2026ರ ಅಕ್ಷಯ ತೃತೀಯದಂದು, ಇನ್‌ಸ್ಟಾಮಾರ್ಟ್ ದಾಖಲೆಯ ಚಿನ್ನ ಮತ್ತು ಬೆಳ್ಳಿ ಮಾರಾಟವನ್ನು ಕಂಡಿದೆ. ಬೆಂಗಳೂರಿನ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ಚಿನ್ನ, ಬೆಳ್ಳಿಯ ಜೊತೆಗೆ ದಿನಸಿ ವಸ್ತುಗಳನ್ನು ಖರೀದಿಸಿದ್ದು, 'ಪ್ರೈಸ್ ಲಾಕ್' ಫೀಚರ್ ಕೂಡ ಭಾರಿ ಯಶಸ್ಸು ಗಳಿಸಿದೆ.

ಬೆಂಗಳೂರು : ಅಕ್ಷಯ ತೃತೀಯ ಎಂದರೆ ಕೇವಲ ಜ್ಯುವೆಲ್ಲರಿ ಅಂಗಡಿಗಳಿಗೆ ಹೋಗಿ ಚಿನ್ನ ಖರೀದಿಸುವುದು ಎಂಬ ಕಾಲವೊಂದಿತ್ತು. ಆದರೆ ಈಗ, ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ದಿನಸಿ ತರಿಸಿಕೊಳ್ಳುವಷ್ಟೇ ಸುಲಭವಾಗಿ ಚಿನ್ನ-ಬೆಳ್ಳಿಯನ್ನೂ ಭಾರತೀಯರು ಖರೀದಿಸುತ್ತಿದ್ದಾರೆ. 2026ರ ಅಕ್ಷಯ ತೃತೀಯ ದಿನದಂದು ಕ್ವಿಕ್ ಕಾಮರ್ಸ್ ದೈತ್ಯ 'ಇನ್‌ಸ್ಟಾಮಾರ್ಟ್' ದಾಖಲೆಯ ಮಟ್ಟದ ವಹಿವಾಟು ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ 19 ರಂದು ಇನ್‌ಸ್ಟಾಮಾರ್ಟ್ ವೇದಿಕೆಯಲ್ಲಿ ವಸ್ತುಗಳ ಒಟ್ಟಾರೆ ಬೇಡಿಕೆಯು 45 ಪಟ್ಟು ಹೆಚ್ಚಾಗಿತ್ತು. ಇದರಲ್ಲಿ ಚಿನ್ನದ ಬೇಡಿಕೆ 49 ಪಟ್ಟು ಏರಿಕೆಯಾಗಿದ್ದರೆ, ಬೆಳ್ಳಿಯ ಬೇಡಿಕೆ 24 ಪಟ್ಟು ಹೆಚ್ಚಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಗ್ರಾಹಕರು ಹೆಚ್ಚಾಗಿ 1 ಗ್ರಾಂ, 2 ಗ್ರಾಂ ಮತ್ತು 0.5 ಗ್ರಾಂ ಚಿನ್ನವನ್ನು ಖರೀದಿಸಿದ್ದಾರೆ. ಹಬ್ಬದ ಸಂಪ್ರದಾಯದ ಜೊತೆಗೆ ಕೈಗೆಟುಕುವ ದರದಲ್ಲಿ ಆಭರಣ ಖರೀದಿಸುವತ್ತ ಜನ ಒಲವು ತೋರಿರುವುದು ಇದರಿಂದ ಸಾಬೀತಾಗಿದೆ. ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ, ಉಡುಗೊರೆ ನೀಡಲು ಹಾಗೂ ಹೂಡಿಕೆ ಮಾಡಲು ಗ್ರಾಹಕರು 10 ಗ್ರಾಂ, 5 ಗ್ರಾಂ ಮತ್ತು 20 ಗ್ರಾಂ ಬೆಳ್ಳಿಯ ಗಟ್ಟಿಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ.

ಎಲ್ಲರ ಹುಬ್ಬೇರಿಸಿದ ಬೆಂಗಳೂರಿಗನ ಆ ಒಂದು ಕಾರ್ಟ್!

