Asianet Suvarna News Asianet Suvarna News

ಕೊನೆಗೂ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಟೆಸ್ಲಾಒಲವು; ಮಾರಾಟಗಾರರ ಕೇಂದ್ರ ಸ್ಥಾಪನೆಗೆ ಒಪ್ಪಿಗೆ

ಭಾರತದ ವಾಹನ ಮಾರುಕಟ್ಟೆ ಪ್ರವೇಶಿಸುವ ಟೆಸ್ಲಾ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ಸಂಬಂಧ ಹಲವು ವರ್ಷಗಳಿಂದ ಭಾರತ ಸರ್ಕಾರ ಹಾಗೂ ಟೆಸ್ಲಾ ಸಂಸ್ಥೆ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆ ಬಿದ್ದಂತೆ ಕಾಣುತ್ತಿದೆ. ಕೊನೆಗೂ ಕೇಂದ್ರ ಸರ್ಕಾರದ ಬೇಡಿಕೆಗೆ ಮಣಿದಿರುವ ಟೆಸ್ಲಾ, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟಗಾರರ ಕೇಂದ್ರ ಸ್ಥಾಪಿಸಲು ಒಪ್ಪಿಗೆ ಸೂಚಿಸಿದೆ.

After Centres demand Tesla agrees to set up vendor base in India Report anu
Author
First Published Jun 7, 2023, 4:26 PM IST

ನವದೆಹಲಿ (ಜೂ.7): ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕದ  ಹೊರತಾಗಿ ಮಾರಾಟಗಾರರ ಕೇಂದ್ರ ತೆರೆಯಲು ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಕೇಂದ್ರ ಸರ್ಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕ ಸ್ಥಾಪಿಸಿ, ಆ ನಂತರ ಮಾರಾಟಗಾರರ ಬೇಸ್ ಸ್ಥಾಪಿಸುವಂತೆ ಟೆಸ್ಲಾಕ್ಕೆ ಮನವಿ ಮಾಡಿತ್ತು. ಪ್ರಸ್ತುತ ಬಹುತೇಕ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಚೀನಾದಲ್ಲಿ ನಡೆಯುತ್ತಿದೆ.  ಉತ್ಪಾದನೆ ಪ್ರಕ್ರಿಯೆ ಹಾಗೂ ಪೂರೈಕೆ ಸರಪಳಿಯನ್ನು ಪ್ರತ್ಯೇಕಿಸಲು ಕಂಪನಿ ಇಷ್ಟಪಡುವುದಿಲ್ಲ. ಹೀಗಾಗಿ ಭಾರತದಲ್ಲಿ ಮಾರಾಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬ ಮಾಡೋದಿಲ್ಲ ಎಂದು ಟೆಸ್ಲಾ ಸ್ಪಷ್ಟಪಡಿಸಿದೆ. 2020ರ  ಗಾಲ್ವಾನ್ ಘರ್ಷಣೆ ಬಳಿಕ ಭಾರತ ಶೇ.100ರಷ್ಟು ಚೀನಾದ ಹೂಡಿಕೆಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಉತ್ಪಾದನೆ ಪ್ರಾರಂಭಿಸಲು ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಮಾರಾಟಗಾರರನ್ನು ಭಾರತಕ್ಕೆ ಸ್ಥಳಾಂತರಿಸಬೇಕು ಹಾಗೂ ಅವರು ಭಾರತೀಯ ಕಂಪನಿಗಳ ಜೊತೆಗೆ ಸೇರಿ ಜಂಟಿ ಉದ್ಯಮ ಪ್ರಾರಂಭಿಸೋದು ಅಗತ್ಯ. ಭಾರತದಲ್ಲಿನ ಯೋಜನೆಗಳನ್ನು ವಿವರಿಸುವ ಹಾಗೂ ಎಲೆಕ್ಟ್ರಿಕ್ ವಾಹನಗಳ ದೇಶೀಯ ಉತ್ಪಾದನೆ ಪ್ರಾರಂಭಿಸಲು ಅಗತ್ಯವಾದ ಸ್ಥಳೀಯ ಪೂರೈಕೆ ಸರಪಳಿಯನ್ನು ರೂಪಿಸುವ ನೀಲಿ ನಕಾಶೆ  ನೀಡುವಂತೆ ಕೇಂದ್ರ ಸರ್ಕಾರ ಕಳೆದ ತಿಂಗಳು ಟೆಸ್ಲಾಗೆ ಮನವಿ ಮಾಡಿತ್ತು. 

