ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದ ಚಿಕ್ಕಪೇಟೆಯ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಪಟಾಕಿ ಕಿಡಿಯಿಂದ ಫ್ಲೆಕ್ಸ್‌ ಬ್ಯಾನರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಬೆಂಗಳೂರು (ಜ.15): ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಇದ್ದ ಕಾರ್ಯಕ್ರಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಚಿಕ್ಕಪೇಟೆಯಲ್ಲಿ ದಿನೇಶ್‌ ಗುಂಡೂರಾವ್‌ ಅವರ ಸಂಕ್ರಾಂತಿ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಫ್ಲೆಕ್ಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹೋಗುವಷ್ಟರಲ್ಲೇ ಸ್ಥಳೀಯರೇ ಬೆಂಕಿ ಆರಿಸಿದ್ದಾರೆ. ಜನರ ಸ್ವಾಗತಕ್ಕಾಗಿದೆ ತಾತ್ಕಾಲಿಕ ಆರ್ಚ್‌ ತಯಾರಿಸಿ ಸ್ಥಳೀಯರು ಬ್ಯಾನರ್‌ ಕಟ್ಟಿದ್ದರು.

ಈ ವೇಳೆ ಆರ್ಚ್‌ ಬ್ಯಾನರ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಆದರೆ, ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ. ಪಟಾಕಿಯ ಬೆಂಕಿ‌ ಕಿಡಿ ಬಿದ್ದು ಅಗ್ನಿ ಅವಘಡ ಆಗಿರುವ ಸಾಧ್ಯತೆ ಇದೆ. ಚಿಕ್ಕಪೇಟೆಯ ಕಾಶಿವಿಶ್ವನಾಥ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಕ್ರಾಂತಿ ಹಬ್ಬ ಹಿನ್ನೆಲೆ ಅದ್ದೂರಿ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಸಂಕ್ರಾಂತಿ ಆಚರಣೆ ಜೊತೆಗೆ ಕಾಶಿವಿಶ್ವೇಶ್ವರ ದೇವಸ್ಥಾನ ರಸ್ತೆ ಉದ್ಘಾಟನೆ ಕೂಡ ಇತ್ತು. ಈ ವೇಳೆ ಘಟನೆ ನಡೆದಿದೆ.

ಬ್ಯಾನರ್‌ಗೆ ಹೊತ್ತಿಕೊಂಡ ಬೆಂಕಿ

ಸಂಕ್ರಾಂತಿ ಹಬ್ಬದ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಅದಕ್ಕಾಗಿ ದೇವಾಲಯದ ಮುಂದೆ ಆಯೋಜಕರು ಸಿಂಗಾರ ಮಾಡಿದ್ದರು. ಹುಲ್ಲು,ಹೂ ಬ್ಯಾನರ್ ಗಳಿಂದ ಸಿಂಗಾರ ಮಾಡಲಾಗಿತ್ತು. ಪಟಾಕಿ‌ ಹಚ್ಚುವಾಗ ಬೆಂಕಿ‌ ಕಿಡಿ ಬ್ಯಾನರ್ ಗೆ ಹಾಕಿದ್ದ ಹುಲ್ಲಿಗೆ ಬಿದ್ದು ಅವಘಡ ಸಂಭವಿಸಿದೆ. ನೋಡ ನೋಡುತ್ತಿದ್ದಂದೆ ಇಡೀ ಬ್ಯಾನರ್‌ಗೆ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ದೇವಾಲಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ದೇವರ ದರ್ಶನ‌ ಪಡೆಯಲು ವೃದ್ಧರು, ಮಕ್ಕಳು, ಮಹಿಳೆಯರು ಬಂದಿದ್ದರು. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು. ಬಳೆಪೇಟೆ ಸರ್ಕಲ್ ನಿಂದ ಚಿಕ್ಕಪೇಟೆವರೆಗೂ ಚಿಕ್ಕದಾದ ರಸ್ತೆ. ಬೆಂಕಿ‌ ಹೆಚ್ಚಾಗಿ ಜನ ಓಡಿದ್ದರೆ ಕಾಲ್ತುಳಿತ ಆಗುವ ಸಾಧ್ಯತೆ ಕೂಡ ಇತ್ತು. ಪ್ರಜ್ಞೆಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಹಚ್ಚಿರೋದೇ ಘಟನೆಗೆ ಕಾರಣ ಎನ್ನಲಾಗಿದೆ.