ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿಗೆ ಕೇಂದ್ರ ಶಿಕ್ಷಣ ಸಚಿವಾಲಯವು 'ಡೀಮ್ಡ್ ವಿಶ್ವವಿದ್ಯಾಲಯ' ಸ್ಥಾನಮಾನವನ್ನು ನೀಡಿದೆ. ಯುಜಿಸಿ ಶಿಫಾರಸಿನ ಮೇರೆಗೆ ಈ ಮಾನ್ಯತೆ ದೊರೆತಿದ್ದು, 'ವಿಕಸಿತ್ ಭಾರತ್ 2047' ಗುರಿಯೊಂದಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದಾಗಿ ಸಂಸ್ಥೆ ಘೋಷಿಸಿದೆ.
ಬೆಂಗಳೂರು (ಜೂ.25): ಸಿಲಿಕಾನ್ ಸಿಟಿಯ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮೌಂಟ್ ಕಾರ್ಮೆಲ್ ಕಾಲೇಜಿಗೆ (Mount Carmel College) ಕೇಂದ್ರ ಶಿಕ್ಷಣ ಸಚಿವಾಲಯವು ‘ಡೀಮ್ಡ್ ವಿಶ್ವವಿದ್ಯಾಲಯ’ (Deemed-To-Be-University) ಸ್ಥಾನಮಾನವನ್ನು ನೀಡಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಶಿಫಾರಸಿನ ಮೇರೆಗೆ ಈ ಹೆಮ್ಮೆಯ ಮಾನ್ಯತೆಯನ್ನು ನೀಡಲಾಗಿದೆ. ಜೂನ್ 25, 2026 ರಂದು ನಡೆದ ಸಭೆಯಲ್ಲಿ ಸಿಎಸ್‌ಎಸ್‌ಟಿ (CSST) ಸುಪೀರಿಯರ್ ಜನರಲ್ ಹಾಗೂ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿಸ್ಟರ್ ಜೋಸ್ ಲಿನೆಟ್ ಅವರು ಈ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಇದೇ ವೇಳೆ ವಿಶ್ವವಿದ್ಯಾಲಯದ ಹೊಸ ಲೋಗೋವನ್ನು ಸಹ ಅನಾವರಣಗೊಳಿಸಲಾಯಿತು.
ದೇಶದ ಪ್ರಗತಿಯ ಧ್ಯೇಯವಾದ 'ವಿಕಸಿತ್ ಭಾರತ್ 2047' ಕ್ಕೆ ಪೂರಕವಾಗಿ, ಗುಣಮಟ್ಟದ, ಇನ್‌ಕ್ಲೂಸಿವಿಟಿ, ಸಮಾನತೆಯ ಹಾಗೂ ಕೈಗೆಟುಕುವ ದರದ ಉನ್ನತ ಶಿಕ್ಷಣವನ್ನು ನೀಡುವುದು ಈ ನೂತನ ವಿಶ್ವವಿದ್ಯಾಲಯದ ಮುಖ್ಯ ಗುರಿಯಾಗಿದೆ. "ವೇಗವಾಗಿ ಬದಲಾಗುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮ್ಮ ಸಂಸ್ಥಾಪಕಿಯವರ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವುದು ನಮಗೆ ಸಿಕ್ಕ ಗೌರವ ಮತ್ತು ಜವಾಬ್ದಾರಿಯಾಗಿದೆ" ಎಂದು ಸಿಸ್ಟರ್ ಜೋಸ್ ಲಿನೆಟ್ ತಿಳಿಸಿದ್ದಾರೆ.
ಕೇರಳದಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ಇತಿಹಾಸ ಬರೆದ ಸಂಸ್ಥೆ!
ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯು ಮೊದಲ ಬಾರಿಗೆ 1944 ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಆರಂಭವಾಯಿತು. ಮಹಿಳಾ ಶಿಕ್ಷಣಕ್ಕೆ ಹೆಚ್ಚುತ್ತಿದ್ದ ಬೇಡಿಕೆಯನ್ನು ಈಡೇರಿಸಲು 1948 ರಲ್ಲಿ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. 2005 ರಲ್ಲಿ ಇದು ಸ್ವಾಯತ್ತ (Autonomous) ಸಂಸ್ಥೆಯಾಗಿ ಮಾರ್ಪಟ್ಟಿತು. 2022 ರಲ್ಲಿ ಇದರ ಸ್ವಾಯತ್ತ ಸ್ಥಾನಮಾನವನ್ನು ಮತ್ತೊಂದು ದಶಕಕ್ಕೆ (10 ವರ್ಷ) ವಿಸ್ತರಿಸಲಾಯಿತು. ದೇಶದಲ್ಲೇ ಅತಿ ಅಪರೂಪ ಎಂಬಂತೆ ಬರೋಬ್ಬರಿ 5 ಬಾರಿ ನ್ಯಾಕ್ (NAAC) ಮಾನ್ಯತೆಯ ಪ್ರಕ್ರಿಯೆಗೆ ಒಳಪಟ್ಟ ಕೆಲವೇ ಕೆಲವು ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಸದ್ಯ ಇದು 'A+' ಶ್ರೇಣಿಯನ್ನು ಹೊಂದಿದೆ.
ಕೋ-ಎಜುಕೆಷನ್ ಹಾಗೂ ಕೋರ್ಸ್‌ಗಳ ವಿವರ
ಸುದೀರ್ಘ ಕಾಲದವರೆಗೆ ಕೇವಲ ಮಹಿಳಾ ಕಾಲೇಜಾಗಿದ್ದ ಮೌಂಟ್ ಕಾರ್ಮೆಲ್, 2023 ರಲ್ಲಿ ಸಹ-ಶಿಕ್ಷಣ (Co-educational) ಸಂಸ್ಥೆಯಾಗಿ ಬದಲಾವಣೆಗೊಂಡಿತು. ಪ್ರಸ್ತುತ ಈ ಸಂಸ್ಥೆಯು 54 ಪದವಿ (Undergraduate), 18 ಸ್ನಾತಕೋತ್ತರ ಪದವಿ (Post Graduate) ಹಾಗೂ 11 ಪಿಎಚ್‌ಡಿ (Doctoral) ಕಾರ್ಯಕ್ರಮಗಳನ್ನು ನೀಡುತ್ತಾ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ಭಾರತದ ಟಾಪ್ 20 ಕಾಲೇಜುಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಸಂಸ್ಥೆಗೆ ವಿಶ್ವವಿದ್ಯಾಲಯದ ಗರಿ ಸಿಕ್ಕಿರುವುದು ಅದರ ವ್ಯವಸ್ಥಾಪಕ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಸಂದ ಜಯವಾಗಿದೆ.


