ಕರ್ನಾಟಕ ಮತ್ತು ಕೇರಳದ ಅಡಿಕೆ ಹಾಗೂ ಕೋಕೋ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಆರಂಭವಾದ ಸಹಕಾರಿ ಚಳವಳಿಯೊಂದು ಇಂದು ಚಾಕೊಲೇಟ್ ಮತ್ತು ಕೋಕೋ ಸಂಸ್ಕರಣಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಯಶೋಗಾಥೆ ಇಲ್ಲಿದೆ

ಪುತ್ತೂರು (ದಕ್ಷಿಣ ಕನ್ನಡ): ಸಹಕಾರಿ ತತ್ವದಡಿ ರೈತರೇ ಒಗ್ಗೂಡಿ ಕಟ್ಟಿದ ಸಂಸ್ಥೆಯೊಂದು ಜಾಗತಿಕ ಮಟ್ಟದ ಉದ್ಯಮವಾಗಿ ಬೆಳೆಯಬಹುದು ಎಂಬುದಕ್ಕೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ 'ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ' (CAMPCO Chocolate Factory) ಅತ್ಯುತ್ತಮ ನಿದರ್ಶನವಾಗಿದೆ. ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದಲ್ಲಿ ತಲೆಎತ್ತಿರುವ ಈ ಬೃಹತ್ ಘಟಕವು, ಇಂದು ಆಗ್ನೇಯ ಏಷ್ಯಾದಲ್ಲೇ ರೈತರ ಒಡೆತನದಲ್ಲಿರುವ ಅತಿದೊಡ್ಡ ಚಾಕೊಲೇಟ್ ಮತ್ತು ಕೋಕೋ ಸಂಸ್ಕರಣಾ ಸಂಕೀರ್ಣಗಳಲ್ಲಿ ಒಂದಾಗಿ ಹೆಮ್ಮೆಯಿಂದ ಬೀಗುತ್ತಿದೆ. ಮಾತ್ರವಲ್ಲ ಮಕ್ಕಳ ದಿನಾಚರಣೆ ಪ್ರಯುಕ್ತ ಎರಡು ನೂತನ ಚಾಕೊಲೇಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ‘ಡೈರಿ ಡ್ರೀಮ್ ಬಾದಾಮ್ ಬೈಟ್’ (35 ಗ್ರಾಂ) ಹಾಗೂ ‘ಡೈರಿ ಡ್ರೀಮ್ ಕ್ರೀಮ್ ಬ್ರೌನಿ’ (40 ಗ್ರಾಂ) ಎಂಬ ಕ್ಯಾಂಪ್ಕೊದ ಎರಡು ಹೊಸ ಚಾಕೊಲೇಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. 2025–26ರ ಹಣಕಾಸು ವರ್ಷದಲ್ಲಿ ಕಂಪನಿ ₹3,735 ಕೋಟಿ ವಾರ್ಷಿಕ ವಹಿವಾಟು ದಾಲಿಸಿದೆ.

ರೈತರ ಕಣ್ಣೀರು ಒರೆಸಲು ಹುಟ್ಟಿದ 'ಕ್ಯಾಂಪ್ಕೊ'

ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಡಿಕೆ ಹಾಗೂ ಕೋಕೋ ಬೆಳೆಗಾರರ ಹಿತರಕ್ಷಣೆಗಾಗಿ ದಾರ್ಶನಿಕ ನಾಯಕ ವಾರಣಾಸಿ ಸುಬ್ರಾಯ ಭಟ್ ಅವರು 1973ರ ಜುಲೈ 11ರಂದು ಮಂಗಳೂರಿನಲ್ಲಿ 'ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್' (CAMPCO) ಸಂಸ್ಥೆಯನ್ನು ಸ್ಥಾಪಿಸಿದರು. ಎರಡೂ ರಾಜ್ಯ ಸರ್ಕಾರಗಳ ಸಕ್ರಿಯ ಬೆಂಬಲದೊಂದಿಗೆ ಆರಂಭವಾದ ಈ ಸಂಸ್ಥೆಯು, 1973ರ ನವೆಂಬರ್‌ನಲ್ಲಿ ಕೇವಲ 5 ಕೇಂದ್ರಗಳ ಮೂಲಕ ಅಡಿಕೆ ಖರೀದಿ ಆರಂಭಿಸಿ ರೈತರಿಗೆ ಭದ್ರ ಬುನಾದಿ ಹಾಕಿತು.

