70 ಗಂಟೆ ಕೆಲ್ಸ ನಿಮ್ಗೆ ಕೋಟಿ ರೂ ಕೊಡುತ್ತೆ, ಉದ್ಯೋಗಿ ಕತೆ ಏನು?ಮೂರ್ತಿಗೆ ನಮಿತಾ ಥಾಪರ್ ಪ್ರಶ್ನೆ!
ಕೋಟಿ ಕೋಟಿ ದುಡ್ಡು ಮಾಡುವವರು 70 ಗಂಟೆ ದುಡಿಯಬೇಕು. ಆದರೆ ಸಾಮಾನ್ಯ ಉದ್ಯೋಗಿ 70 ಅಲ್ಲ 100 ಗಂಟೆ ಮಾಡಿದರೂ ಆತನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಉದ್ಯಮಿ ನಮಿತಾ ಥಾಪರ್ ಹೇಳಿದ್ದಾರೆ. ಈ ಮೂಲಕ ನಾರಾಯಣಮೂರ್ತಿ ಸಲಹೆಯನ್ನು ಪ್ರಶ್ನಿಸಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅನ್ನೋ ಸಲಹೆ ಹಲವು ಭಾರಿ ಚರ್ಚೆಯಾಗಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಹಲವು ಕಂಪನಿ ಮಾಲೀಕರು, ನಿರ್ದೇಶಕರು 70 ಗಂಟೆ ಕೆಲಸ ಅವಶ್ಯಕತೆ ಇದೆ ಎಂದರೆ ಸಾಮಾನ್ಯ ಉದ್ಯೋಗಿಗಳು ಸೇರಿದಂತೆ ಮತ್ತೆ ಹಲವು ಸಿಇಒಗಳು ಈ ಸಲಹೆಯನ್ನು ವಿರೋಧಿಸಿದ್ದಾರೆ. ಇದೀಗ ಎಮ್‌ಕ್ಯೂರ್ ನಿರ್ದೇಶಕಿ ನಮಿತಾ ಥಾಪರ್ ಈ ಸಲಹೆಯನ್ನು ವಿರೋಧಿಸಿದ್ದಾರೆ.
ಟನ್ ಗಟ್ಟಲೇ ಹಣ ಮಾಡುವವರು 70 ಗಂಟೆ ಕೆಲಸ ಮಾಡುತ್ತಾರೆ. ಕಾರಣ ಕಂಪನಿ ಸಂಸ್ಥಾಪಕರು, ಸಿಇಒ, ಬಾಸ್ ಸೇರಿದಂತೆ ಪ್ರಮುಖರು ಒಂದೊಂದು ಗಂಟೆ ಹೆಚ್ಚು ಕೆಲಸ ಮಾಡಿದಂತೆ ಕೋಟಿ ಕೋಟಿ ರೂಪಾಯಿ ದುಡ್ಡು ಗಳಿಸುತ್ತಾರೆ. ಷೇರು, ಕಂಪನಿ ಲಾಭ, ಕಂಪನಿಯ ವೇತನ ಸೇರಿದಂತೆ ಹಲವು ಮೂಲಗಳಿಂದ ಕೋಟಿ ಕೋಟಿ ರೂಪಾಯಿ ಗಳಿಸುತ್ತಾರೆ. ಆದರೆ ಸಾಮಾನ್ಯ ಉದ್ಯೋಗಿಗೆ ಸಿಗುವುದೇನು ಎಂದು ನಮಿತಾ ಥಾಪರ್ ಪ್ರಶ್ನಿಸಿದ್ದಾರೆ.
ಸಂಸ್ಥಾಪಕರು ದಿನದ 24 ಗಂಟೆ ಕೂಡ ದುಡಿಯುತ್ತಾರೆ. ಅದು ಅನಿವಾರ್ಯವಾಗಿರುತ್ತದೆ. ಕಾರಣ ಕಂಪನಿಯನ್ನು ಕಟ್ಟಿಬೆಳೆಸುವ ಜವಾಬ್ದಾರಿ ಆತನ ಮೇಲಿರುತ್ತದೆ. ಹೀಗಾಗಿ ಸಮಯ ನೋಡದೆ ಕೆಲಸ ಮಾಡುತ್ತಾರೆ. ಆದರೆ ಸಂಸ್ಥಾಪಕ ಮಾಡುವ ಕೆಲಸದ ಸಮಯ,ಪರಿಶ್ರಮವನ್ನು ಒಬ್ಬ ಸಾಮಾನ್ಯ ಉದ್ಯೋಗಿ ಮಾಡಬೇಕು ಎನ್ನುವುದು ತಪ್ಪು ಎಂದು ನಮಿತಾ ಥಾಪರ್ ಹೇಳಿದ್ದಾರೆ.
