ಗುಜರಾತ್‌ನಲ್ಲಿ ಅದಾನಿ ಗ್ರೂಪ್‌ನ ಘಟಕ ಸ್ಥಗಿತ: ಸಂಪನ್ಮೂಲ ಕ್ರೋಢೀಕರಿಸಲು ಕಸರತ್ತು
Americaದ ಹಿಂಡನ್‌ಬರ್ಗ್ ಸಂಸ್ಥೆಯ ವರದಿಯಿಂದಾಗಿ 11.55 ಲಕ್ಷ ಕೋಟಿ ರೂ ನಷ್ಟು ಮೌಲ್ಯ ಕಳೆದುಕೊಂಡಿರುವ ಅದಾನಿ ಸಮೂಹ, ಗುಜರಾತಿನ ಮುಂದ್ರಾದಲ್ಲಿ 34900 ಕೋಟಿ ರು. ವೆಚ್ಚದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಪೆಟ್ರೋಕೆಮಿಕಲ್ ಯೋಜನೆಯನ್ನು ಸ್ಥಗಿತಗೊಳಿಸಿದೆ.
ನವದೆಹಲಿ: ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯ ವರದಿಯಿಂದಾಗಿ 11.55 ಲಕ್ಷ ಕೋಟಿ ರೂ ನಷ್ಟು ಮೌಲ್ಯ ಕಳೆದುಕೊಂಡಿರುವ ಅದಾನಿ ಸಮೂಹ, ಗುಜರಾತಿನ ಮುಂದ್ರಾದಲ್ಲಿ 34900 ಕೋಟಿ ರು. ವೆಚ್ಚದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಪೆಟ್ರೋಕೆಮಿಕಲ್ ಯೋಜನೆಯನ್ನು ಸ್ಥಗಿತಗೊಳಿಸಿದೆ. ತನ್ನ ಕಾರ್ಯಾಚರಣೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣ ಹಾಗೂ ಹೂಡಿಕೆದಾರರ ಕಳವಳವನ್ನು ನಿವಾರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಗುಜರಾತಿನ (Gujarat) ಕಛ್ ಜಿಲ್ಲೆಯಲ್ಲಿ ಈಗಾಗಲೇ ಇರುವ ಅದಾನಿ ಬಂದರು (Adani Fort) ಹಾಗೂ ವಿಶೇಷ ವಿತ್ತ ವಲಯದಲ್ಲಿ ಕಲ್ಲಿದ್ದಲು ಟು ಪಿವಿಸಿ ಘಟಕ ಸ್ಥಾಪಿಸಲು ಮುಂದ್ರಾ ಪೆಟ್ರೋಕೆಮ್ (Mundra Petrochem Company)ಕಂಪನಿಯನ್ನು 2021ರಲ್ಲಿ ಅದಾನಿ ಸಮೂಹ ಸೃಷ್ಟಿಸಿತ್ತು. ಆದರೆ ಹಿಂಡನ್‌ಬಗ್‌ರ್ ವರದಿಯ ನಂತರ ಕಂಪನಿ ಅಪಾರ ನಷ್ಟಕ್ಕೆ ಈಡಾದ ಹಿನ್ನೆಲೆಯಲ್ಲಿ ಘಟಕಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಎಲ್ಲ ಸೇವೆಗಳ ಮಾರಾಟಗಾರರು, ಪೂರೈಕೆದಾರರಿಗೆ ಇ-ಮೇಲ್ ರವಾನಿಸಿದೆ.
ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್
ಅಮೆರಿಕದ ಮೂಲದ ಶಾರ್ಟ್ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿದ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳು ಮಾರುಕಟ್ಟೆಯಲ್ಲಿ ದಯನೀಯ ಸ್ಥಿತಿಗೆ ಬಂದು ತಲುಪಿವೆ. ಹೂಡಿಕೆದಾರರ ಹಾಗೂ ಜನರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸುವ ದೃಷ್ಟಿಯಿಂದ ಅದಾನಿ ಗ್ರೂಪ್, ದುಬೈ, ಲಂಡನ್ ಸೇರಿದಂತೆ ಅಮೆರಿಕದ ಕೆಲವು ಪ್ರಮುಖ ನಗರಗಳಲ್ಲಿ ರೋಡ್‌ಶೋ ನಡೆಸಲು ಮುಂದಾಗಿತ್ತು. ಫೆಬ್ರವರಿ ಕೊನೆಯಲ್ಲಿ ಸಿಂಗಾಪುರ ಹಾಗೂ ಹಾಂಕಾಂಗ್‌ನಲ್ಲಿ ಅದಾನಿ ಗ್ರೂಪ್‌ನಿಂದ ರೋಡ್ ಶೋ ನಡೆದಿತ್ತು. ಈ ತಿಂಗಳ ಆರಂಭದ ಕೆಲವು ದಿನಗಳಲ್ಲೂ ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕಂಪನಿಯ ರೋಡ್‌ಶೋ ನಡೆದಿದೆ ಎಂದು ವರದಿಯಾಗಿದೆ. ಅಮೆರಿಕದ ಶಾರ್ಟ್ ಸೆಲ್ಲರ್ ವರದಿಯಿಂದ ಕಂಪನಿಯ ವ್ಯವಹಾರಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕೃತಕವಾಗಿ ಷೇರುಗಳ ಮೌಲ್ಯ ಏರಿಕೆ, ಅವ್ಯವಹಾರ ಹಾಗೂ ಆರ್ಥಿಕ ಲೋಪದೋಷಗಳನ್ನು ಮಾಡಿದ ಆರೋಪಗಳನ್ನು ಹಿಂಡೆನ್‌ಬರ್ಗ್, ಅದಾನಿ ಗ್ರೂಪ್ ಮೇಲೆ ಹೊರಿಸಿತ್ತು. ಆರಂಭದಲ್ಲಿ ಈ ಬಗ್ಗೆ ಕಂಪನಿ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ, ಕಂಪನಿಯ ಷೇರುಗಳು ದಿನದಿಂದ ದಿನಕ್ಕೆ ಇಳಿಕೆಯಾದಾಗ ಹಾಗೂ ಸುಪ್ರೀಂ ಕೋರ್ಟ್ ಕೂಡ ತನಿಖೆಗೆ ಅದೇಶ ನೀಡಿದಾಗ, ಅದಾನಿ ಗ್ರೂಪ್ ಹೂಡಿಕೆದಾರರ ವಿಶ್ವಾಸ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.
ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್ ಅದಾನಿ
ಹಿಂಡೆನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್‌ನ ಮೇಲೆ ಹೂಡಿಕೆ ಮಾಡಿದ್ದ ಕೋಟ್ಯಂತರ ರೂಪಾಯಿ ಹಣ ಕರಗಿ ಹೋಗಿತ್ತು. ಹಾಗಿದ್ದರೂ ಇತ್ತೀಚೆಗೆ ದೊಡ್ಡ ಹೂಡಿಕೆ ಫರ್ಮ್‌ನಿಂದ ಅದಾನಿ ಗ್ರೂಪ್‌ನ ಮೇಲೆ ದಾಖಲೆಯ ಪ್ರಮಾಣದ ಹೂಡಿಕೆಯಾದ ಬಳಿಕ ಈ ರೋಡ್‌ಶೋ ನಡೆದಿದೆ. ಅಮೆರಿಕ ಮೂಲದ ಬಾಟಿಕ್ ಇನ್ವೆಸ್ಟ್‌ಮೆಂಟ್ ಫರ್ಮ್ ಜಿಕ್ಯುಜಿ ಪಾರ್ಟ್‌ನರ್ಸ್ ಅಂದಾಜು 15,446 ಕೋಟಿ ರೂಪಾಯಿ ಮೌಲ್ಯದ ಅದಾನಿ ಗ್ರೂಪ್‌ನ ನಾಲ್ಕು ಕಂಪನಿಗಳ ಷೇರುಗಳನ್ನು ಖರೀದಿ ಮಾಡಿದೆ. ಇದರಲ್ಲಿ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ಅದಾನಿ ಟ್ರಾನ್ಸ್‌ಮಿಷನ್ ಕಂಪನಿಗಳು ಸೇರಿವೆ. ಈ ಹೂಡಿಕೆಯ ಬಳಿಕ ಅದಾನಿ ಗ್ರೂಪ್‌ನ 10 ಷೇರುಗಳ ಪೈಕಿ 8 ಷೇರುಗಳ ಬೆಲೆಯಲ್ಲಿ ಮಂಗಳವಾರ ಏರಿಕೆಯಾಗಿದೆ. ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಮಾತ್ರ ಏರುಗತಿ ಹಿಡಿದಿಲ್ಲ.
ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ
GQG ಪಾಲುದಾರರ ಅಧ್ಯಕ್ಷ ರಾಜೀವ್ ಜೈನ್ ಸಂದರ್ಶನವೊಂದರಲ್ಲಿ ಖರೀದಿಯ ಹಿಂದಿನ ಯೋಜನೆಯನ್ನು ವಿವರಿಸಿದ್ದಾರೆ. ಅವರು ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಭಾರತಕ್ಕೆ ಇದೀಗ ತನ್ನ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸುವವರ ಅಗತ್ಯವಿದೆ ಮತ್ತು ಅದಾನಿ ಗ್ರೂಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ಈ ಹಿಂದೆ ಅದಾನಿ ಗ್ರೂಪ್‌ನೊಂದಿಗೆ ಕೆಲಸ ಮಾಡಿದ ಜನರೊಂದಿಗೆ ಅವರ ತಂಡವು ಸಾಕಷ್ಟು ಪರಿಶ್ರಮ ವಹಿಸಿ ಕೆಲಸ ಮಾಡಿದೆ ಅವರ ವರದಿಯ ಬಳಿಕವೇ ಅದಾನಿ ಗ್ರೂಪ್‌ನ ಮೇಲೆ ಹೂಡಿಕೆ ಮಾಡುವ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.