ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ಒಬ್ಬರು ನೋಡಲ್‌ ಅಧಿಕಾರಿ ನೇಮಿಸಲಾಗುವುದು. ಕೆಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಗಂಡು ಮಕ್ಕಳೇ ಹೆಚ್ಚು ಜನಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ವಿಧಾನ ಪರಿಷತ್‌ (ಡಿ.17): ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ಒಬ್ಬರು ನೋಡಲ್‌ ಅಧಿಕಾರಿ ನೇಮಿಸಲಾಗುವುದು. ಕೆಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಗಂಡು ಮಕ್ಕಳೇ ಹೆಚ್ಚು ಜನಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಬಿಜೆಪಿಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭ್ರೂಣ ಹತ್ಯೆ ತಡೆಗೆ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಮಾಹಿತಿ ನೀಡುವವರಿಗೆ ನೀಡುವ ಬಹುಮಾನದ ಮೊತ್ತ ಹೆಚ್ಚಿಸಲಾಗಿದೆ.

ಆದರೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ಒಂದು ರೀತಿ ಹೆಣ್ಣು ಭ್ರೂಣ ಹತ್ಯೆ ಸಮಾಜಕ್ಕೆ ಪಿಡುಗಾಗಿದೆ. ಇತ್ತೀಚೆಗೆ ಲಿಂಗ ಪತ್ತೆ ಮಾಡುವ ಪೋರ್ಟಬಲ್ ಯಂತ್ರಗಳು ಲಭ್ಯವಿರುವುದರಿಂದ ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇಂತಹ ಯಂತ್ರಗಳ ಬಳಕೆಗೆ ನಿಯಂತ್ರಣ ತರಲು ಕೇಂದ್ರದ ಜೊತೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದರು. ಕೆಲ ಜಿಲ್ಲೆಗಳಲ್ಲಿ ಲಿಂಗಾನುಪಾತ ಚೆನ್ನಾಗಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ತುಂಬಾ ವ್ಯತ್ಯಾಸವಿದೆ. ಕೆಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಗಂಡು ಮಕ್ಕಳ ಜನನ ಸಂಖ್ಯೆ ಹೆಚ್ಚಿದೆ.

ಈ ಬಗ್ಗೆ ಪರಿಶೀಲಿಸಿ ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ. ಹೆಣ್ಣು ಭ್ರೂಣ ಪತ್ತೆ ಮಾಡಿದ ನಂತರ ಕೇವಲ ಗುಳಿಗೆ ಸೇವನೆಯಿಂದ ಗರ್ಭಪಾತ ಮಾಡಿಕೊಳ್ಳಬಹುದು ಎಂದ ಅವರು ಕಳೆದ ಎರಡು ವರ್ಷಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಸಂಬಂಧ ಮೂರು ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಿ.ಟಿ.ರವಿ ಅವರು, ಲಿಂಗ ಪತ್ತೆ ಮಾಡಿದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ವೈದ್ಯರನ್ನು ಕೇವಲ ಅಮಾನತು ಮಾಡಿದರೆ ಸಾಲುವುದಿಲ್ಲ. ಮುಂದೆ ಅವರು ವ್ಯೆದ್ಯ ವೃತ್ತಿ ಮುಂದುವರೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೇಲ್ಮನವಿಗೆ ನಿರ್ಧಾರ

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಸರ್ಕಾರ ಮಾಡಿರುವ ಆದೇಶ ರದ್ದುಪಡಿಸಿರುವ ಹೈಕೋರ್ಟ್‌ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಶೂನ್ಯವೇಳೆಯಲ್ಲಿ ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಮತ್ತು ಧನಂಜಯ ಸರ್ಜಿ ಅವರು ಪ್ರಸ್ತಾಪಿಸಿದ ಸಾರ್ವಜನಿಕ ಜರೂರು ವಿಷಯಕ್ಕೆ ಉತ್ತರ ನೀಡಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆಗೆ ಬರುವ ಜನರಿಗೆ ಔಷಧಗಳು ಸಂಪೂರ್ಣ ಉಚಿತವಾಗಿ ಸಿಗಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಆದರೆ, ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳಲ್ಲಿ ಔಷಧಗಳು ಸಂಪೂರ್ಣ ಉಚಿತವಾಗಿ ಸಿಗುವುದಿಲ್ಲ, ನಿಗದಿತ ಹಣ ಕೊಟ್ಟು ಖರೀದಿ ಮಾಡಬೇಕು. ಹಾಗಾಗಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಆದೇಶೀಸಲಾಗಿತ್ತು.

ಇದನ್ನು ಧಾರವಾಡ ಹೈಕೋರ್ಟ್‌ ಪೀಠ ರದ್ದುಪಡಿಸಿದ್ದು, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು. ರಾಜ್ಯದಲ್ಲಿ 2700ಕ್ಕೂ ಹೆಚ್ಚು ಜನೌಷಧ ಕೇಂದ್ರಗಳಿವೆ. ಇವುಗಳಲ್ಲಿ 180 ಮಾತ್ರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಅವುಗಳನ್ನು ಆಸ್ಪತ್ರೆ ಆವರಣದಿಂದ ಹೊರಗೆ ಸ್ಥಳಾಂತರಿಸಿಕೊಂಡರೆ ನಮ್ಮ ಅಭ್ಯಂತರ ಇಲ್ಲ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಹಣಕ್ಕೆ ಔಷಧ ಮಾರಾಟದ ವ್ಯವಸ್ಥೆ ಇರಬಾರದು ಅಷ್ಟೆ. ಈ ಮಧ್ಯೆ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಜನೌಷಧ ಕೇಂದ್ರಗಳ ಮೂಲಕ ಮಾರಾಟ ಮಾಡುವ ಔಷಧಗಳನ್ನು ಅದೇ ದರಕ್ಕೆ ರಾಜ್ಯ ಸರ್ಕಾರಕ್ಕೆ ಕೊಡಿ ಅದನ್ನು ನಾವೇ ಉಚಿತವಾಗಿ ರೋಗಿಗಳಿಗೆ ನೀಡುತ್ತೇವೆ ಎಂದು ಕೋರಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.