ನಾರಾಯಣಮೂರ್ತಿ ಹೇಳಿದ 5 ವಿವಾದಾತ್ಮಕ ಹೇಳಿಕೆಗಳು
Narayana Murthy comments: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿಯವರ ಇತ್ತೀಚಿನ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿವೆ. 70 ಗಂಟೆಗಳ ಕೆಲಸದಿಂದ ಹಿಡಿದು ಪೋಷಕರ ಶಿಸ್ತಿನ ಕೊರತೆಯವರೆಗೆ, ಅವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

ಬೆಂಗಳೂರು: ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ ಕೆಲವು ಹೇಳಿಕೆಗಳಿಂದಲೇ ಸಖತ್ ಸುದ್ದಿಯಾಗುತ್ತಿದ್ದಾರೆ. ನಾರಾಯಣ ಮೂರ್ತಿ ಅವರ ಹೇಳಿಕೆಗಳನ್ನು ಇಂದಿನ ಜನರೇಷನ್ ಯುವ ಸಮುದಾಯ ತೀವ್ರವಾಗಿ ಟೀಕಿಸಿದೆ. ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ರೂ, ಅಳಿಯನೊಂದಿಗೆ ಕ್ರಿಕೆಟ್ ನೋಡಿದರೂ ನಾರಾಯಣ ಮೂರ್ತಿ ಟ್ರೋಲ್ ಆಗುತ್ತಿದ್ದಾರೆ. ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂಬ ಹೇಳಿಕೆ ಕಾರ್ಪೋರೇಟ್ ವಲಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿತ್ತು. 70 ಗಂಟೆ ಕೆಲಸದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೇ ಮೊದಲೇನಲ್ಲ, ಈ ಹಿಂದೆಯೂ ನಾರಾಯಣ ಮೂರ್ತಿ ನೀಡಿದ ಕೆಲ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈ ಲೇಖನದಲ್ಲಿ ಚರ್ಚಗೆ ಗ್ರಾಸವಾದ ನಾರಾಯಣಮೂರ್ತಿ ನೀಡಿದ ಹೇಳಿಕೆಗಳು ಇಲ್ಲಿವೆ.
ಹೇಳಿಕೆ 1: ಪೋಷಕರಲ್ಲಿ ಶಿಸ್ತಿನ ಕೊರತೆ
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ (13th edition of Conceptual Physics) ಮಾತನಾಡಿದ್ದ ನಾರಾಯಣಮೂರ್ತಿ, ಮಕ್ಕಳಲ್ಲಿ ಶೈಕ್ಷಣಿಕ ಹವ್ಯಾಸಗಳನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗುತ್ತದೆ. ಮಕ್ಕಳಿಗೆ ಅಧ್ಯಯನದ ವಾತಾವರಣ ನಿರ್ಮಿಸುವ ಬದಲು ಮನರಂಜನೆಗೆ ಆದ್ಯತೆ ನೀಡುವ ಕೆಲವು ಪೋಷಕರಲ್ಲಿ ಶಿಸ್ತಿನ ಕೊರತೆಯಿದೆ ಎಂದು ಟೀಕಿಸಿದ್ದರು. ಪೋಷಕರು ಸಿನಿಮಾ ನೋಡಲು ಹೋಗಿ, ಮಕ್ಕಳಿಗೆ ಓದಲು ಹೇಳುತ್ತಾರೆ. ಆದ್ರೆ ಇದು ವರ್ಕೌಟ್ ಆಗಲ್ಲ. ಪೋಷಕರು ಮಕ್ಕಳೊಂದಿಗೆ ಮಾತನಾಡಿ ಅಧ್ಯಯನದ ಬಗ್ಗೆ ಹೇಳಬೇಕು ಎಂದಿದ್ದರು. ಇದೇ ವೇಳೆ ಸುಧಾಮೂರ್ತಿ ಹೇಗೆ ಮಕ್ಕಳೊಂದಿಗೆ ದಿನದಲ್ಲಿ 3.5 ಗಂಟೆ ಸಮಯ ಕಳೆಯುತ್ತಿದ್ರು ಎಂದು ಉದಾಹರಣೆ ನೀಡಿದ್ದರು. ಈ ಹೇಳಿಕೆಗೆ ಪೋಷಕರ ವಲಯದಿಂದ ಅಸಮಾಧಾನ ವ್ಯಕ್ತವಾಗಿತ್ತು.