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಂಬಂಧಿಸಿ ಟೆಸ್ಲಾ ನೀಡುವ ನೀಲಿ ನಕಾಶೆಯನ್ನು ಕೇಂದ್ರ ಸರ್ಕಾರ ಅಧ್ಯಯನ ಮಾಡಿ, ಆ ಬಳಿಕ ಕಂಪನಿಗೆ ಎಷ್ಟು ಸುಂಕ ವಿನಾಯಿತಿ ನೀಡಬಹುದು ಎಂಬುದನ್ನು ನಿರ್ಧರಿಸುತ್ತದೆ. ಮುಂದಿನ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಈ ಸಂಬಂಧ ಭಾರತಕ್ಕೆ ವಿವರವಾದ ಪ್ರಸ್ತಾವನೆಯನ್ನು ಟೆಸ್ಲಾ ನೀಡಲಿದೆ. ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳ ದೇಶೀಯ ಜೋಡಣೆ ಘಟಕ ಸ್ಥಾಪಿಸಿದರೆ ಆಮದು ಮಾಡಿಕೊಳ್ಳುವ ಬಿಡಿ ಭಾಗಗಳಿಗೆ ಆಮದು ರಿಯಾಯ್ತಿ ನೀಡಲಾಗುವುದು ಎಂದು ಈ ವರ್ಷದ ಮೇ ಮಧ್ಯಭಾಗದಲ್ಲಿ ಭಾರತಕ್ಕೆ ಭೇಟಿ ನೀಡಿರುವ ಟೆಸ್ಲಾ ತಂಡಕ್ಕೆ ಸರ್ಕಾರ ಮಾಹಿತಿ ನೀಡಿದೆ. 

ಆಮದು ವಾಹನಗಳಿಗೆ ಸುಂಕ ಕಡಿತ; ಟೆಸ್ಲಾ ಬೇಡಿಕೆಗೆ ಧ್ವನಿ ಜೋಡಿಸಿದ ಆಡಿ

ಅಮೆರಿಕದ ಪ್ರಮುಖ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇಂಕ್ (Tesla Inc) ಬಹುಸಮಯದಿಂದ ಭಾರತಕ್ಕೆ ಆಗಮಿಸಲು ಪ್ರಯತ್ನ ನಡೆಸುತ್ತ ಬಂದಿದೆ. ಕಳೆದ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಮಾರುಕಟ್ಟೆ ಅಧ್ಯಯನಕ್ಕೆ ತಂಡವನ್ನು ಟೆಸ್ಲಾ ಕಳುಹಿಸಿತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ಸ್ಥಳ ಪರಿಶೀಲನೆ ಕೂಡ ನಡೆಸಿತ್ತು. ಚೀನಾದಲ್ಲಿ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲ್ಪಟ್ಟ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಯೋಜನೆ ಹೊಂದಿತ್ತು. ಇದಕ್ಕಾಗಿ ಆಮದು ಸುಂಕದಲ್ಲಿ ಕಡಿತ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಮಾಡಿತ್ತು. ಆದರೆ, ಟೆಸ್ಲಾದ ಈ ಬೇಡಿಕೆಗೆ ಪ್ರತಿಯಾಗಿ ಭಾರತ ಸರ್ಕಾರ, ಸ್ಥಳೀಯವಾಗಿ ಉತ್ಪಾದನೆ ಮಾಡುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು (Electric vehicles –EV) ಮಾರಾಟ ಮಾಡುವ ಯೋಜನೆಯನ್ನು ಸ್ಥಗಿತಗೊಳಿಸಿತ್ತು.

ವಿಶ್ವದ ನಂ.1 ಶ್ರೀಮಂತ ಪಟ್ಟ ಮರಳಿ ಎಲಾನ್ ಮಸ್ಕ್ ತೆಕ್ಕೆಗೆ; 19ನೇ ಸ್ಥಾನಕ್ಕೆ ಕುಸಿದ ಅದಾನಿ

ಇನ್ನು ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಪ್ರಾರಂಭಿಸುವ ಸಂಬಂಧ ಕಳೆದ ವರ್ಷ ಪ್ರತಿಕ್ರಿಯಿಸಿದ್ದ ಸಿಇಒ ಎಲಾನ್ ಮಸ್ಕ್, ಭಾರತದಲ್ಲಿ ಕಾರುಗಳನ್ನು ಮಾರಾಟ ಹಾಗೂ ಸರ್ವೀಸ್ ಮಾಡಲು ಮೊದಲು ಅನುಮತಿ ಸಿಗದ ಹೊರತು ಅಲ್ಲಿ ಕಾರುಗಳ ಉತ್ಪಾದನೆ ಸಾಧ್ಯವಿಲ್ಲ ಎಂದಿದ್ದರು. 

ಟೆಸ್ಲಾ ಚೀನಾದ ಶಾಂಘೈನಲ್ಲಿ ಗಿಗಾಫ್ಯಾಕ್ಟರಿ 3 ಎಂಬ ಉತ್ಪಾದನಾ ಕೇಂದ್ರ ಹೊಂದಿದೆ. ಇದನ್ನು 2018 ರಲ್ಲಿ ಪ್ರಾರಂಭಿಸಲಾಗಿತ್ತು.  ಘಟಕ ನಿರ್ಮಾಣ ಪ್ರಾರಂಭವಾದ ಒಂದು ವರ್ಷದ ನಂತರ ಅಂದರೆ ಅಕ್ಟೋಬರ್ 2019 ರಲ್ಲಿ ಇದು ಉತ್ಪಾದನೆಯನ್ನು ಪ್ರಾರಂಭಿಸಿತು. 
 

Follow Us:
Download App:
  • android
  • ios