ಮತ್ತೆ ಭಾರತವನ್ನು ಟಾರ್ಗೆಟ್ ಮಾಡಿತಾ ಮಾಲ್ಡೀವ್ಸ್? 43 ಭಾರತೀಯರು ಸೇರಿ 186 ವಿದೇಶಿಗರನ್ನುಹೊರಗಟ್ಟಿದ ದ್ವೀಪರಾಷ್ಟ್ರ
ಭಾರತ ವಿರೋಧಿ ನಿಲುವು ಪ್ರದರ್ಶಿಸುತ್ತಿರುವ ಮಾಲ್ಡೀವ್ಸ್, ಈಗ 43 ಭಾರತೀಯರು ಸೇರಿದಂತೆ 186 ವಿದೇಶಿಗರನ್ನು ಗಡೀಪಾರು ಮಾಡಿದೆ. ಅಕ್ರಮ ಉದ್ಯಮಗಳ ವಿರುದ್ಧ ಸಮರ ಸಾರಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸ್ಪಷ್ಟನೆ ನೀಡಿದೆ.
ನವದೆಹಲಿ (ಫೆ.15): ಅಕ್ರಮ ಉದ್ಯಮದ ವಿರುದ್ಧ ಸಮರ ಸಾರಿರುವ ಮಾಲ್ಡೀವ್ಸ್, ಸುಮಾರು 186 ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಿದೆ. ಈ 186 ವಿದೇಶಿಗರಲ್ಲಿ 43 ಭಾರತೀಯರು ಕೂಡ ಸೇರಿದ್ದಾರೆ. ವರದಿಗಳ ಪ್ರಕಾರ ಗಡೀಪಾರು ಮಾಡಲಾಗಿರುವ 43 ಭಾರತೀಯರು ವೀಸಾ ಉಲ್ಲಂಘನೆ ಹಾಗೂ ಡ್ರಗ್ ಮಾರಾಟ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗಡೀಪಾರು ಮಾಡಿರುವ ವಿದೇಶಿಗರು ಬಾಂಗ್ಲಾದೇಶೀಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ 83 ಬಾಂಗ್ಲಾದೇಶೀಯರನ್ನು ಗಡೀಪಾರು ಮಾಡಲಾಗಿದೆ. ಇನ್ನು ಶ್ರೀಲಂಕಾದ 25 ಹಾಗೂ ನೇಪಾಳದ ಎಂಟು ಮಂದಿ ಇದ್ದಾರೆ. ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ಅನಧಿಕೃತ ಉದ್ಯಮಗಳಿಗೆ ಕಡಿವಾಣ ಹಾಕಲು ಈ ಗಡೀಪಾರಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿದೆ.
ಮಾಲ್ಡೀವ್ಸ್ ನಲ್ಲಿ ನಡೆಯುತ್ತಿರುವ ಅಕ್ರಮ ಉದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ವಿತ್ತ ಸಚಿವಾಲಯ ಹಾಗೂ ಗೃಹ ಸಚಿವಾಲಯ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಲ್ಲಿನ ಹೋಮ್ ಲ್ಯಾಂಡ್ ರಕ್ಷಣಾ ಸಚಿವ ಅಲಿ ಇಹುಸಾನ್ ಹೇಳಿದ್ದಾರೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ನೋಂದಣಿಯಾಗಿರುವ ಹಾಗೂ ನೋಂದಾಣಿಯಾಗದ ಎರಡೂ ಉದ್ಯಮಗಳ ಪರಿಶೀಲನೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಕೆಲವೊಂದು ವರದಿಗಳ ಪ್ರಕಾರ ಇಂಥ ಉದ್ಯಮಗಳು ತಮ್ಮ ಆದಾಯವನ್ನು ಅಕ್ರಮವಾಗಿ ಹೆಚ್ಚಿಸಿಕೊಳ್ಳುವ ಜೊತೆಗೆ ವಿದೇಶಿಗರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುತ್ತಿವೆ. ಕೆಲವು ಉದ್ಯಮಗಳನ್ನು ನೋಂದಾಯಿತ ಮಾಲೀಕರ ಬದಲಿಗೆ ವಿದೇಶಿಗರೇ ನಿರ್ವಹಣೆ ಮಾಡುತ್ತಿರೋದು ಪತ್ತೆಯಾಗಿದೆ.
ಕ್ರಿಮಿನಲ್ ಅಪರಾಧ, ಅವಧಿ ಮೀರಿ ವೀಸಾ ಹಾಗೂ ಪಾಸ್ ಪೋರ್ಟ್ ಹೊಂದಿರುವ ಇನ್ನೂ ಕೆಲವು ವಿದೇಶಿ ಪ್ರಜೆಗಳಿಗೆ ಮಾಲ್ಡೀವ್ಸ್ ಸರ್ಕಾರ ವಲಸೆ ಹೋಗಲು ಅವಕಾಶ ನಿರಾಕರಿಸಿದೆ.
ಭಾರತದ ಬೆನ್ನಿಗೆ ಚೂರಿ ಇರಿದ ಮಾಲ್ಡೀವ್ಸ್, ಮಾಲೆಗೆ ಬರಲಿದೆ ಚೀನಾದ ಬೇಹುಗಾರಿಕಾ ಹಡಗು !
ಮಾಲ್ಡೀವ್ಸ್ ವಿರುದ್ಧ ಭಾರತೀಯರ ಮುನಿಸು
ಇತ್ತೀಚೆಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಮುಯಿಜು, ಪದೇ ಪದೇ ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದೂ ಅಲ್ಲದೆ ಚೀನಾದ ಜೊತೆ ಕೈಜೋಡಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿಢೀರನೆ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶೀಯ ಪ್ರವಾಸಿಗರು ಬೀಚ್‌ಗಳನ್ನು ಹುಡುಕಿ ವಿದೇಶಗಳಿಗೆ ಹೋಗುವ ಬದಲು ನಮ್ಮದೇ ಆದ ಲಕ್ಷದ್ವೀಪಕ್ಕೆ ಭೇಟಿ ಕೊಡಿ ಎಂದು ಕರೆಕೊಟ್ಟಿದ್ದರು. ಇದಾದ ಬಳಿಕ ಪ್ರವಾಸಕ್ಕೆ ಮಾಲ್ಡೀವ್ಸ್‌ನತ್ತ ಹೊರಟ ಭಾರತೀಯರು ಲಕ್ಷದ್ವೀಪದತ್ತ ಗಮನ ಹರಿಸಿದ್ದರು.
ಇದರ ಬೆನ್ನಲ್ಲೇ ಮೋದಿ ಹೇಳಿಕೆ ಬಗ್ಗೆ ಮಾಲ್ಡೀವ್ಸ್‌ನ ಕೆಲ ಸಂಸದರು ವ್ಯಂಗ್ಯವಾಡಿದ್ದರು. ತದನಂತರದಲ್ಲಿ ಜಾಲತಾಣಗಳಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭವಾಗಿತ್ತು. ಭಾರೀ ಪ್ರಮಾಣದಲ್ಲಿ ಭಾರತೀಯತು ತಮ್ಮ ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಾಲ್ಡೀವ್ಸ್ ಅನ್ನು ಪ್ರವಾಸೋದ್ಯಮದ ಹೊಸ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ.
ತಿಕ್ಕಾಟದ ನಡುವೆಯೂ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ 600 ಕೋಟಿ ರು: ಇತರ ನೆರೆ ದೇಶಗಳಿಗೆ 22154 ಕೋಟಿ ರು. ಹಂಚಿಕೆ
ಮಾಲ್ಡೀವ್ಸ್ ಗೆ ಪಾಠ ಕಲಿಸಲು ಪ್ಲ್ಯಾನ್
ಚೀನಾ ಜೊತೆ ಸೇರಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಯತ್ನ ಮಾಡುತ್ತಿರುವ ಮಾಲ್ಡೀವ್ಸ್‌ಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ, ಮಾಲ್ಡೀವ್ಸ್ ಅನ್ನೇ ಹೋಲುವ ಲಕ್ಷದ್ವೀಪ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಮಾಡಿದೆ. ದೇಶೀಯ ಪ್ರವಾಸೋದ್ಯಮ ಕಡೆ ಹೆಚ್ಚುತ್ತಿರುವ ಜನರ ಆಶೋತ್ತರಗಳನ್ನು ಉತ್ತಮ ರೀತಿಯಲ್ಲಿ ಈಡೇರಿಸುವ ನಿಟ್ಟಿನಲ್ಲಿ ಲಕ್ಷದ್ವೀಪ ಸೇರಿದಂತೆ ದೇಶದ ಸುಂದರ ದ್ವೀಪಸಮೂಹಗಳನ್ನು ಪ್ರವಾಸೋದ್ಯಮ ಹೊಸ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.