1980ರ ದಶಕದ ಮಧ್ಯಭಾಗದಲ್ಲಿ ಕೋಕೋ ಬೆಳೆಗಾರರಿಗೆ ಭಾರಿ ಆಘಾತ ಎದುರಾಯಿತು. ಖಾಸಗಿ ಚಾಕೊಲೇಟ್ ತಯಾರಿಕಾ ಕಂಪನಿಗಳು ಏಕಾಏಕಿ ಸ್ಥಳೀಯ ರೈತರಿಂದ ಕೋಕೋ ಬೀಜಗಳನ್ನು ಖರೀದಿಸುವುದನ್ನು ನಿಲ್ಲಿಸಿದವು. ಮಾರುಕಟ್ಟೆಯಿಲ್ಲದೆ ಕಂಗಾಲಾದ ಕರ್ನಾಟಕ ಮತ್ತು ಕೇರಳದ ಅನೇಕ ರೈತರು ಬೇಸತ್ತು ತಮ್ಮ ಕೋಕೋ ಮರಗಳನ್ನೇ ಕಡಿಯುವಂತಹ ದುಃಸ್ಥಿತಿ ನಿರ್ಮಾಣವಾಯಿತು. ಈ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಧಾವಿಸಿದ ಕ್ಯಾಂಪ್ಕೊ, ಬೆಳೆಗಾರರಿಂದ ನೇರವಾಗಿ ಹಸಿ ಮತ್ತು ಒಣ ಕೋಕೋ ಬೀಜಗಳನ್ನು ಖರೀದಿಸಿ ಅವರಿಗೆ ಸ್ಥಿರವಾದ ಮಾರುಕಟ್ಟೆ ಒದಗಿಸಲು ಪುತ್ತೂರಿನಲ್ಲಿ ಸ್ವಂತ ಚಾಕೊಲೇಟ್ ಕಾರ್ಖಾನೆ ಸ್ಥಾಪಿಸುವ ದಿಟ್ಟ ನಿರ್ಧಾರ ಕೈಗೊಂಡಿತು.

1986ರಲ್ಲಿ ರಾಷ್ಟ್ರಪತಿಗಳಿಂದ ಐತಿಹಾಸಿಕ ಉದ್ಘಾಟನೆ

ಪುತ್ತೂರಿನ ಕೆಮ್ಮಿಂಜೆಯಲ್ಲಿ ಆರಂಭಿಕ ಸುಮಾರು ₹11.67 ಕೋಟಿ ಹೂಡಿಕೆಯೊಂದಿಗೆ (ಒಟ್ಟು ₹14 ಕೋಟಿ ವೆಚ್ಚದಲ್ಲಿ) ವಿದೇಶದಿಂದ ಆಮದು ಮಾಡಿಕೊಂಡ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರೋಪಕರಣಗಳನ್ನು ಒಳಗೊಂಡ ಬೃಹತ್ ಕಾರ್ಖಾನೆಯನ್ನು ನಿರ್ಮಿಸಲಾಯಿತು. ವಾರ್ಷಿಕ 8,800 ಮೆಟ್ರಿಕ್ ಟನ್ ಪರವಾನಗಿ ಸಾಮರ್ಥ್ಯದೊಂದಿಗೆ ಸಿದ್ಧಗೊಂಡ ಈ ಕಾರ್ಖಾನೆಯನ್ನು 1986ರ ಸೆಪ್ಟೆಂಬರ್ 1ರಂದು ಅಂದಿನ ಭಾರತದ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಈ ಐತಿಹಾಸಿಕ ಸಮಾರಂಭವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ನೆಸ್ಲೆ, ಅಮುಲ್‌ನಂತಹ ದಿಗ್ಗಜ ಸಂಸ್ಥೆಗಳೊಂದಿಗೆ ವಾಣಿಜ್ಯ ಸಹಯೋಗ