ಹೇಳಿಕೆ 2: ದುಬಾರಿ ಕೋಚಿಂಗ್ ಸಂಸ್ಥೆ
ಕೋಚಿಂಗ್ ಸಂಸ್ಥೆಗಳ ಕೇಂದ್ರವಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದ ನಾರಾಯಣಮೂರ್ತಿ, ಮಕ್ಕಳ ಉತ್ತಮ ಕಲಿಕೆಗೆ ಕೋಚಿಂಗ್ ಕ್ಲಾಸ್ ಅಗತ್ಯವಿಲ್ಲ. ಮಕ್ಕಳು ಸಾಮಾನ್ಯ ಕಲಿಕೆಯ ಪಾಠ ನಿರ್ಲಕ್ಷ್ಯ ಮಾಡುತ್ತಾರೆ. ಪೋಷಕರು ದುಬಾರಿ ಕೋಚಿಂಗ್ ಕೇಂದ್ರದ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದ್ದರು.
ಹೇಳಿಕೆ 3: 70 ಗಂಟೆಯ ಕೆಲಸ
ಯುವ ಸಮುದಾಯ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಮತ್ತು ವಾರಕ್ಕೆ ಎರಡರ ಬದಲಾಗಿ ಒಂದು ರಜೆ ಸಾಕು ಎಂಬ ಅಭಿಪ್ರಾಯವನ್ನು ನಾರಾಯಣಮೂರ್ತಿ ವ್ಯಕ್ತಪಡಿಸಿದ್ದರು. ಇದು ನನ್ನ ದೇಶ, ನಾನು ವಾರಕ್ಕೆ 70 ಗಂಟೆ ಕೆಲಸ ಮಾಡುವೆ ಎಂದು ಯುವ ಸಮುದಾಯ ಸಂಕಲ್ಪ ಮಾಡಬೇಕು ಎಂದು ನಾರಾಯಣಮೂರ್ತಿ ಕರೆ ನೀಡಿದ್ದರು.
ಇದನ್ನೂ ಓದಿ: 70 ಗಂಟೆ ಕೆಲ್ಸ ನಿಮ್ಗೆ ಕೋಟಿ ರೂ ಕೊಡುತ್ತೆ, ಉದ್ಯೋಗಿ ಕತೆ ಏನು?ಮೂರ್ತಿಗೆ ನಮಿತಾ ಥಾಪರ್ ಪ್ರಶ್ನೆ!
ಹೇಳಿಕೆ 4: ಸಂಬಳ ತಾರತಮ್ಯ
2017ರಲ್ಲಿ ಇನ್ಫೋಸಿಸ್ ಸಂಸ್ಥೆಯ ಸಿಓಓ ಪ್ರವೀಣ್ ರಾವ್ ಅವರಿಗೆ ಹೆಚ್ಚಿಸಲಾದ ಸಂಬಳ ಪ್ರಮಾಣವನ್ನು ಸಾರ್ವಜನಿಕವಾಗಿಯೇ 'ಇದು ಸರಿಯಾದ ಕ್ರಮವಲ್ಲ" ಎಂದು ಟೀಕಿಸಿದ್ದರು. ಇಂತಹ ನಿರ್ಧಾರಗಳು ನೌಕರರ ನಂಬಿಕೆಗೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ವಾದಿಸಿದ್ದರು. ಇದು ನೌಕರರ ನಡುವಿನಲ್ಲಿ ಅಸಮಾನತೆಯನ್ನುಂಟು ಮಾಡುತ್ತೆ ಎಂದು ನಾರಾಯಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹೇಳಿಕೆ 5: ವರ್ಕ್ ಫ್ರಮ್ ಹೋಮ್‌ಗೆ ಅಸಮಾಧಾನ
ಕೋವಿಡ್-19 ಕಾಲಘಟ್ಟದಲ್ಲಿ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಲಾಗಿತ್ತು. ಕೊರೊನಾ ವೈರಸ್ ತೀವ್ರತೆ ಕಡಿಮೆಯಾಗುತ್ತಲೇ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುವಂತೆ ಕರೆ ನೀಡಿದ್ದರು. ಸಮಾರು 24 ರಿಂದ 30 ತಿಂಗಳು ಮನೆಯಲ್ಲಿದ್ದ ಉದ್ಯೋಗಿಗಳು ಕಚೇರಿಗೆ ಬರಲು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಈ ಹೇಳಿಕೆ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿತ್ತು.
ಇದನ್ನೂ ಓದಿ: Infosys share price: ಷೇರು ಬೆಲೆ ಕುಸಿತದಿಂದ ಒಂದೇ ನಿಮಿಷದಲ್ಲಿ ₹1800 ಕೋಟಿ ಕಳೆದುಕೊಂಡ ನಾರಾಯಣಮೂರ್ತಿ ಫ್ಯಾಮಿಲಿ!