ತೆರಿಗೆದಾರರೇ ಎಚ್ಚರ, 2 ಪ್ಯಾನ್ ಕಾರ್ಡ್ ಹೊಂದಿದ್ರೆ ಬೀಳುತ್ತೆ 10 ಸಾವಿರ ರೂ. ದಂಡ
ಪ್ಯಾನ್ ಕಾರ್ಡ್ ಇಂದು ಪ್ರಮುಖ ಗುರುತು ದೃಢೀಕರಣ ದಾಖಲೆಗಳಲ್ಲಿ ಒಂದಾಗಿದೆ. ಹೀಗಿರುವಾಗ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ ಏನಾಗುತ್ತದೆ? ಆದಾಯ ತೆರಿಗೆ ಕಾಯ್ದೆ ಅನ್ವಯ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ.ಹಾಗೇನಾದ್ರೂ ಹೊಂದಿದ್ರೆ ಆತನಿಗೆ ಆದಾಯ ತೆರಿಗೆ ಇಲಾಖೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
Business Desk: ಪ್ಯಾನ್ ಅಥವಾ ಕಾಯಂ ಖಾತೆ ಸಂಖ್ಯೆ 10 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದೆ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವ್ಯಕ್ತಿಗಳು, ಕಂಪನಿಗಳು ಹಾಗೂ ಇತರ ಸಂಸ್ಥೆಗಳಿಗೆ ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಸಾಲಗಳಿಗೆ ಅರ್ಜಿ ಸಲ್ಲಿಕೆಗೆ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಹಾಗೂ ಹೂಡಿಕೆಗಳಿಗೆ ಪ್ಯಾನ್ ಕಾರ್ಡ್ ಅಗತ್ಯ. ಪ್ಯಾನ್ ಕಾರ್ಡ್ ನಲ್ಲಿ ಖಾತೆದಾರರ ಹೆಸರು, ಫೋಟೋ, ಜನ್ಮದಿನಾಂಕ, ಪ್ಯಾನ್ ಸಂಖ್ಯೆ ಮೊದಲಾದ ಮಾಹಿತಿಗಳಿರುತ್ತವೆ. ಪ್ಯಾನ್ ಸಂಖ್ಯೆ ಪ್ರತಿ ಕಾರ್ಡ್ ದಾರರಿಗೆ ವಿಶಿಷ್ಟವಾಗಿರುತ್ತದೆ. ಹಾಗೆಯೇ ಇದನ್ನು ಎಲ್ಲ ಹಣಕಾಸು ವಹಿವಾಟುಗಳಿಗೆ ರೆಫರೆನ್ಸ್ ನಂಬರ್ ಆಗಿ ಬಳಸಲಾಗುತ್ತದೆ. ತೆರಿಗೆ ಪಾವತಿ ಮಾಡುವ ಪ್ರತಿಯೊಬ್ಬ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಅಗತ್ಯ. ಪ್ಯಾನ್ ಕಾರ್ಡ್ ಹೊಂದಲು ವಿಫಲರಾದವರಿಗೆ ದಂಡ ವಿಧಿಸಲಾಗುತ್ತದೆ ಕೂಡ. ಹಾಗಾದ್ರೆ ಒಬ್ಬ ವ್ಯಕ್ತಿ ಎರಡು ಪ್ಯಾನ್ ಕಾರ್ಡ್ ಗಳನ್ನು ಹೊಂದಬಹುದೇ? ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಹೇಳುತ್ತವೆ?
2 ಪ್ಯಾನ್ ಕಾರ್ಡ್ ಹೊಂದಬಹುದೇ?