ಅಂತಾರಾಷ್ಟ್ರೀಯ ಮಟ್ಟದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಕ್ಯಾಂಪ್ಕೊ ಕಾರ್ಖಾನೆಯು, ತನ್ನದೇ ಆದ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ವೈವಿಧ್ಯಮಯ ಚಾಕೊಲೇಟ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲದೆ, ದೇಶದ ಪ್ರಮುಖ ಆಹಾರ ಮತ್ತು ಚಾಕೊಲೇಟ್ ದಿಗ್ಗಜ ಸಂಸ್ಥೆಗಳಾದ 'ನೆಸ್ಲೆ ಇಂಡಿಯಾ ಲಿಮಿಟೆಡ್' ಮತ್ತು 'ಅಮುಲ್' ಜೊತೆ ತಾಂತ್ರಿಕ ಸಹಯೋಗ ಹಾಗೂ ಉತ್ಪಾದನಾ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಅವುಗಳಿಗೆ ಅರೆ-ಸಿದ್ಧ ಮತ್ತು ಸಿದ್ಧಪಡಿಸಿದ ಕೋಕೋ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಪೂರೈಸುತ್ತಿದೆ. ಇಂದು ಕ್ಯಾಂಪ್ಕೊ ತನ್ನದೇ ಆದ ಬಲಿಷ್ಠ ಮಾರ್ಕೆಟಿಂಗ್ ಜಾಲವನ್ನು ಹೊಂದಿದೆ.

ದಾಖಲೆಯ ವಹಿವಾಟು ಮತ್ತು ಆಧುನಿಕ ಮೂಲಸೌಕರ್ಯ ವಿಸ್ತರಣೆ

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಚಾಕೊಲೇಟ್ ಬೇಡಿಕೆ ಮತ್ತು ಉತ್ಪಾದನೆ ವಾರ್ಷಿಕ ಶೇ. 20ರಷ್ಟು ವೇಗವಾಗಿ ಬೆಳೆಯುತ್ತಿದ್ದು, ಕ್ಯಾಂಪ್ಕೊ ಕೂಡ ತನ್ನ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. 2016ರ ವೇಳೆಗೆ ಕಾರ್ಖಾನೆಯ ಒಟ್ಟು ಉತ್ಪಾದನೆಯು ವಾರ್ಷಿಕ 18,000 ಟನ್‌ಗಳಿಗೆ ತಲುಪಿದ್ದು, ಮುಂದಿನ ಹಂತದಲ್ಲಿ ಇದನ್ನು 23,000 ಟನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ. 2017-18ನೇ ಹಣಕಾಸು ವರ್ಷದಲ್ಲಿ ಕ್ಯಾಂಪ್ಕೊ ಬರೋಬ್ಬರಿ ₹1,740 ಕೋಟಿ (₹17,400 ಮಿಲಿಯನ್) ದಾಖಲೆಯ ವಹಿವಾಟು ನಡೆಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

2018ರ ಜನವರಿ 21ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರು ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯ ನೂತನ ಸೌಲಭ್ಯ ಬ್ಲಾಕ್ ಅನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಾರಣಾಸಿ ಸುಬ್ರಾಯ ಭಟ್ ಅವರ ಪ್ರತಿಮೆಯನ್ನೂ ಅನಾವರಣಗೊಳಿಸಲಾಯಿತು. ಇದರ ಜೊತೆಗೆ, ಪುತ್ತೂರು ನಗರದಿಂದ 17 ಕಿ.ಮೀ ದೂರದಲ್ಲಿರುವ ಕಾವು ಗ್ರಾಮದಲ್ಲಿ ಆಧುನಿಕ ಗೋದಾಮು ಮೂಲಸೌಕರ್ಯವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ.

ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ದೇಶಾದ್ಯಂತ ವಿಸ್ತರಣೆ

ಅಡಿಕೆ ಮತ್ತು ಕೋಕೋ ಮಾತ್ರವಲ್ಲದೆ ರಬ್ಬರ್ ಹಾಗೂ ಕರಿಮೆಣಸು ಮಾರುಕಟ್ಟೆಗೂ ಲಗ್ಗೆ ಇಟ್ಟಿರುವ ಕ್ಯಾಂಪ್ಕೊ, ಇಂದು ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ಬೆಳೆದುನಿಂತಿದೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳಾದ್ಯಂತ 133 ಖರೀದಿ, ಉತ್ಪಾದನಾ ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ನವದೆಹಲಿ, ಬಿಹಾರ, ತಮಿಳುನಾಡು, ಒಡಿಶಾ, ಅಸ್ಸಾಂ ಮತ್ತು ಗೋವಾ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ 11 ಮಾರಾಟ ಡಿಪೋಗಳ ಮೂಲಕ ಲಕ್ಷಾಂತರ ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿದೆ. ಜೊತೆಗೆ ವಿದೇಶಗಳಿಗೂ ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡುತ್ತದೆ.