ಬಿಹಾರ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರದ ದುಡ್ಡಿನಲ್ಲಿ ಮತ ಖರೀದಿ ಮಾಡಿದೆ. ಚುನಾವಣೆ ಘೋಷಣೆಯಾಗಲು 4 ದಿನ ಇದ್ದಾಗ ತಲಾ 10 ಸಾವಿರ ರು. ಹಣವನ್ನು ಮಹಿಳೆಯರ‌ ಅಕೌಂಟ್‌ಗೆ ಹಾಕಿದ್ದಾರೆ.

ಮಂಗಳೂರು (ನ.16): ಬಿಹಾರ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರದ ದುಡ್ಡಿನಲ್ಲಿ ಮತ ಖರೀದಿ ಮಾಡಿದೆ. ಚುನಾವಣೆ ಘೋಷಣೆಯಾಗಲು 4 ದಿನ ಇದ್ದಾಗ ತಲಾ 10 ಸಾವಿರ ರು. ಹಣವನ್ನು ಮಹಿಳೆಯರ‌ ಅಕೌಂಟ್‌ಗೆ ಹಾಕಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಓಟು ಖರೀದಿಗೆ ಚುನಾವಣೆ ಆಯೋಗವೂ ಸಹಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತತ್ತು ಸಾವಿರ ರು. ನೀಡಿದರೆ ನ್ಯಾಯಯುತ ಚುನಾವಣೆ ಎಂದು ಹೇಗೆ ಹೇಳಲಾಗುತ್ತದೆ? ಚುನಾವಣೆ ದಿನಾಂಕಕ್ಕೂ ಅವರಿಗೂ ಹೊಂದಾಣಿಕೆ ಮಾಡಿಕೊಂಡು ಹಣ ಹಾಕಿದ್ದಾರೆ. ಓಟು ಖರೀದಿಗೆ ಚುನಾವಣೆ ಆಯೋಗವೇ ಸಹಾಯ ಮಾಡಿದಂತಾಗಿದೆ. ಎಲ್ಲ ರೀತಿಯ ಅಸ್ತ್ರಗಳನ್ನು ಕೇಂದ್ರ ಸರ್ಕಾರ, ಬಿಜೆಪಿ ಉಪಯೋಗಿಸಿದೆ ಎಂದು ದೂರಿದರು.

ಚುನಾವಣಾ ಆಯೋಗ ಕ್ರಮ ಕೈಗೊಳ್ಳದೆ ಹೋದರೆ ಮುಂದೆ ಎಲ್ಲ ಸರ್ಕಾರಗಳು ಇದನ್ನು ಅನುಸರಿಸುತ್ತವೆ. ಚುನಾವಣೆ ಹತ್ತಿರ ಬರುವಾಗ ಹಣ ಕೊಟ್ಟು ತಮಗೆ ವೋಟ್ ಹಾಕಿ ಅಂತಾರೆ. ಆರ್‌ಜೆಡಿ ಜನರಿಗೆ ನೀಡಿದ್ದು ಆಶ್ವಾಸನೆ, ಆದರೆ ಎನ್‌ಡಿಎ ಆಮಿಷ ನೀಡಿದೆ. ಸರ್ಕಾರದ ದುಡ್ಡನ್ನು ಚುನಾವಣೆಗೆ ಬಳಸಿ ಆಮಿಷ ಒಡ್ಡಿದ್ದಾರೆ, ಇದು ಆಕ್ಷೇಪಾರ್ಹ ಎಂದರು. ಅಕ್ಕಪಕ್ಕದ ರಾಜ್ಯಗಳಿಂದ‌ ಬಿಹಾರಕ್ಕೆ ವಿಶೇಷ ಸೌಲಭ್ಯಗಳನ್ನು ಮಾಡಿ‌ ರೈಲು ಕಳುಹಿಸಿಕೊಟ್ಟಿದ್ದಾರೆ, ಈ ರೀತಿ ಎಲ್ಲ ಮಾಡಿದರೆ ಸರಿಯಾ ಎಂದು ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.

ದೆಹಲಿ ಭೇಟಿ ಪೂರ್ವ ನಿಯೋಜಿತ

ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣೆಗಳಿಗೆ ವ್ಯತ್ಯಾಸವಿದೆ. ಬಿಜೆಪಿಯವರು ಉತ್ತರ ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ವಿಭಜನೆ ಮಾಡಿ ಅದನ್ನು ಚುನಾವಣೆಗೆ ಉಪಯೋಗಿಸುತ್ತಾರೆ. ದಕ್ಷಿಣ ಭಾರತದಲ್ಲಿ ಈ ವಿಭಜನೆ ನಡೆಯಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಈ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲಲು ಆಗಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಪೂರ್ವ ನಿಯೋಜಿತ. ಬಿಹಾರ ಚುನಾವಣೆ ಫಲಿತಾಂಶಕ್ಕೂ ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದರು.