ಭಾರ್ತಿ ಏರ್‌ಟೆಲ್ ತನ್ನ ಆಯ್ದ ಪ್ರಿಪೇಯ್ಡ್ ಗ್ರಾಹಕರಿಗೆ ಸೀಮಿತ ಅವಧಿಯ 'ಒಂದಕ್ಕೆ 1 ಉಚಿತ' ಆಫರ್ ಘೋಷಿಸಿದೆ. ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ₹349 ಅಥವಾ ₹399 ರೀಚಾರ್ಜ್ ಮಾಡಿದರೆ, ಹೆಚ್ಚುವರಿ 28 ದಿನಗಳ ಉಚಿತ ಮಾನ್ಯತೆ ಮತ್ತು ಡೇಟಾ ಪಡೆಯಬಹುದು.

ಬೆಂಗಳೂರು: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ತನ್ನ ಅರ್ಹ ಪ್ರಿಪೇಯ್ಡ್ ಗ್ರಾಹಕರಿಗಾಗಿ ಅತ್ಯಂತ ಆಕರ್ಷಕ ಹಾಗೂ ಸೀಮಿತ ಅವಧಿಯ ಒಂದಕ್ಕೆ 1 ಉಚಿತ ಆಫರ್ ಅನ್ನು ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ತನ್ನ ಸ್ವಂತ 'ಏರ್‌ಟೆಲ್ ಥ್ಯಾಂಕ್ಸ್' ಆಪ್ ಮೂಲಕ ಆಯ್ದ ಪ್ರಿಪೇಯ್ಡ್ ಪ್ಲಾನ್‌ಗಳನ್ನು ರೀಚಾರ್ಜ್ ಮಾಡುವ ಬಳಕೆದಾರರಿಗೆ ಈ ಉಚಿತ ಕೊಡುಗೆಯನ್ನು ನೀಡುತ್ತಿದೆ.

ಇತ್ತೀಚೆಗೆ ದೇಶಾದ್ಯಂತ ಟೆಲಿಕಾಂ ದರಗಳ ಏರಿಕೆಯಾದ ಬಳಿಕ, ಗ್ರಾಹಕರು ಬೇರೆ ನೆಟ್‌ವರ್ಕ್‌ಗಳಿಗೆ ಪೋರ್ಟ್ ಆಗುತ್ತಿದ್ದಾರೆ ಇದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ತನ್ನ ಸ್ವಂತ ಆಪ್ ಬಳಕೆಯನ್ನು ಹೆಚ್ಚಿಸಲು ಏರ್‌ಟೆಲ್ ಈ ಆಕ್ರಮಣಕಾರಿ ತಂತ್ರವನ್ನು ರೂಪಿಸಿದೆ.

₹349 ಪ್ಲಾನ್‌ನ ಪ್ರಯೋಜನಗಳು ಹಾಗೂ 1+1 ಆಫರ್ ವಿವರ

ಏರ್‌ಟೆಲ್‌ನ ಹೆಚ್ಚು ಜನಪ್ರಿಯವಾಗಿರುವ ₹349 ಪ್ರಿಪೇಯ್ಡ್ ಪ್ಲಾನ್ ದಿನನಿತ್ಯದ ಡೇಟಾ ಬಳಕೆದಾರರಿಗೆ ಸೂಕ್ತವಾಗಿದೆ.

28 ದಿನಗಳ ಮಾನ್ಯತೆ, ಪ್ರತಿದಿನ 2GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಹಾಗೂ 5G ನೆಟ್‌ವರ್ಕ್ ಲಭ್ಯವಿರುವ ಪ್ರದೇಶಗಳಲ್ಲಿ ಅನಿಯಮಿತ 5G ಡೇಟಾ.

ಈ ಪ್ಲಾನ್‌ಗೆ ₹349 ಪಾವತಿಸಿ ರೀಚಾರ್ಜ್ ಮಾಡಿದರೆ, ಹೆಚ್ಚುವರಿ ಶುಲ್ಕವಿಲ್ಲದೆ ಮತ್ತೊಂದು 28 ದಿನಗಳ ಉಚಿತ ರೀಚಾರ್ಜ್ ಸಿಗಲಿದೆ. ಇದರಿಂದ ಒಟ್ಟು 56 ದಿನಗಳ ಮಾನ್ಯತೆ ಹಾಗೂ 112GB ಡೇಟಾ ದೊರೆಯಲಿದ್ದು, ಮಾಸಿಕ ವೆಚ್ಚವು ಕೇವಲ ₹174.50 ಕ್ಕೆ ಇಳಿಯುತ್ತದೆ.

