ಆನ್‌ಲೈನ್ ಡೆಲಿವರಿಯ ಪೇಪರ್ ಬ್ಯಾಗ್‌ಗಳನ್ನು ಕಸಕ್ಕೆ ಎಸೆಯುವ ಮುನ್ನ ಇದು ಗೊತ್ತಿರಲಿ. ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಈ ಪೇಪರ್ ಬ್ಯಾಗ್‌ಗಳಿಗೆ ಮರುಜನ್ಮ ನೀಡುವ ಅದ್ಭುತ ಪರಿಸರ ಸ್ನೇಹಿ ಅಭಿಯಾನ ಶುರುವಾಗಿದ್ದು, ಈ ವಿಶಿಷ್ಟ ಹೆಜ್ಜೆಯ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿಗರು ದಿನನಿತ್ಯದ ವಸ್ತುಗಳಿಗಾಗಿ ಕ್ವಿಕ್-ಕಾಮರ್ಸ್ ಆ್ಯಪ್‌ಗಳನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ, ಡೆಲಿವರಿ ಜೊತೆಗೆ ಬರುವ ಪೇಪರ್ ಬ್ಯಾಗ್‌ಗಳು ಮನೆಗಳಲ್ಲಿ ರಾಶಿ ಬೀಳುತ್ತಿವೆ. ಇವುಗಳನ್ನು ಕಸಕ್ಕೆ ಎಸೆಯುವ ಬದಲು, ಬಸವನಗುಡಿಯಲ್ಲಿ ಡಿಸೆಂಬರ್ 5 ರಿಂದ 8 ರವರೆಗೆ ನಡೆಯಲಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಮರುಬಳಕೆ ಮಾಡಲು ವಿನೂತನ ಯೋಜನೆ ರೂಪಿಸಲಾಗಿದೆ. ಸಂಗ್ರಹಿಸಿದ ಬ್ಯಾಗ್‌ಗಳನ್ನು ಪರಿಷೆಯ ವ್ಯಾಪಾರಿಗಳಿಗೆ ಮತ್ತು ಭೇಟಿ ನೀಡುವ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ಪ್ಲಾಸ್ಟಿಕ್ ಬಳಕೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಅಭಿಯಾನದ ರೂವಾರಿಗಳು ಮತ್ತು ಸಂಗ್ರಹಣೆ!

ಸಮಾನ ಮನಸ್ಕ ನಾಗರಿಕರು, ಎನ್‌ಜಿಒಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸೇರಿ ಈ ಅಭಿಯಾನವನ್ನು ನಡೆಸುತ್ತಿವೆ. ಬೆಂಗಳೂರಿನಾದ್ಯಂತ 10 ಪ್ರಮುಖ ಸ್ಥಳಗಳಲ್ಲಿ ಪೇಪರ್ ಬ್ಯಾಗ್ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನವೆಂಬರ್ 30 ರವರೆಗೆ ಈ ಸಂಗ್ರಹಣಾ ಅಭಿಯಾನ ನಡೆಯಲಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಗ್‌ಗಳಿದ್ದರೆ ಸ್ವಯಂಸೇವಕರೇ ಮನೆ ಬಾಗಿಲಿಗೆ ಬಂದು ಸಂಗ್ರಹಿಸಲಿದ್ದಾರೆ.

ಈವರೆಗಿನ ಯಶಸ್ಸು!

ಈಗಾಗಲೇ ನಗರದ 30 ರಿಂದ 40 ಅಪಾರ್ಟ್‌ಮೆಂಟ್ ಸಮುಚ್ಚಯಗಳಿಂದ 3,000ಕ್ಕೂ ಹೆಚ್ಚು ಪೇಪರ್ ಬ್ಯಾಗ್‌ಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಎಲ್ಲಾ ಬ್ಯಾಗ್‌ಗಳನ್ನು ಮರುಬಳಕೆಗೆ ಯೋಗ್ಯವಾಗಿವೆಯೇ ಎಂದು ಪರಿಶೀಲಿಸಿದ ನಂತರವೇ ವಿತರಿಸಲಾಗುತ್ತದೆ. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಧ್ರುವ ನಾಗರಾಜನ್ ಕೌಂಡಿನ್ಯ ಅವರು 2023ರಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಕಾಲೇಜು ವಿದ್ಯಾರ್ಥಿಗಳ ಸಾಥ್!

