ಕೊರೋನಾ ಆರ್ಭಟ ಮಧ್ಯೆಯೂ ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್, ಡಬಲ್ ಹೈಕ್!
* ಕೊರೋನಾ ಹಾವಳಿ ಮಧ್ಯೆ ಕಳೆದೊಂದು ವರ್ಷದಿಂದ ವರ್ಕ್ ಫ್ರಂ ಹೋಂ ಮಾಡುತ್ತಿರುವ ಐಟಿ ಉದ್ಯೋಗಿಗಳು
* ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಟ್ಟ ಐಟಿ ಕಂಪನಿಗಳು
* ಕಳೆದ ವರ್ಷ ತಡೆ ಹಿಡಿದಿದ್ದ ವೇತನ ಏರಿಕೆ ಸೇರಿ ಡಬಲ್ ಹೈಕ್
ಬೆಂಗಳೂರು(ಮೇ.12) ಕೊರೋನಾತಂಕದ ಮಧ್ಯೆ ಐಟಿ ಕಂಪನಿಗಳು ಸೇರಿ ಅನೇಕ ಕ್ಷೇತ್ರಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆರಂಭಿಸಿದ್ದವು. ಹೀಗೆ ಮನೆಯಿಂದ ಕೆಲಸ ಮಾಡುವ ಈ ಪ್ರಕ್ರಿಯೆ ಆರಂಭವಾಗಿ ಒಂದು ವರ್ಷವೇ ಕಳೆದಿದೆ. ಏಕಾಏಕಿ ಆರಂಭವಾದ ಕೊರೋನಾ ಮೊದಲ ಅಲೆ ತಡೆಯಲು ಹೇರಲಾದ ಲಾಕ್‌ಡೌನ್ ಎಲ್ಲಾ ಕ್ಷೇತ್ರಗಳಿಗೆ ನಷ್ಟವುಂಟು ಮಾಡಿತ್ತು. ಇದು ಐಟಿ ಕ್ಷೇತ್ರದ ಮೇಲೂ ಭಾರೀ ಪರಿಣಾಮ ಬೀರಿತ್ತು. ಅನೇಕ ಕಂಪನಿಗಳು ನೆಲಕಚ್ಚಿದ್ದವು. ಇದರ ಪರಿಣಾಮ ಎಂಬಂತೆ ಉದ್ಯೋಗಿಗಳಿಗೂ ವೇತನ ಏರಿಕೆ ಕನಸಾಗಿ ಉಳಿದಿತ್ತು. ಕಂಪನಿಗಳು ಎಲ್ಲಾ ರೀತಿಯ ಬೋನಸ್, ಭತ್ಯೆಗೆ ಬ್ರೇಕ್ ಹಾಕಿದ್ದವು.
ಇದು ಉದ್ಯೋಗಿಗಳಿಗೆ ನಿರಾಸೆಯುಂಟು ಮಾಡಿದ್ದರೂ, ಅನೇಕರಿಗೆ ಕೆಲಸವಿದೆಯಲ್ಲವೇ ಎಂಬ ಸಮಾಧಾನ ಕೊಟ್ಟಿತ್ತು. ಹೀಗಾಗಿ ವೇತನ ಏರಿಕೆಗೆ ಯಾವುದೇ ಬೇಡಿಕೆ ಇಡದೇ ಮನೆಯಿಂದ ಕೆಲಸ ಮುಂದುವರೆಸಿದ್ದರು. ಆದರೀಗ ವೇತನ ಏರಿಕೆಯಾಗದೆ ಮೌನ ವಹಿಸಿದ್ದ ಐಟಿ ಉದ್ಯೋಗಿಗಳಿಗೆ ಡಬಲ್ ಖುಷಿ ಸಿಕ್ಕಿದೆ. ಹೌದು ಅನೇಕ ಐಟಿ ಕಂಪನಿಗಳು ಈಗಾಗಲೇ ಎರಡನೇ ಸುತ್ತಿನ ವೇತನ ಏರಿಕೆ ಮಾಡಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದೇಶದಲ್ಲೇ ಲ್ಯಾಪ್‌ಟಾಪ್ ಉತ್ಪಾದಿಸಿದರೆ ಪ್ರೋತ್ಸಾಹಧನ!