ಆದಾಯ ತೆರಿಗೆ ಇಲಾಖೆ ನಿಯಮಗಳ ಅನ್ವಯ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಕೇವಲ ಒಂದು ಪ್ಯಾನ್ ಕಾರ್ಡ್ ಹೊಂದಲು ಅನುಮತಿ ಇದೆ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ದಂಡ ವಿಧಿಸಲಾಗುವುದು. ಹಾಗೆಯೇ ಕಾನೂನು ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತದೆ. ಇನ್ನು ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವುದನ್ನು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಎಂದು ಕೂಡ ಪರಿಗಣಿಸಲಾಗುತ್ತದೆ. ಇನ್ನು ಇದರಿಂದ ಆದಾಯ ತೆರಿಗೆ ಪಾವತಿ ದಾಖಲೆಗಳಲ್ಲಿ ಗೊಂದಲ ಕೂಡ ಮೂಡಬಹುದು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಬ್ಬ ವ್ಯಕ್ತಿಯ ತೆರಿಗೆ ಪಾವತಿಗಳು ಹಾಗೂ ಫೈಲಿಂಗ್ ಅನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ.
ಟಿಡಿಎಸ್ ವಿನಾಯ್ತಿಗೆ WhatsAppನಲ್ಲಿ ಫಾರ್ಮ್ 15G/H ಸಲ್ಲಿಕೆಗೆ ಅವಕಾಶ; ಆದರೆ,ಈ ಬ್ಯಾಂಕ್ ಗ್ರಾಹಕರಿಗೆ ಮಾತ್ರ!
ಎಷ್ಟು ದಂಡ ವಿಧಿಸಬಹುದು?
ಒಂದು ವೇಳೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272 ಬಿ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ 10,000 ರೂ. ದಂಡ ವಿಧಿಸುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸುತ್ತದೆ ಕೂಡ.
ಎರಡನೇ ಪ್ಯಾನ್ ಕಾರ್ಡ್ ಒಪ್ಪಿಸೋದು ಹೇಗೆ?
ಕೆಲವೊಮ್ಮೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಪ್ಯಾನ್ ಕಾರ್ಡ್ ಬಂದಿರೋದಿಲ್ಲ. ಆಗ ಇನ್ನೊಂದು ಪ್ಯಾನ್ ಕಾರ್ಡ್ ಗೆ ಮರು ಅರ್ಜಿ ಸಲ್ಲಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಎರಡು ಪ್ಯಾನ್ ಕಾರ್ಡ್ ಗಳು ಬರುವ ಸಾಧ್ಯತೆಯಿರುತ್ತದೆ. ಅಂಥ ಸಂದರ್ಭಗಳಲ್ಲಿ ಎರಡನೇ ಪ್ಯಾನ್ ಕಾರ್ಡ್ ಅನ್ನು ತಕ್ಷಣ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಬೇಕು. ಎರಡೂ ಕಾರ್ಡ್ ಗಳ ಸಂಖ್ಯೆ ಬೇರೆ ಇದ್ದರೂ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ.
SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಅನ್ನು ಕಚೇರಿಗೆ ತೆರಳಿ ಅಥವಾ ಆನ್ ಲೈನ್ ಮೂಲಕ ಒಪ್ಪಿಸಲು ಅವಕಾಶವಿದೆ. ಪ್ಯಾನ್ ಕಾರ್ಡ್ ಒಪ್ಪಿಸಲು ನಿರ್ದಿಷ್ಟ ಅರ್ಜಿಗಳಿವೆ. ಈ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೊಸ ಪ್ಯಾನ್ ಕಾರ್ಡ್ ಗೆ ಮನವಿ/ಪ್ಯಾನ್ ಡೇಟಾ ಬದಲಾವಣೆ ಅಥವಾ ತಿದ್ದುಪಡಿ ಮನವಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆ ಬಳಿಕ ಈ ಅರ್ಜಿಯನ್ನು ಭರ್ತಿ ಮಾಡಿ ನ್ಯಾಷನಲ್ ಸೆಕ್ಯುರಿಟೀಸ್ ಡೆಫೋಸಿಟರಿ ಲಿ. (NSDL) ಕಚೇರಿಗೆ ಸಲ್ಲಿಕೆ ಮಾಡಬೇಕು. ಅರ್ಜಿ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಕೂಡ ಒಪ್ಪಿಸಿ. ಆನ್ ಲೈನ್ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.