ಸುಮಾರು ₹4,000 ಮೌಲ್ಯದ 12 ತಿಂಗಳ 'ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ' ಚಂದಾದಾರಿಕೆ, ಏರ್‌ಟೆಲ್‌ನ ಸುರಕ್ಷಿತ AI ಸ್ಪ್ಯಾಮ್ ರಕ್ಷಣೆ ಮತ್ತು ಉಚಿತ ಹೆಲೋಟ್ಯೂನ್ ಸೌಲಭ್ಯ.

₹399 ಪ್ಲಾನ್

ಯಾವುದೇ ದೈನಂದಿನ ಮಿತಿಯಿಲ್ಲದ ನಿಜವಾದ ಅನಿಯಮಿತ 4G/5G ಡೇಟಾ

ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಿಗಾಗಿ ಏರ್‌ಟೆಲ್ ₹399 ಪ್ಲಾನ್ ಮೇಲೆ BOGO ಸೌಲಭ್ಯ ಒದಗಿಸಿದೆ.

ಈ ಪ್ಲಾನ್‌ನಲ್ಲಿ ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. 4G ಹಾಗೂ 5G ಹ್ಯಾಂಡ್‌ಸೆಟ್‌ಗಳನ್ನು ಹೊಂದಿರುವ ಎಲ್ಲಾ ಬಳಕೆದಾರರೂ ನಿಜವಾದ ಅನಿಯಮಿತ ಡೇಟಾವನ್ನು ಪಡೆಯಬಹುದು.

ಬೈ ಒನ್ ಗೆಟ್‌ ಒನ್ ಆಫರ್ ಲಾಭ: ₹399 ಪಾವತಿಸುವ ಮೂಲಕ ಗ್ರಾಹಕರು ಸತತ 56 ದಿನಗಳ ಕಾಲ (28 ದಿನ + 28 ದಿನ) ಅಡೆತಡೆಯಿಲ್ಲದ ಹೈ-ಸ್ಪೀಡ್ ಇಂಟರ್ನೆಟ್ ಪಡೆಯಬಹುದು. ಇದರಿಂದ ಪರಿಣಾಮಕಾರಿ ಮಾಸಿಕ ವೆಚ್ಚ ತಿಂಗಳಿಗೆ ₹200 ಕ್ಕಿಂತ ಕಡಿಮೆಯಾಗಲಿದೆ. ಈ ಯೋಜನೆಯಲ್ಲೂ 12 ತಿಂಗಳ ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಉಚಿತವಾಗಿ ಸಿಗಲಿದೆ.

ಕೊಡುಗೆಯನ್ನು ಪರಿಶೀಲಿಸುವುದು ಮತ್ತು ಪಡೆದುಕೊಳ್ಳುವುದು ಹೇಗೆ?

ಈ ಆಫರ್ ಕೇವಲ 'Airtel Thanks App' ನಲ್ಲಿ ಮಾತ್ರ ಲಭ್ಯವಿದ್ದು, ಆಯ್ದ ಬಳಕೆದಾರರಿಗೆ ಮಾತ್ರ ನೀಡಲಾಗುತ್ತಿದೆ.

ನಿಮ್ಮ ಮೊಬೈಲ್‌ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಿರಿ.

ರೀಚಾರ್ಜ್ ವಿಭಾಗಕ್ಕೆ ಹೋಗಿ ₹349 ಅಥವಾ ₹399 ಪ್ಲಾನ್ ಆಯ್ಕೆಮಾಡಿ.

ಪಾವತಿ ಮಾಡುವ ಮೊದಲು ಯೋಜನೆಯ ವಿವರಗಳಲ್ಲಿ "1+1 Recharge Free" ಎಂಬ ಟ್ಯಾಗ್ ಕಾಣಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಈ ಟ್ಯಾಗ್ ಕಾಣಿಸಿದರೆ ಮಾತ್ರ ನಿಮಗೆ ಉಚಿತ ರೀಚಾರ್ಜ್ ಪ್ರಯೋಜನ ದೊರೆಯುತ್ತದೆ.

ಮೊದಲ 28 ದಿನಗಳ ಚಂದಾದಾರಿಕೆ ಅವಧಿ ಮುಗಿದ ನಂತರ, ಉಚಿತವಾಗಿ ನೀಡಲಾದ ಎರಡನೇ ಚಕ್ರದ ರೀಚಾರ್ಜ್ ಆಟೋಮ್ಯಾಟಿಕ್ ಆಗಿ ಅಥವಾ ವೋಚರ್ ರೂಪದಲ್ಲಿ ಸಕ್ರಿಯಗೊಳ್ಳುತ್ತದೆ.