ಹಬ್ಬದ ಖರೀದಿ ಎಂದರೆ ಕೇವಲ ಚಿನ್ನವಷ್ಟೇ ಅಲ್ಲ ಎಂಬುದನ್ನು ಬೆಂಗಳೂರಿನ ಗ್ರಾಹಕನೊಬ್ಬ ಸಾಬೀತು ಮಾಡಿದ್ದಾನೆ. ಈತ ಒಂದೇ ಆರ್ಡರ್‌ನಲ್ಲಿ ಬರೋಬ್ಬರಿ 1,99,917 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾನೆ! ಇದರಲ್ಲಿ 1.65 ಲಕ್ಷ ರೂ. ಮೌಲ್ಯದ ಬೆಳ್ಳಿಯ ಗಟ್ಟಿಗಳು, 31,800 ರೂ. ಮೌಲ್ಯದ ಚಿನ್ನದ ನಾಣ್ಯಗಳು ಇದ್ದವು. ಇಷ್ಟೇ ಅಲ್ಲದೆ, ಇದೇ ಕಾರ್ಟ್‌ನಲ್ಲಿ ತಂಪು ಪಾನೀಯಗಳು, ಐಸ್ ಕ್ಯೂಬ್‌ಗಳು, ಅಲ್ಫೋನ್ಸೊ ಮಾವಿನಹಣ್ಣುಗಳು, ವಾಟರ್ ಡಿಸ್ಪೆನ್ಸರ್ ಹಾಗೂ ಒಂದು ಸ್ಮಾರ್ಟ್ ವಾಚ್ ಅನ್ನು ಸಹ ಖರೀದಿಸಲಾಗಿದೆ. ಇದು ಇಂದಿನ ಜನರ 'ಕ್ರಾಸ್-ಕ್ಯಾಟಗರಿ' (ಮಿಶ್ರಿತ ವಸ್ತುಗಳ) ಹಬ್ಬದ ಖರೀದಿಯ ಹೊಸ ಸ್ವರೂಪಕ್ಕೆ ಕನ್ನಡಿ ಹಿಡಿದಿದೆ.

ಕಮಾಲ್ ಮಾಡಿದ ಪ್ರೈಸ್ ಲಾಕ್ ಫೀಚರ್‌

ಈ ಬಾರಿಯ ಅಕ್ಷಯ ತೃತೀಯಕ್ಕೆ ಇನ್‌ಸ್ಟಾಮಾರ್ಟ್ ಹೊಸದಾಗಿ 'ಪ್ರೈಸ್ ಲಾಕ್' ಎಂಬ ಆಯ್ಕೆಯನ್ನು ನೀಡಿತ್ತು. ಇದರ ಅನ್ವಯ ಏಪ್ರಿಲ್ 10 ರಿಂದ 16 ರ ನಡುವೆ ಗ್ರಾಹಕರು ನಿರ್ದಿಷ್ಟ ಚಿನ್ನದ ನಾಣ್ಯಗಳನ್ನು ಅಂದಿನ ಬೆಲೆಗೇ ಕಾಯ್ದಿರಿಸಬಹುದಾಗಿತ್ತು.

ಏಪ್ರಿಲ್ 19 ರಂದು, ಕಾಯ್ದಿರಿಸಿದ ಬೆಲೆ ಅಥವಾ ಮಾರುಕಟ್ಟೆ ಬೆಲೆ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಬೆಲೆಗೆ ಚಿನ್ನವನ್ನು ಪಡೆಯುವ ಅವಕಾಶವಿತ್ತು. ಅಚ್ಚರಿಯೆಂದರೆ, ಒಟ್ಟು ಬೇಡಿಕೆಯ ಶೇ. 40ರಷ್ಟು ಆರ್ಡರ್‌ಗಳು ಈ ಮುಂಗಡ ಬುಕ್ಕಿಂಗ್ ಮೂಲಕವೇ ಬಂದಿವೆ.

ಈ ಬಾರಿಯ ಅಕ್ಷಯ ತೃತೀಯದ ಆನ್‌ಲೈನ್ ಖರೀದಿಯಲ್ಲಿ ಮೆಟ್ರೋ ನಗರಗಳೇ ಪಾರುಪತ್ಯ ಮೆರೆದಿವೆ. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ, ಚೆನ್ನೈ, ಪುಣೆ, ಗುರ್ಗಾಂವ್, ಕೋಲ್ಕತ್ತಾ ಮತ್ತು ನೋಯ್ಡಾದ ಜನರು ಇನ್‌ಸ್ಟಾಮಾರ್ಟ್ ಮೂಲಕ ಅತಿ ಹೆಚ್ಚು ಚಿನ್ನ ಮತ್ತು ಬೆಳ್ಳಿಯನ್ನು ಆರ್ಡರ್ ಮಾಡಿದ್ದಾರೆ.

ಆಗಸ್ಟ್ 2020 ರಲ್ಲಿ ಪ್ರಾರಂಭವಾದ ಇನ್‌ಸ್ಟಾಮಾರ್ಟ್, ಭಾರತದ ಪ್ರಮುಖ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದ್ದು, ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಅತಿ ವೇಗವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕಂಪನಿ ಮುಂಚೂಣಿಯಲ್ಲಿದೆ.