ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ರಾವ್ಗೆ ತಂದೆಯ ಪಿತೃಕಾರ್ಯದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ನಟ ದರ್ಶನ್ ಪರ ವಕೀಲರ ತೀವ್ರ ಆಕ್ಷೇಪದ ನಡುವೆಯೂ ನವೆಂಬರ್ 7 ರಿಂದ 12 ರವರೆಗೆ ಮಾತ್ರ ಬಿಗಿ ಭದ್ರತೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು (ನ.4): ಚಿತ್ರದುರ್ಗದ ರೇಣುಕಾಸ್ವಾಮಿ ಕೊ** ಪ್ರಕರಣದಲ್ಲಿ (Renukaswamy Murder Case) ಪ್ರಮುಖ ತಿರುವು ಸಿಕ್ಕಿದ್ದು, ಪ್ರಕರಣದ ಮಾಫಿ ಸಾಕ್ಷಿಯಾಗಿರುವ (Approver) ಪ್ರದೋಷ್ ರಾವ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಅವರ ತಂದೆಯ ವಾರ್ಷಿಕ ಪಿತೃಕಾರ್ಯದಲ್ಲಿ ಭಾಗವಹಿಸಲು ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿ ಆದೇಶಿಸಿದೆ. ತಂದೆಯ ವಾರ್ಷಿಕ ಪುಣ್ಯಸ್ಮರಣೆ ಮತ್ತು ಪಿತೃಕಾರ್ಯಗಳನ್ನು ನೆರವೇರಿಸಲು 20 ದಿನಗಳ ಕಾಲ ಮಧ್ಯಂತರ ಜಾಮೀನು (Interim Bail) ಮಂಜೂರು ಮಾಡಬೇಕೆಂದು ಕೋರಿ ಮಾಫಿ ಸಾಕ್ಷಿ ಪ್ರದೋಷ್ ರಾವ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ (Justice Anant Ramanath Hegde) ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿ, ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ನವೆಂಬರ್ 7 ರಿಂದ ನವೆಂಬರ್ 12 ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಸಮ್ಮತಿಸಿದೆ.
ಕೋರ್ಟ್ ಅಂಗಳದಲ್ಲಿ ಗಂಭೀರ ವಾದ-ಪ್ರತಿವಾದ
ವಿಚಾರಣೆಯ ವೇಳೆ ಅರ್ಜಿದಾರ ಪ್ರದೋಷ್ ಪರ, ನಟ ದರ್ಶನ್ ಪರ ವಕೀಲರು ಹಾಗೂ ಪ್ರಾಸಿಕ್ಯೂಷನ್ ನಡುವೆ ತೀವ್ರ ವಾದ-ಪ್ರತಿವಾದಗಳು ನಡೆದವು. ಪ್ರದೋಷ್ ಪರ ಹಿರಿಯ ವಕೀಲ ಕೆ. ದಿವಾಕರ್ ವಾದ ಮಂಡಿಸಿ, 'ನಮ್ಮ ಕಕ್ಷಿದಾರ ಪ್ರದೋಷ್ ತಂದೆಯ ವಾರ್ಷಿಕ ಪುಣ್ಯಕಾರ್ಯವನ್ನು ನೆರವೇರಿಸಲು ಕೇವಲ ಸೀಮಿತ ಕಾರಣಗಳಿಗಾಗಿ 20 ದಿನಗಳ ಮಧ್ಯಂತರ ಜಾಮೀನು ಕೋರಿದ್ದಾರೆ. ಇಂತಹ ವಿಶೇಷ ಸಂದರ್ಭಗಳಲ್ಲಿ ಮಧ್ಯಂತರ ಜಾಮೀನು ನೀಡುವ ಸಂಪೂರ್ಣ ಅಧಿಕಾರ ಹೈಕೋರ್ಟ್ಗೆ ಇದೆ. ಈ ಅರ್ಜಿಯನ್ನು ಆಕ್ಷೇಪಿಸುವ ಯಾವುದೇ ಶಾಸನಬದ್ಧ ಹಕ್ಕು ದರ್ಶನ್ ಪರ ವಕೀಲರಿಗೆ ಇಲ್ಲ' ಎಂದು ವಾದಿಸಿದರು.
