ಬೆಂಗಳೂರಿನ ನಮ್ಮ ಮೆಟ್ರೋ, ವಿಶೇಷವಾಗಿ ನೇರಳೆ ಮಾರ್ಗದಲ್ಲಿ, ಪದೇ ಪದೇ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ. ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲುಗಳು ಕೆಟ್ಟು ನಿಲ್ಲುತ್ತಿದ್ದು, ಇದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡಿದೆ ಮತ್ತು 15 ವರ್ಷ ಹಳೆಯ ಮೆಟ್ರೋದ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಬೆಂಗಳೂರು (ಜೂ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೇವಲ 15 ವರ್ಷಗಳ ಸೇವೆ ನೀಡಿದ್ದಕ್ಕೆ ಗುಜರಿಸೇರುತ್ತಿದೆಯಾ ನಮ್ಮ ಮೆಟ್ರೋ ಎಂಬ ಅನುಮಾನ ಕಾಡುತ್ತಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಾಲು ಸಾಲು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿವೆ. ಇಂದು ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ಕೆಟ್ಟು ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ಏನಿದು ಘಟನೆ?
ಬೆಂಗಳೂರಿನ ಟ್ರಾಫಿಕ್ ಮುಕ್ತ ಸಂಚಾರ ಜೀವನಾಡಿ 'ನಮ್ಮ ಮೆಟ್ರೋ' (Namma Metro) ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕಿಂತ ಹೆಚ್ಚಾಗಿ ಕಿರಿಕಿರಿಯನ್ನೇ ನೀಡುತ್ತಿದೆ. ಗುರುವಾರ ಸಂಜೆ ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಬಂದ ಮೆಟ್ರೋ ರೈಲಿನಲ್ಲಿ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡಿತು. ರೈಲಿನ ಬಾಗಿಲುಗಳು ಕ್ಲೋಸ್ ಆಗದ ಕಾರಣ, ಸುಮಾರು 10 ನಿಮಿಷಗಳ ಕಾಲ ಮೆಟ್ರೋ ರೈಲು ನಿಂತಲ್ಲೇ ನಿಂತಿತು. ಇದರಿಂದ ಮೆಟ್ರೋ ಒಳಗೆ ಇದ್ದ ಪ್ರಯಾಣಿಕರು ತುಂಬಿಕೊಂಡಿದ್ದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇನ್ನು ರೈಲು ತಾಂತ್ರಿಕ ದೋಷ ಎನ್ನುತ್ತಿದ್ದಂತೆ ಕೆಲವು ಪ್ರಯಾಣಿಕರು ನಿಲ್ದಾಣದಲ್ಲಿ ಇಳಿದುಕೊಂಡು ಸುಧಾರಿಸಿಕೊಂಡರು. ಕೇವಲ ಒಂದು ನಿಲ್ದಾಣದಲ್ಲಿ ರೈಲು ನಿಂತಿದ್ದರಿಂದ ಇಡೀ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಮೆಜೆಸ್ಟಿಕ್ ಸೇರಿದಂತೆ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಜನಜಂಗುಳಿ ಕಂಡುಬಂದಿತು.
ಎರಡು ದಿನದ ಹಿಂದೆ ಇದೇ ಪರಿಸ್ಥಿತಿ:
ಆಘಾತಕಾರಿ ವಿಷಯವೆಂದರೆ, ಕಳೆದ ಎರಡು ದಿನಗಳ ಹಿಂದಷ್ಟೇ ಇದೇ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ವೇಳೆ ಮೆಟ್ರೋ ಪ್ರಯಾಣಿಕರು ಕಾದು ಸುಸ್ತಾಗಿ ಕೊನೆಗೆ ಆಟೋ, ಬೈಕ್, ಬಸ್ ಹಾಗೂ ಲಾರಿಗಳಲ್ಲಿ ಜನರು ಮನೆಯನ್ನು ಸೇರಿಕೊಂಡಿದ್ದರು. ಇನ್ನು ರೈಲನ್ನು ರಾತ್ರಿಯಿಡೀ ದುರಸ್ತಿ ಮಾಡಿ ಮರುದಿನ ಬಳೆಗ್ಗೆ 4 ಗಂಟೆ ವೇಳೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಪುನಃ 2 ದಿನಗಳ ಬಳಿಕ ಮತ್ತದೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಮೆಟ್ರೋ ರೈಲು ತಾಂತ್ರಿಕ ದೋಷದಿಂದ 10 ರಿಂದ 15 ನಿಮಿಷಗಳ ಕಾಲ ನಿಂತಲ್ಲೇ ನಿಂತಿದೆ.

15 ವರ್ಷಕ್ಕೆ ಗುಜರಿಯಾಯ್ತಾ ಮೆಟ್ರೋ?
ಬೆಂಗಳೂರಿನ ಮೆಟ್ರೋ 2011ರ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾಗಿದ್ದು, ಮುಂದಿನ ನಾಲ್ಕೈದು ತಿಂಗಳು ಕಳೆದರೆ 15 ವರ್ಷ ಪೂರ್ಣಗೊಳ್ಳಲಿದೆ. ಕೇವಲ ಹದಿನೈದು ವರ್ಷಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ರೈಲುಗಳು ಗುಜರಿ ಸೇರುವಂತಾಗಿಯೇ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಜನರ ವಿರೋಧದ ನಡುವೆಯೂ ಶೇ.50ರಿಂದ ಶೇ.80ರಷ್ಟು ಟಿಕೆಟ್ ದರವನ್ನು ಹೆಚ್ಚಳ ಮಾಡಿದ ಮೆಟ್ರೋ ಪ್ರಯಾಣಿಕರ ಪ್ರತಿಭಟನೆಗೂ ಜಗ್ಗದೇ ಅದೇ ದರವನ್ನು ಮುಂದುವರೆಸಿತ್ತು. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಹಾಗೂ ಕೋಟ್ಯಂತರ ರೂ. ಆದಾಯ ಬರುವ ಮೆಟ್ರೋ ರೈಲಿನ ಸರಿಯಾದ ನಿರ್ವಹಣೆ ಮಾಡದಿರುವುದಕ್ಕೆ ಬೆಂಗಳೂರು ಜನತೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಟ್ರಾಫಿಕ್ ಸಮಸ್ಯೆ ಭೀತಿ:
ದಿನಕ್ಕೆ ಲಕ್ಷಾಂತರ ಜನ ಸಂಚರಿಸುವ ಮೆಟ್ರೋ ಹೀಗೆ ಪದೇ ಪದೇ ಕೆಟ್ಟು ನಿಂತರೆ, ಜನರು ಮೆಟ್ರೋ ಬಿಟ್ಟು ಮತ್ತೆ ತಮ್ಮ ಸ್ವಂತ ವಾಹನಗಳ ಮೊರೆ ಹೋಗಲಿದ್ದಾರೆ. ಇದರಿಂದ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣಿಸುವುದು ಖಚಿತ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ರೈಲುಗಳ ಸರಿಯಾದ ನಿರ್ವಹಣೆ ಮಾಡದಿದ್ದರೆ ಮೆಟ್ರೋ ನಂಬಿ ಬರುವ ಪ್ರಯಾಣಿಕರ ಗತಿ ಏನು? ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.


