಕಾಸು ವರ್ಷದ ಹಿಂದಿನ ಶೇಕಡಾ 5ರ ಮಟ್ಟಕ್ಕೆ ಹೋಲಿಸಿದರೆ ಶೇಕಡಾ 3–4 ರಷ್ಟು ಕಡಿಮೆ ದರದಲ್ಲಿ ತಮ್ಮ ಆದಾಯದಲ್ಲಿ ಕುಸಿತವನ್ನು ಕಂಡಿರುವುದಾಗಿ ಅಂದಾಜಿಸಿದೆ. ಖಾಸಗಿ ಡಿಟಿಎಚ್ ಪೂರೈಕೆದಾರರ ಚಂದಾದಾರರ ಸಂಖ್ಯೆ 2019 ರ ಆರ್ಥಿಕ ವರ್ಷದಲ್ಲಿ 7.2 ಕೋಟಿಯಿಂದ 2024 ರ ಆರ್ಥಿಕ ವರ್ಷದ ವೇಳೆಗೆ 6.19 ಕೋಟಿಗೆ ಇಳಿದಿದೆ. ಇದು 2025 ರ ಆರ್ಥಿಕ ವರ್ಷದಲ್ಲಿ ಶೇಕಡಾ 9 ರಷ್ಟು ಕುಸಿದಿದೆ ಮತ್ತು ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 5.1 ಕೋಟಿಗಿಂತ ಕಡಿಮೆಯಾಗುವ ನಿರೀಕ್ಷೆಯಿದೆ” ಎಂದು ಕ್ರಿಸಿಲ್ ವರದಿ ತಿಳಿಸಿದೆ.

ಯಾವ್ಯಾವ ಚಾನೆಲ್​ಗಳ ನಿರ್ಧಾರ?

ನ್ಯೂಸ್ ಪೋರ್ಟಲ್‌ನ ವರದಿಯ ಪ್ರಕಾರ, ಜಿಯೋಸ್ಟಾರ್ ಕಲರ್ಸ್ ಒಡಿಯಾ, ಎಂಟಿವಿ ಬೀಟ್ಸ್, ವಿಎಚ್ 1 ಮತ್ತು ಕಾಮಿಡಿ ಸೆಂಟ್ರಲ್‌ಗಳ ಚಾನೆಲ್ ಪರವಾನಗಿಗಳನ್ನು ಆಂತರಿಕ ವ್ಯವಹಾರ ನಿರ್ಧಾರದ ನಡೆಯನ್ನು ಉಲ್ಲೇಖಿಸಿ ಬಿಟ್ಟುಕೊಟ್ಟಿದೆ. ಚಾನೆಲ್‌ನ ಕಾರ್ಯಾಚರಣೆಗಳನ್ನು ಮುಚ್ಚಿದ ನಂತರ ಜೀ ಎಂಟರ್‌ಟೈನ್‌ಮೆಂಟ್ ಜೀ ಸೀ ಅನ್ನು ಮುಚ್ಚಿದೆ. ಎಂಟರ್‌10 ಮೀಡಿಯಾ ವ್ಯವಹಾರ ಉದ್ದೇಶಗಳು ಮತ್ತು ಸಂಪನ್ಮೂಲ ಯೋಜನಾ ನಿರ್ಬಂಧಗಳಿಂದಾಗಿ ಹೆಚ್ಚುವರಿ ಚಾನೆಲ್‌ಗಳನ್ನು ಪ್ರಾರಂಭಿಸುವ ತನ್ನ ಯೋಜನೆಗಳಿಂದ ಹಿಂದೆ ಸರಿದಿದೆ, ಆದರೆ ದಂಗಲ್ ಎಚ್‌ಡಿ ಮತ್ತು ದಂಗಲ್ ಒರಿಯಾದಂತಹ ಚಾನೆಲ್‌ಗಳ ಪರವಾನಗಿಗಳನ್ನು ಬಿಟ್ಟುಕೊಟ್ಟಿದೆ. ಎಚ್‌ಡಿ ಮತ್ತು ಪ್ರಾದೇಶಿಕ ವಿಸ್ತರಣೆಯನ್ನು ಪ್ರಾರಂಭಿಸುವ ತನ್ನ ಯೋಜನೆಗಳನ್ನು ಕಂಪನಿಯು ತಡೆಹಿಡಿದಿದೆ.