ಇದಕ್ಕೆ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 'ಪ್ರದೋಷ್ ಈ ಪ್ರಕರಣದ ಮಾಫಿ ಸಾಕ್ಷಿಯಾಗಿದ್ದು, ಅವರ ಕ್ರಾಸ್ ಎಗ್ಸಾಮಿನೇಷನ್ (Cross-examination) ಇನ್ನೂ ಪೂರ್ಣಗೊಂಡಿಲ್ಲ. ಮಾಫಿ ಸಾಕ್ಷಿಯ ಷರತ್ತುಗಳ ಪ್ರಕಾರ ಅವರು ಜೈಲಿನಲ್ಲೇ ಇರಬೇಕು. ಈ ಹಿಂದೆ ಪ್ರದೋಷ್ ಜೈಲಿನಿಂದ ಹೊರಬಂದಾಗ ಕಾಮಾಕ್ಷಿಪಾಳ್ಯ ಪೊಲೀಸರು ಅವರಿಗೆ ಹೇಳಿಕೊಟ್ಟು (Coaching) ಸಾಕ್ಷ್ಯ ಸುಧಾರಿಸಲು ನೆರವಾಗಿದ್ದಾರೆ. ನಟ ದರ್ಶನ್ ದೊಡ್ಡ ಸೆಲೆಬ್ರಿಟಿಯಾಗಿದ್ದು, ಅವರಿಗೆ ಹಲವು ವಿರೋಧಿಗಳಿದ್ದಾರೆ. ಈಗ ಪ್ರದೋಷ್ಗೆ ಜಾಮೀನು ನೀಡಿದರೆ ಹಲವರು ಅವರ ಮೇಲೆ ಪ್ರಭಾವ ಬೀರುವ (Influence) ಸಾಧ್ಯತೆಯಿದೆ. ಆದ್ದರಿಂದ ಅವರಿಗೆ 1 ದಿನವೂ ಮಧ್ಯಂತರ ಜಾಮೀನು ನೀಡಬಾರದು' ಎಂದು ವಾದ ಮಂಡಿಸಿದರು.
ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರಶ್ನೆ
ವಾದ ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರು, 'ಕೆಲ ಸಂಪ್ರದಾಯಗಳಲ್ಲಿ ಮೊದಲ ವರ್ಷದ ಪುಣ್ಯಾರಾಧನೆಗೆ ಭಾರಿ ಮಹತ್ವವಿರುತ್ತದೆ. ಅಂತಹ ವಾರ್ಷಿಕ ಪಿತೃಕಾರ್ಯಕ್ಕೆ ಅನುಮತಿ ನೀಡಲು ನಿಮ್ಮ ಆಕ್ಷೇಪವಿದೆಯೇ?' ಎಂದು ದರ್ಶನ್ ಪರ ವಕೀಲರನ್ನು ಪ್ರಶ್ನಿಸಿದರು.
ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಕಾನೂನಿನ ನಿಯಮಾವಳಿಗಳ ಪ್ರಕಾರ ಕಾಮಾಕ್ಷಿಪಾಳ್ಯ ಪೊಲೀಸರೇ ಪ್ರದೋಷ್ಗೆ ಬೆಂಗಾವಲು (Escort) ನೀಡಬೇಕಿತ್ತು. ಕೋರ್ಟ್ ಸೂಚನೆಯಂತೆ ಪ್ರತ್ಯೇಕ ಜೀಪ್ನಲ್ಲಿ ಅವರಿಗೆ ಸೂಕ್ತ ಭದ್ರತೆ ನೀಡಲಾಗಿದೆ. ಆದರೆ, ಪಿತೃಕಾರ್ಯಕ್ಕಾಗಿ 20 ದಿನಗಳ ಸುದೀರ್ಘ ಮಧ್ಯಂತರ ಜಾಮೀನು ನೀಡುವುದಕ್ಕೆ ಪ್ರಾಸಿಕ್ಯೂಷನ್ ಆಕ್ಷೇಪವಿದೆ ಎಂದು ಹೈಕೋರ್ಟ್ ಗಮನಕ್ಕೆ ತಂದರು.
ಸಂದರ್ಭದ ಅನುಚಿತ ಲಾಭ ಪಡೆಯಬೇಡಿ: ಕೋರ್ಟ್ ಕಠಿಣ ಷರತ್ತು
ಎಲ್ಲಾ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠವು, 'ತಂದೆಯ ವಾರ್ಷಿಕ ಪುಣ್ಯಕಾರ್ಯಕ್ಕೆ 20 ದಿನಗಳ ಕಾಲಾವಕಾಶದ ಅಗತ್ಯವಿಲ್ಲ. ಅರ್ಜಿದಾರರು ಸಂದರ್ಭದ ಅನುಚಿತ ಲಾಭ ಪಡೆಯಲು ಯತ್ನಿಸಬಾರದು' ಎಂದು ಅಭಿಪ್ರಾಯಪಟ್ಟಿತು. ನಟ ದರ್ಶನ್ ಪರ ವಕೀಲರ ಸಹಮತದೊಂದಿಗೆ ಹೈಕೋರ್ಟ್ ಕಠಿಣ ಷರತ್ತುಗಳನ್ನು ವಿಧಿಸಿ 5 ದಿನಗಳ ಕಾಲ ಅನುಮತಿ ನೀಡಿದೆ. ನವೆಂಬರ್ 7 ರಿಂದ ನವೆಂಬರ್ 12 ರವರೆಗೆ ಮಾತ್ರ ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್ಗೆ ಅನುಮತಿ ನೀಡಲಾಗಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಜೈಲಿನಿಂದ ಪ್ರದೋಷ್ನನ್ನು ಕರೆತಂದು, ಪಿತೃಕಾರ್ಯ ಮುಗಿದ ಬಳಿಕ ಸಂಜೆ 6 ಗಂಟೆಗೆ ಮರಳಿ ಜೈಲಿಗೆ ಕರೆದೊಯ್ಯಬೇಕು. ಜೈಲಿನಿಂದ ಕರೆತರುವಾಗ ಮತ್ತು ಕರೆದೊಯ್ಯುವಾಗ 'ನಗರ ಸಶಸ್ತ್ರ ರಿಸರ್ವ್' ಪೊಲೀಸ್ ಬೆಂಗಾವಲು ಪಡೆ ಇರಬೇಕು.
ಪಿತೃಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರು/ಸಂಬಂಧಿಕರು ಹಾಗೂ ಪೂಜೆ ನಡೆಸಿಕೊಡುವ ಪುರೋಹಿತರ ಹೆಸರುಗಳ ಸಂಪೂರ್ಣ ಪಟ್ಟಿಯನ್ನು ಪೊಲೀಸರಿಗೆ ಕಡ್ಡಾಯವಾಗಿ ನೀಡಬೇಕು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು, ಸಾಕ್ಷಿಗಳು ಅಥವಾ ಆರೋಪಿಗಳನ್ನು ಭೇಟಿಯಾಗಲು ಅಥವಾ ಸಂಪರ್ಕಿಸಲು ಯಾವುದೇ ರೀತಿಯ ಅವಕಾಶ ನೀಡಬಾರದು. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ಗೆ ಹೈಕೋರ್ಟ್ನಿಂದ ತಾತ್ಕಾಲಿಕ ಮತ್ತು ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಪಿತೃಕಾರ್ಯ ನೆರವೇರಿಸಲು ಅವಕಾಶ ಸಿಕ್ಕಂತಾಗಿದೆ.






