ಅಕ್ಷಯ ತೃತೀಯಾ ದಿನದಂದು 1900 ಕೋಟಿ ವಹಿವಾಟು, ಕಳೆದ ವರ್ಷಕ್ಕಿಂತ ಹೆಚ್ಚು ವ್ಯಾಪಾರ, ಕಳೆದ ಬಾರಿ 1680 ಕೋಟಿ ವಹಿವಾಟು, ಬೆಂಗಳೂರಿನಲ್ಲಿ ಈ ವರ್ಷ 700+ ಕೋಟಿ ವ್ಯಾಪಾರ.  

ಬೆಂಗಳೂರು(ಏ.24): ಎರಡು ದಿನಗಳ ಅಕ್ಷಯ ತೃತೀಯ ಹಬ್ಬದಲ್ಲಿ ಭರ್ಜರಿ ಚಿನ್ನಾಭರಣ ಖರೀದಿಯಾಗಿದ್ದು, ದರ ಏರಿಕೆ, ಚುನಾವಣಾ ಕಣ್ಗಾವಲಿನ ನಡುವೆ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಶೇಕಡ 25ರಷ್ಟುಅಧಿಕ ವಹಿವಾಟು ನಡೆದಿದ್ದು, ಒಟ್ಟಾರೆ ಅಂದಾಜು 1900 ಕೋಟಿಗಿಂತ ಹೆಚ್ಚಿನ ವ್ಯಾಪಾರವಾಗಿದೆ. ವಿಧಾನಸಭಾ ಚುನಾವಣಾ ನೀತಿ ಸಂಹಿತೆ, ದರ ಏರಿಕೆಯಿಂದಾಗಿ ಅಕ್ಷಯ ತೃತೀಯ ವ್ಯಾಪಾÃ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿ, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಿದ್ದಾರೆ.

ಕರ್ನಾಟಕ ಜ್ಯೂವೆಲ್ಲರಿ ಮ್ಯಾನುಫಾಕ್ಚರ್‌ ಫೆಡರೇಶನ್‌ ಅಧ್ಯಕ್ಷ ಡಾ. ಬಿ.ರಾಮಾಚಾರಿ, ರಾಜ್ಯ ನಗರ ಪ್ರದೇಶಗಳಲ್ಲಿ ಶೇ.25ರಷ್ಟುಹಾಗೂ ಗ್ರಾಮೀಣ ಭಾಗದಲ್ಲಿ ಶೇ.30ರಷ್ಟುಹೆಚ್ಚು ವ್ಯಾಪಾರವಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಕಳೆದ ವರ್ಷ ಸುಮಾರು .1680 ಕೋಟಿ ವಹಿವಾಟು ನಡೆದಿತ್ತು. ಈ ವರ್ಷ ಬೆಂಗಳೂರಲ್ಲಿ .700 ಕೋಟಿಗೂ ಹೆಚ್ಚು ಹಾಗೂ ಒಟ್ಟಾರೆ ರಾಜ್ಯದಲ್ಲಿ .1900 ಕೋಟಿಗೂ ಹೆಚ್ಚಿನ ವ್ಯಾಪಾರವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು.

ತೆರಿಗೆದಾರರೇ ಎಚ್ಚರ, 2 ಪ್ಯಾನ್ ಕಾರ್ಡ್ ಹೊಂದಿದ್ರೆ ಬೀಳುತ್ತೆ 10 ಸಾವಿರ ರೂ. ದಂಡ

ಬೆಳಗ್ಗೆ 7ರಿಂದ ರಾತ್ರಿ 11ರವರೆಗೂ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು. ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಚಿನ್ನಾಭರಣ ಖರೀದಿ ಜೋರಾಗಿತ್ತು. ಮದುವೆ ಸೀಸನ್‌ ಹಿನ್ನೆಲೆಯಲ್ಲಿ ನೆಕ್ಲೆಸ್‌, ಓಲೆ, ಸರ, ಬಳೆ, ಸೊಂಟಪಟ್ಟಿ, ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಖರೀದಿ ಮಾಡುತ್ತಿರುವುದು ಕಂಡುಬಂತು.

ಮುಂಗಡ ಕಾಯ್ದಿರಿಸಿದ್ದವರು ಅಕ್ಷಯ ತೃತೀಯಾ ಶುಭದಿನದ ಕಾರಣಕ್ಕೆ ಮಳಿಗೆಗಳಿಗೆ ಆಗಮಿಸಿ ಆಭರಣ ಪಡೆದರು. ಅಲ್ಲದೆ, ಪಿಯುಸಿ ಫಲಿತಾಂಶದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆತಂದು ಚಿನ್ನ ಉಡುಗೊರೆ ನೀಡಿದರು. ವಿದ್ಯಾರ್ಥಿಗಳಿಗೆ ಬೆಳ್ಳಿಯ ಪೆನ್ನನ್ನು ನೀಡಿದ್ದು ಕೂಡ ವಿಶೇಷವಾಗಿತ್ತು. ಇನ್ನು ಕೆಲವರು ಕಚ್ಚಾ ಚಿನ್ನ (ಬುಲಿಯನ್‌) ಹಾಗೂ ಮಾಸಿಕ ಚೀಟಿದಾರರು ಚಿನ್ನ, ಬೆಳ್ಳಿ, ವಜ್ರಾಭರಣ ಖರೀದಿ ಮಾಡಿದರು. ಚಿನ್ನದ ಮಳಿಗೆಗಳನ್ನು ವಿಶೇಷವಾಗಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಚಿನ್ನ ಖರೀದಿಗೆ ಬಂದವರಿಗೆ ಹಿಂದೆ ಜ್ಯೂಸ್‌ ನೀಡುತ್ತಿದ್ದರೆ ಈ ಬಾರಿ ನಂದಿನಿ ಮಜ್ಜಿಗೆಗಳನ್ನು ನೀಡಿದ್ದು ವಿಶೇಷವಾಗಿತ್ತು.

ಚುನಾವಣಾ ವೀಕ್ಷಕರ ಕಣ್ಗಾವಲು

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿನ್ನಾಭರಣ ಮಳಿಗೆಗಳ ಮೇಲೆ ಚುನಾವಣಾ ವೀಕ್ಷಕರ ತಂಡದ ಕಣ್ಗಾವಲಿತ್ತು. ಹೆಚ್ಚಿನ ಚಿನ್ನ ಖರೀದಿ ಮಾಡಿದವರ ವಿವರವನ್ನು ಅಧಿಕಾರಿಗಳು ಪಡೆದರು. ಜೊತೆಗೆ ವಿಶೇಷ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಬಸವಣ್ಣನ ನಾಣ್ಯಕ್ಕೆ ಬೇಡಿಕೆ

ಈ ಬಾರಿ ಕನಕ ಲಕ್ಷ್ಮಿ ಚಿನ್ನದ ನಾಣ್ಯಗಳ ಜೊತೆಗೆ ಬಸವಣ್ಣನವರ ನಾಣ್ಯಗಳಿಗೆ ಹೆಚ್ಚು ಬೇಡಿಕೆಯಿತ್ತು. ಬಸವಣ್ಣನವರ ಚಿತ್ರ, ಕಾಯಕವೇ ಕೈಲಾಸ ಎಂದು ಬರೆಯಲ್ಪಟ್ಟಿದ್ದ ಚಿನ್ನದ ನಾಣ್ಯಗಳನ್ನು ವರ್ತಕರು ಮಾಡಿಕೊಂಡಿದ್ದರು. ಸಂಜೆ ವೇಳೆಗೆ ಬಹುಕೇತ ಮಳಿಗೆಗಳಲ್ಲಿ ಇವು ಖರ್ಚಾಗಿದ್ದವು ಎಂದು ಜ್ಯೂವೆಲರ್ಸ್‌ ಫೆಡರೇಶನ್‌ ತಿಳಿಸಿದೆ.

ಕೊರತೆ?

ಕರ್ನಾಟಕ ಜ್ಯೂವೆಲ್ಲರ್ಸ್‌ ಅಸೋಸಿಯೇಶನ್‌ ವಹಿವಾಟಿಗೆ ಸಂಬಂಧಪಟ್ಟಂತೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಾರಿ ಮಳಿಗೆಗಳಲ್ಲಿ ಕೊಂಚ ಚಿನ್ನದ ಕೊರತೆ ಉಂಟಾಗಿತ್ತು. ಗ್ರಾಹಕರು ಕೇಳಿದ ವಿನ್ಯಾಸದಲ್ಲಿ ಆಭರಣ ಸಿಕ್ಕಿಲ್ಲ. ಆದರೆ, ನಿರೀಕ್ಷಿಸಿದಷ್ಟುಸಮಸ್ಯೆ ಆಗಿಲ್ಲ. ಕಳೆದ ವರ್ಷ 1200 ಕೇಜಿಗೂ ಹೆಚ್ಚು ಚಿನ್ನ ಮಾರಾಟವಾಗಿತ್ತು. ಈ ಬಾರಿ ಅಷ್ಟೊಂದು ವ್ಯಾಪಾರವಾಗಿಲ್ಲ. ಶೇ.70ಕ್ಕಿಂತ ಹೆಚ್ಚು ವಹಿವಾಟು ಆಗಿದೆ. ಚುನಾವಣೆ ಇಲ್ಲದಿದ್ದರೆ ಮತ್ತಷ್ಟುಹೆಚ್ಚಿನ ವಹಿವಾಟು ಆಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ.

ಮನೆ ಬಾಡಿಗೆಯಲ್ಲಿ ಭಾರೀ ಏರಿಕೆ: ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ!

ಕೋವಿಡ್‌ ಆತಂಕ, ಕಳೆದ ಬಾರಿಯಂತೆ ಒಂದು ಕೋಮಿನ ಮಳಿಗೆಗಳಲ್ಲಿ ವ್ಯಾಪಾರ ನಿರ್ಬಂಧದಂತಹ ಯಾವುದೇ ಗೊಂದಲ ಇಲ್ಲದ್ದರಿಂದ ಈ ಬಾರಿ ವಹಿವಾಟು ಅತ್ಯುತ್ತಮವಾಗಿ ನಡೆದಿದೆ ಅಂತ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕ ಟಿ.ಎ.ಶರವಣ ಹೇಳಿದ್ದಾರೆ. 

ನಮ್ಮ ನಿರೀಕ್ಷೆ ಮೀರಿ ಕಳೆದ ವರ್ಷಕ್ಕಿಂತ ನಗರದಲ್ಲಿ ಶೇ.25ರಷ್ಟು, ಗ್ರಾಮೀಣದಲ್ಲಿ ಶೇ.30ರಷ್ಟು ಹೆಚ್ಚಿನ ವಹಿವಾಟು ಆಗಿದೆ ಅಂತ ಕರ್ನಾಟಕ ಜ್ಯೂವೆಲ್ಲರಿ ಮ್ಯಾನುಫಾಕ್ಚರ್‌ ಫೆಡರೇಶನ್‌ ಅಧ್ಯಕ್ಷ ಡಾ. ಬಿ.ರಾಮಾಚಾರಿ ತಿಳಿಸಿದ್ದಾರೆ.