ಕಳೆದ ವರ್ಷ ತಡೆ ಹಿಡಿದಿದ್ದ ವೇತನ ಏರಿಕೆ, ಪ್ರೊಮೋಷನ್ ಎಲ್ಲವನ್ನೂ ನಿಗದಿಪಡಿಸಿದ ಕೇವಲ ಒಂದೇ ತಿಂಗಳ ಬಳಿಕ, ಮತ್ತೆ ಎರಡನೇ ಸುತ್ತಿನ ವೇತನ ಏರಿಕೆ ಮಾಡಿದೆ. ಮೊದಲ ಹಂತದ ಕೊರೋನಾ ಹಾವಳಿ ಮುಗಿದು, ಆರ್ಥಿಕ ಕ್ಷೇತ್ರ ಚೇತರಿಕೆಯಾದ ಬೆನ್ನಲ್ಲೇ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ವರ್ಷದ ಆರಂಭದಲ್ಲೇ ವೇತನ ಏರಿಕೆ ಮಾಡಿದ್ದವು. ಇನ್ನು ಐಟಿ ಕಂಪನಿಗಳಲ್ಲಿ ಪ್ರತಿಭೆಗಳಿಗೆ ಹೆಚ್ಚು ಬೇಡಿಕೆ ಇರುವ ಹಿನ್ನೆಲೆ ಮತ್ತೆ ಈ ಬಾರಿಯ ವೇತನ ಏರಿಕೆ ಪ್ರಕ್ರಿಯೆಯನ್ನೂ ಆರಂಭಿಸಿವೆ.
ಎರಡು ಲಕ್ಷಕ್ಕೂ ಅಧಿಕ ಉದ್ಯೋಗಿಳನ್ನು ಹೊಂದಿರುವ Accenture, 2020ರ ಡಿಸೆಂಬರ್‌ನಲ್ಲಿ ನೀಡಬೇಕಾದ ಬೋನಸ್, ವೇತನ ಏರಿಕೆ ಹಾಗೂ ಪ್ರೊಮೋಷನ್‌ಗಳನ್ನು ಈ ವರ್ಷದ ಫೆಬ್ರವರಿಗೆ ನೀಡಿದೆ. ಇದು ಉದ್ಯೋಗಿಗಳಿಗೆ ಖುಷಿಯಿಂದ ಕಾರ್ಯ ನಿರ್ವಹಿಸಲು ಮತ್ತಷ್ಟು ಬಲ ನೀಡಿದೆ.
ಇನ್ನು ಅತ್ತ ಇನ್ಫೋಸಿಸ್ ಕೂಡಾ ಇದೇ ಹಾದಿಯಲ್ಲಿ ಹೆಜ್ಜೆ ಇರಿಸಿದೆ. ಕಂಪನಿ ಜನವರಿಯಲ್ಲೇ ತನ್ನ ಉದ್ಯೋಗಿಗಳಿಗೆ ಮೊದನೇ ಸುತ್ತಿನ ವೇತನ ಏರಿಕೆ ಹಾಗೂ ಬೋನಸ್ ನೀಡಿದೆ. ಸದ್ಯ ತಾವು ಎರಡನೇ ಸುಉತ್ತಿನ ವೇತನ ಏರಿಕೆ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಕಂಪನಿಯ HR ಹೆಡ್ ರಿಚ್ಚರ್ಡ್ ಲೋಬೋ ತಿಳಿಸಿದ್ದಾರೆ.
ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?
ಇನ್ನು ಮತ್ತೊಂದು ಪ್ರಸಿದ್ಧ ಕಂಪನಿ ಟಿಸಿಎಸ್ ಕೂಡಾ ಇಂತಹುದೇ ಕ್ರಮ ಅನುಸರಿಸಿದೆ. ಕೇವಲ ಆರು ತಿಂಗಳ ಅಂತರದಲ್ಲಿ ಇದು ತನ್ನ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಉದ್ಯೋಗಿಗಳಿಗೆ ವೇತನ ಏರಿಕೆ ಮಾಡಿದೆ. ಇನ್ನು ಟೈಮ್ಸ್ ಆಫ್ ಇಂಡಿಯಾ ವರದಿಯನ್ವಯ ಟಿಸಿಎಸ್ ಯಾವತ್ತೂ ಮಾಡುವ ವೇತನ ಏರಿಕೆಗಿಂತ ಶೇ. 6-8ರಷ್ಟು ಹೆಚ್ಚುವರಿಯಾಗೇ ಏರಿಕೆ ಮಾಡಿದೆ ಎಂದಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ವೇತನ ಏರಿಕೆ ನೀಡಿದ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಖುಷಿ ಪಡಿಸಿದ್ದಾರೆ. ಈ ವೇತನ ಏರಿಕೆ ವರ್ಕ್ ಫ್ರಂ ಹೋಂ ಮಾಡುತ್ತಿರುವ ಉದ್ಯೋಗಿಗಳಿಗೆ ಮತ್ತಷ್ಟು ಹುರುಪಿನಿಂದ ಕಾರ್ಯ ನಿರ್ವಹಿಸಲು ಬಲ ತುಂಬಲಿದೆ ಎಂಬುವುದು ನಿಜ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona