ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಏಕವಚನದ ವಾಗ್ದಾಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ತಾವು ಸತ್ಯ ಮಾತನಾಡಿದರೆ ಕುಮಾರಸ್ವಾಮಿಗೆ ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಆಗಲಿದೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಅ.15): ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಮಾತಿನ ಪ್ರಹಾರ ತೀವ್ರ ಸ್ವರೂಪ ಪಡೆದುಕೊಂಡಿವೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡುತ್ತಿರುವ ಸರಣಿ ಆರೋಪಗಳು ಹಾಗೂ ಬಳಸುತ್ತಿರುವ ಏಕವಚನದ ಮಾತುಗಳ ವಿರುದ್ಧ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡಿದ ತಕ್ಷಣ ಪ್ರಿಯಾಂಕ್ ಖರ್ಗೆ ಹೆದರಿಕೊಳ್ಳುತ್ತಾನೆ, ನಮ್ಮನ್ನು ಹೆದರಿಸಬಹುದು, ಬೆದರಿಸಬಹುದು ಅಂದುಕೊಂಡಿದ್ದರೆ ಅದು ಅವರ ಭ್ರಮೆ. ಅವರು ಮರ್ಯಾದೆ ಕೊಟ್ಟು ಮಾತನಾಡಿದರೆ ನಾವು ಕೇಳಲು ರೆಡಿ ಇದ್ದೇವೆ. ಆದರೆ ಅವರು ನಮಗೆ ಯಾವ ಭಾಷೆಯಲ್ಲಿ ಮಾತನಾಡುತ್ತಾರೋ, ಅದೇ ಭಾಷೆಯಲ್ಲಿ ಅವರಿಗೆ ಪ್ರತ್ಯುತ್ತರ ನೀಡಲು ನಾವು ಸಂಪೂರ್ಣ ಸಿದ್ಧರಿದ್ದೇವೆ ಎಂದು ಎಚ್ಚರಿಸಿದ್ದಾರೆ.

ನಾನು ಮಾತನಾಡೋಕೆ ಶುರು ಮಾಡಿದ್ರೆ ಇನ್ನೊಮ್ಮೆ ಓಪನ್ ಹಾರ್ಟ್ ಸರ್ಜರಿ ಆಗುತ್ತೆ

ಕುಮಾರಸ್ವಾಮಿ ಅವರ ನಿಂದನೀಯ ಮಾತುಗಳ ಬಗ್ಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ನಾನು ಏನಾದರೂ ಸತ್ಯಗಳನ್ನು ಮಾತನಾಡೋಕೆ ಶುರು ಮಾಡಿದರೆ ಅವರು ಇನ್ನೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತೆ. ನೀವು ನನಗೆ ಹೀಗೆ ಬಾಯಿಗೆ ಬಂದಂತೆ ನಿಂದನೆ ಮಾಡುವುದರಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನಿಮಗೂ ವಯಸ್ಸಾಗಿದೆ, ನಿಮ್ಮ ನಾಲಿಗೆಯ ಮೇಲೆ ನಿಮಗೊಂದು ಹಿಡಿತ ಇರಲಿ. ನಾನು ನಿಮ್ಮ ಸಂಸ್ಕೃತಿ ಅಥವಾ ಲೆವೆಲ್‌ಗೆ ಇಳಿಯಲು ಇಷ್ಟಪಡುವುದಿಲ್ಲ. ಆದರೆ ನಮ್ಮ ಅಪ್ಪನ (ಮಲ್ಲಿಕಾರ್ಜುನ ಖರ್ಗೆ) ವಿಚಾರದ ಬಗ್ಗೆ ಮಾತನಾಡಿದರೆ, ನಾವು ಕೂಡ ಅದೇ ರೀತಿ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಿಮ್ಮಪ್ಪ, ಆರ್‌ಎಸ್‌ಎಸ್‌ಗೇ ಹೆದರಲಿಲ್ಲ, ನಿಮಗ್ಯಾಕೆ ಹೆದರಲಿ?

ಕುಮಾರಸ್ವಾಮಿ ಅವರ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, "ಮೊನ್ನೆಯಿಂದಲೂ ನಾನು ಗೌರವ ಕೊಟ್ಟು ಮಾತನಾಡುತ್ತಿದ್ದೇನೆ. ನಿಮ್ಮ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಾ ಎಂದು ಹಲವು ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಏಕವಚನದಲ್ಲಿ ಮಾತನಾಡಿದರೆ ನಾನು ಹೆದರಿಕೊಳ್ಳುತ್ತೇನೆ ಅಂದುಕೊಳ್ಳಬೇಡಿ. ನಿಮ್ಮ ಅಪ್ಪ ಹಾಗೂ ಆರ್‌ಎಸ್‌ಎಸ್ (RSS) ಸಂಸ್ಥೆಗೆ ಎಂದೂ ಹೆದರಲಿಲ್ಲ, ಹಾಗಿರುವಾಗ ನಾನು ನಿಮ್ಮಂತಹವರಿಗೆ ಯಾಕೆ ಹೆದರಲಿ? ಎಂದು ಕೌಂಟರ್ ನೀಡಿದ್ದಾರೆ.

'ತಾಕತ್ತಿದ್ರೆ ಅರೆಸ್ಟ್ ಮಾಡಲಿ' ಸವಾಲಿಗೆ ರಿಯಾಕ್ಷನ್ - ದಾಖಲೆ ನೀಡಲು ಪಟ್ಟು

'ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ' ಎಂಬ ಕುಮಾರಸ್ವಾಮಿ ಅವರ ಸವಾಲಿನ ಬಗ್ಗೆ ಪ್ರಸ್ತಾಪಿಸಿದ ಸಚಿವರು, "ಅರೆಸ್ಟ್ ಹೆಂಗ್ರೀ ಸುಮ್ಮನೆ ಮಾಡಲು ಸಾಧ್ಯ? ಅರೆಸ್ಟ್ ಮಾಡುವುದನ್ನು ಅವರಿಂದ ನಾನು ಕಲಿಯಬೇಕಾಗಿಲ್ಲ. ಮೊದಲು ತಾಕತ್ತಿದ್ದರೆ ನಿಮ್ಮ ಬಳಿ ಇರುವ ದಾಖಲೆಗಳನ್ನು ಕೊಡಿ. ನಿಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ನೀವು ತಪ್ಪು ಮಾಡಿದ್ದರೆ ನಿಮ್ಮನ್ನು ಖಂಡಿತವಾಗಿಯೂ ಅರೆಸ್ಟ್ ಮಾಡೇ ಮಾಡುತ್ತೇವೆ. ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ಮಾಹಿತಿ ಹಾಗೂ ದಾಖಲೆಗಳಿದ್ದರೆ ಕೊಡಿ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ದಾಖಲೆಗಳಿದ್ದರೆ ಕಮೀಷನರ್‌ ಕಚೇರಿಯಲ್ಲೇ ಕಂಪ್ಲೇಂಟ್ ಕೊಡಲಿ ಎಂದು ಕಿಡಿಕಾರಿದರು.

ಅಸೂಯೆಗೆ ಮದ್ದಿಲ್ಲ, ಎವಿಡೆನ್ಸ್ ಬೇಕಲ್ಲವೇ?

ಮುಂದುವರಿದು ಮಾತನಾಡಿದ ಅವರು, "ಅಸೂಯೆ ಎನ್ನುವುದಕ್ಕೆ ಯಾವುದೇ ರೀತಿಯ ಮದ್ದಿಲ್ಲ. ಸುಮ್ಮನೆ ಮೌಂಟ್ ಕಾರ್ಮೆಲ್ ಕಾಲೇಜು ಪಕ್ಕದ ಹೋಟೆಲ್, ಸಿಎಂ ಕಚೇರಿ ಪಕ್ಕದ ಪಂಚತಾರಾ ಹೋಟೆಲ್ ಎಂದು ಏನೇನೋ ಮಾತನಾಡಿದರೆ ಸಾಲದು, ಅದಕ್ಕೆ ಸೂಕ್ತ ಎವಿಡೆನ್ಸ್ ಮತ್ತು ದಾಖಲೆಗಳು ಬೇಕಲ್ಲವೇ? ಸುಮ್ಮನೆ ಬಾಯಿಗೆ ಬಂದಂತೆ ಏನೇನೋ ಮಾತನಾಡುವುದನ್ನು ಬಿಟ್ಟು, ದಾಖಲೆಗಳಿದ್ದರೆ ತಂದು ನೀಡಲಿ" ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.