ದೇಶದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಿದರೆ ಪ್ರೋತ್ಸಾಹಧನ!

ದೇಶದಲ್ಲೇ ಲ್ಯಾಪ್‌ಟಾಪ್‌ ಉತ್ಪಾದಿಸಿದರೆ ಪ್ರೋತ್ಸಾಹಧನ| 7350 ಕೋಟಿ ರು. ಯೋಜನೆಗೆ ಕೇಂದ್ರ ಸಂಪುಟ ಅಸ್ತು| ಮೊಬೈಲ್‌, ಟೆಲಿಕಾಂ ಬಳಿಕ ಹಾರ್ಡ್‌ವೇರ್‌ಗೂ ಪ್ರೋತ್ಸಾಹ

Govt clears Rs 7350 crore PLI booster for production of laptops tablets PCs pod

ನವದೆಹಲಿ(ಫೆ.25): ತಂತ್ರಜ್ಞಾನ ಕ್ಷೇತ್ರದ ಉಪಕರಣಗಳ ಉತ್ಪಾದನಾ ಕೇಂದ್ರವನ್ನಾಗಿ ಭಾರತವನ್ನು ರೂಪಾಂತರಗೊಳಿಸುವ ಹೆಬ್ಬಯಕೆಯೊಂದಿಗೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರಕ್ಕೆ ಸಂಬಂಧಿಸಿದ ಹಾರ್ಡ್‌ವೇರ್‌ ಉತ್ಪಾದಿಸುವ ಕಂಪನಿಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್‌ ಇನ್‌ ಒನ್‌ ಪಿಸಿ ಹಾಗೂ ಸರ್ವರ್‌ಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಮುಂದಿನ 4 ವರ್ಷಗಳಲ್ಲಿ 7350 ಕೋಟಿ ರು. ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ.

ಭಾರತ ಶೇ.80ರಷ್ಟುಹಾರ್ಡ್‌ವೇರ್‌ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಭಾರತದಲ್ಲೇ ಮೊಬೈಲ್‌ ಫೋನ್‌ ಹಾಗೂ ಅದರ ಬಿಡಿಭಾಗಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅದಕ್ಕೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತವಾಗಿದ್ದ ಸರ್ಕಾರ ಟೆಲಿಕಾಂ ಉಪಕರಣನ್ನು ತಯಾರಿಸುವ ಕಂಪನಿಗಳಿಗೆ 12,195 ಕೋಟಿ ರು. ಪ್ರೋತ್ಸಾಹ ನೀಡುವ ಯೋಜನೆಗೆ ಕಳೆದ ವಾರವಷ್ಟೇ ಅನುಮತಿ ನೀಡಿತ್ತು. ಇದೀಗ ಅದನ್ನು ಐಟಿ ಹಾರ್ಡ್‌ವೇರ್‌ ಕ್ಷೇತ್ರಕ್ಕೂ ವಿಸ್ತರಿಸಿದೆ.

ಭಾರತದಲ್ಲೇ ಐಟಿ ಹಾರ್ಡ್‌ವೇರ್‌ ಉತ್ಪಾದನೆ ಮಾಡುವ ಕಂಪನಿಗಳಿಗೆ 4 ವರ್ಷಗಳ ಅವಧಿಯಲ್ಲಿ 7350 ಕೋಟಿ ರು. ಪ್ರೋತ್ಸಾಹಧನ ಸಿಗಲಿದೆ. ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿಸಿ, ಉತ್ಪಾದನೆ ಆರಂಭಿಸಿ, ಮಾರಾಟ ಗುರಿ ತಲುಪಿದ ಬಳಿಕವಷ್ಟೇ ಸರ್ಕಾರ ಕಂಪನಿಗಳಿಗೆ ಪ್ರೋತ್ಸಾಹಧನವನ್ನು ನೀಡುತ್ತದೆ. ಇದರಿಂದ ಆ ಉಪಕರಣಗಳ ಆಮದಿನ ಮೇಲೆ ಅವಲಂಬನೆ ತಗ್ಗಲಿದ್ದು, ಭಾರತ ಸ್ವಾವಲಂಬನೆ ಸಾಧಿಸಲಿದೆ.

ಈ ಯೋಜನೆಯಿಂದ ಮುಂದಿನ 4 ವರ್ಷಗಳಲ್ಲಿ 3.26 ಲಕ್ಷ ಕೋಟಿ ರು. ಮೊತ್ತದ ಐಟಿ ಹಾರ್ಡ್‌ವೇರ್‌ ದೇಶದಲ್ಲಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಆ ಪೈಕಿ ಶೇ.75ರಷ್ಟುಅಂದರೆ 2.45 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತಾಗುವ ಅಂದಾಜಿದೆ. 2700 ಕೋಟಿ ರು. ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಮುಂದಿನ 4 ವರ್ಷಗಳಲ್ಲಿ ಈ ಯೋಜನೆಯಿಂದ 1.80 ಲಕ್ಷ ಉದ್ಯೋಗಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗೆ ಭಾರಿ ಬೇಡಿಕೆ ಇದ್ದು, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ 29470 ಕೋಟಿ ರು. ಮೌಲ್ಯದ ಲ್ಯಾಪ್‌ಟಾಪ್‌, 2780 ಕೋಟಿ ರು. ಮೌಲ್ಯದ ಟ್ಯಾಬ್ಲೆಟ್‌ಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗುತ್ತಿದೆ.

ಪ್ರೋತ್ಸಾಹಧನ ಹೇಗೆ?

- ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿಸಿ, ಉತ್ಪಾದನೆ ಆರಂಭಿಸಿ, ಮಾರಾಟ ಗುರಿ ತಲುಪಿದ ಬಳಿಕ ಕಂಪನಿಗಳಿಗೆ ಪ್ರೋತ್ಸಾಹಧನ

- ನಿವ್ವಳ ಮಾರಾಟ ಆಧರಿಸಿ ಶೇ.4, ಶೇ.2 ಅಥವಾ ಶೇ.1ರ ಪ್ರೋತ್ಸಾಹಧನ ನೀಡಿಕೆ

- ಭಾರತದಲ್ಲಿ 2019-20ರಲ್ಲಿ ಉತ್ಪಾದಿಸಿ ಮಾರಾಟ ಮಾಡಿದ ಆಧಾರದಲ್ಲಿ ಇದರ ಹಂಚಿಕೆ

- ಮುಂದಿನ 4 ವರ್ಷದ ಅವಧಿಯಲ್ಲಿ ಅರ್ಹ ಕಂಪನಿಗಳಿಗೆ ಪ್ರೋತ್ಸಾಹಧನ

Latest Videos
Follow Us:
Download App:
  • android
  • ios