ನಾನು ಸೇರಿದಂತೆ ಹಲವು ಕಂಪನಿಗಳ ಸಂಸ್ಥಾಪಕರು ಕಂಪನಿಯ ಪಾಲು ಹೊಂದಿರುತ್ತಾರೆ. ಹೀಗಾಗಿ ಸಮಯ ನೋಡದೆ ಕೆಲಸ ಮಾಡುತ್ತಾರೆ. ಆದರೆ ಅದು ಉದ್ಯೋಗಿಗಳಿಗೆ ಸಾಧ್ಯವಿಲ್ಲ. ಅವರು ತಿಂಗಳ ವೇತನಕ್ಕಾಗಿ ದುಡಿಯುತ್ತಾರೆ. ಉದ್ಯೋಗಿಗಳನ್ನು ಈ ರೀತಿ ದುಡಿಸಿಕೊಂಡರೆ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ನಮಿತಾ ಥಾಪರ್ ಹೇಳಿದ್ದಾರೆ.
ಒಬ್ಬ ಕಂಪನಿ ಸಂಸ್ಥಾಪಕ ಕಂಪನಿಯನ್ನು ಬೆಳೆಸಲು ಅವಿರತ ಶ್ರಮವಹಿಸುತ್ತಾರೆ. ಅದೇ ಶ್ರಮವನ್ನು ಅದೇ ಕಂಪನಿಯ ಉದ್ಯೋಗಿಯಿಂದ ಬಯಸುವುದು ತಪ್ಪು. ಆತ 70 ಅಲ್ಲ 100 ಗಂಟೆ ಕೆಲಸ ಮಾಡಿದರೂ ವೇತನ ಹೊರತಪಡಿಸಿ ಇನ್ಯಾವುದು ಸಿಗುವುದಿಲ್ಲ. ಆತನಿಗೂ ವೈಯುಕ್ತಿಕ ಬದುಕು ಇರುತ್ತದೆ. ಕುಟುಂವಿದೆ. ಅದರ ಜವಾಬ್ದಾರಿಗಳೂ ಆತನಿಗಿರುತ್ತದೆ ಎಂದಿದ್ದಾರೆ.
ಕಂಪನಿ ಸಂಸ್ಥಾಪಕ, ಒಬ್ಬ ಉದ್ಯೋಗಿಯಿಂದ ಪ್ರಾಮಾಣಿಕತೆ ಬಯಸುವುದು ಸೂಕ್ತ. ಅಂದರೆ ಕೆಲಸದ ಅವಧಿಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುವುದು, ಕಂಪನಿಯ ಏಳಿಗೆಗಾಗಿ ಶ್ರಮಿಸುವುದು ಮುಖ್ಯ. ಆದರೆ ಗಂಟೆಗಳ ಲೆಕ್ಕದಲ್ಲಿ ಅಳೆಯುವುದು ಸಾಧ್ಯವಿಲ್ಲ. ನಿಗದಿತ ಅವಧಿಯಲ್ಲಿ ಆತ ಮಾಡಬೇಕಿರುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದರೆ ಸಾಕು ಎಂದು ನಮಿತಾ ಥಾಪರ್ ಹೇಳಿದ್ದಾರೆ.
ಎಮ್‌ಕ್ಯೂರ್ ಕಂಂಪನಿಯಲ್ಲಿ ನಾನು ಹಾಗೂ ನನ್ನ ಕುಟುಂಬ ಶೇಕಡಾ 80 ರಷ್ಟು ಪಾಲು ಹೊಂದಿದೆ. 3 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ ಎಮ್‌ಕ್ಯೂರ್ ಕಂಪನಿಗಾಗಿ ನಾನು 20 ಗಂಟೆ ದುಡಿಯುತ್ತೇನೆ. ಬಿಡುವಿಲ್ಲದೆ, ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತೇನೆ. ಇದೇ ರೀತಿ ನನ್ನ ಕಂಪನಿಯ ಉದ್ಯೋಗಿಗಳಿಂದ ಕೆಲಸ ಬಯಸುವುದಿಲ್ಲ. ಕಾರಣ ಅವರ ವೇತನ ಮಾತ್ರ ಪಡೆಯುತ್ತಾರೆ. ಅವರ ಆರ್ಥಿಕ ಆದಾಯ ನನ್ನ ರೀತಿ ಇರುವುದಿಲ್ಲ ಎಂದು ನಮಿತಾ ಥಾಪರ್ ಹೇಳಿದ್ದಾರೆ.