ಪರಿಷೆ ಮುಗಿದ ಮರುದಿನ ಬೆಳಿಗ್ಗೆ ಕಾಲೇಜಿಗೆ ಬರುವಾಗ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಕವರ್‌ಗಳು ಬಿದ್ದಿರುವುದನ್ನು ಕಂಡ ವಿದ್ಯಾರ್ಥಿಗಳು, ತಾವೇ ಪೇಪರ್ ಬ್ಯಾಗ್‌ಗಳನ್ನು ತಯಾರಿಸಿ ವ್ಯಾಪಾರಿಗಳಿಗೆ ಉಚಿತವಾಗಿ ನೀಡಲು ಆರಂಭಿಸಿದರು. ಕಳೆದ ವರ್ಷ ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕ ಗುಂಪುಗಳಿಂದ ಸುಮಾರು 50,000 ಪೇಪರ್ ಬ್ಯಾಗ್‌ಗಳು ಸಂಗ್ರಹವಾಗಿದ್ದವು. ಈ ಅಭಿಯಾನದ ಭಾಗವಾಗಿ ನವೆಂಬರ್ 30 ರಂದು ಬಸವನಗುಡಿಯಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಕಾರ್ಯಾಗಾರವನ್ನೂ ಆಯೋಜಿಸಲಾಗಿದೆ. ಪೇಪರ್ ಬ್ಯಾಗ್ ಜೊತೆಗೆ, ಸ್ವಸಹಾಯ ಸಂಘಗಳ ಮೂಲಕ ಹೊಲಿದ ಬಟ್ಟೆ ಬ್ಯಾಗ್‌ಗಳನ್ನು ಖರೀದಿಸಿ, ಗಾತ್ರಕ್ಕೆ ಅನುಗುಣವಾಗಿ ಕೇವಲ ₹1 ರಿಂದ ₹5 ರ ನಾಮಮಾತ್ರದ ದರದಲ್ಲಿ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ.

ಮಲ್ಲೇಶ್ವರಂನಲ್ಲೂ ಇದೇ ಮಾದರಿಯ ಅಭಿಯಾನ!

ಮಲ್ಲೇಶ್ವರಂನಲ್ಲೂ ಸ್ಥಳೀಯ ಕಡಲೆಕಾಯಿ ಪರಿಷೆಗಾಗಿ ನಾಗರಿಕರು ಹಳೆಯ ಪೇಪರ್ ಬ್ಯಾಗ್ ಮತ್ತು ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಿ ಬ್ಯಾಗ್ ತಯಾರಿಸುತ್ತಿದ್ದಾರೆ. ಈ ಅಭಿಯಾನದೊಂದಿಗೆ ಗುರುತಿಸಿಕೊಂಡಿರುವ ಮಲ್ಲೇಶ್ವರಂ ನಿವಾಸಿ ಶೈಲಾ ಅಯ್ಯಂಗಾರ್ ಅವರ ಪ್ರಕಾರ, ಹಿಂದಿನ ವರ್ಷಗಳಲ್ಲಿ ಖಾಸಗಿ ಶಾಲೆಗಳು ಕೈಯಿಂದ ತಯಾರಿಸಿದ ಬ್ಯಾಗ್‌ಗಳನ್ನು ನೀಡುತ್ತಿದ್ದವು. ಈ ಬಾರಿ ಸ್ಥಳೀಯ ಉದ್ಯಮಿಗಳು ಮತ್ತು ರಿಸೈಕ್ಲಿಂಗ್ ವೆಂಡರ್‌ಗಳೂ ಕೈಜೋಡಿಸಿದ್ದಾರೆ.

ಬೃಹತ್ ಕೊಡುಗೆ!

ಕೆಲವು ಉದ್ಯಮಿಗಳು ಅಂಗಡಿಗಳಲ್ಲಿ ಬಳಸುವಂತಹ 1 ಲಕ್ಷ ಬ್ರೌನ್ ಪೇಪರ್ ಕವರ್‌ಗಳನ್ನು ನೀಡಲು ಒಪ್ಪಿದ್ದಾರೆ. ಅಲ್ಲದೆ, ಪ್ರಮುಖ ರಿಸೈಕ್ಲಿಂಗ್ ಸಂಸ್ಥೆಯೊಂದು ಮರುಬಳಕೆಯ ಕಾಗದದಿಂದ ತಯಾರಿಸಿದ 65,000 ಪೇಪರ್ ಬ್ಯಾಗ್‌ಗಳನ್ನು ನೀಡಲು ಮುಂದೆ ಬಂದಿದೆ. ಇಲ್ಲಿಯೂ ನಾಮಮಾತ್ರದ ದರದಲ್ಲಿ ಬಟ್ಟೆ ಬ್ಯಾಗ್‌ಗಳು ಲಭ್ಯವಿರಲಿವೆ.