ಕರ್ನಾಟಕದಲ್ಲಿ ಡೆವಲಪರ್ಗಳ ವೈಫಲ್ಯದಿಂದಾಗಿ 3,145 ವಸತಿ ಯೋಜನೆಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸಾವಿರಾರು ಮನೆ ಖರೀದಿದಾರರು ಬೀದಿಗೆ ಬೀಳುವಂತಾಗಿದೆ. ಕೆ-ರೇರಾ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಎಫ್ಪಿಸಿಇ ಗಂಭೀರ ಆರೋಪ ಮಾಡಿದೆ.
ಬೆಂಗಳೂರು (ನ.4): ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಿದು ಸ್ವಂತ ಮನೆಯ ಕನಸು ಕಂಡಿದ್ದ ಕರ್ನಾಟಕದ ಸಾವಿರಾರು ಮನೆ ಖರೀದಿದಾರರು ಇದೀಗ ಬೀದಿಗೆ ಬೀಳುವಂತಾಗಿದೆ. ಡೆವಲಪರ್ಗಳು ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ವಿಫಲವಾದ ಕಾರಣ ರಾಜ್ಯಾದ್ಯಂತ ಬರೋಬ್ಬರಿ 3,145 ವಸತಿ ಯೋಜನೆಗಳು (Housing Projects) ಅರ್ಧಕ್ಕೇ ನಡುನೀರಿನಲ್ಲಿ ಸ್ಥಗಿತಗೊಂಡಿದ್ದು, 'ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ' (K-RERA) ಪ್ರಕಟಿಸಿರುವ ಅಧಿಕೃತ ಅಂಕಿಅಂಶಗಳಿಂದ ಈ ಆಘಾತಕಾರಿ ಸತ್ಯ ಹೊರಬಿದ್ದಿದೆ!
2017 ರಲ್ಲಿ ಕರ್ನಾಟಕ ರೇರಾ (K-RERA) ಸಂಸ್ಥೆ ಅಸ್ತಿತ್ವಕ್ಕೆ ಬಂದಂದಿನಿಂದ ಇದುವರೆಗೆ ಒಟ್ಟು 10,621 ವಸತಿ ಯೋಜನೆಗಳು ಪ್ರಾಧಿಕಾರದಲ್ಲಿ ನೋಂದಾಯಿಸಲ್ಪಟ್ಟಿವೆ. ಆದರೆ, ಇವುಗಳ ಪೈಕಿ ಸುಮಾರು ಶೇಕಡಾ 30 ರಷ್ಟು ಯೋಜನೆಗಳು ವರ್ಷಗಳಿಂದ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ. 'ಲ್ಯಾಪ್ಸ್' (ಅವಧಿ ಮುಗಿದ) ಯೋಜನೆಗಳ ಪಟ್ಟಿಯ ಪ್ರಕಾರ, ಕೇವಲ ಖಾಸಗಿ ಬಿಲ್ಡರ್ಗಳು ಮಾತ್ರವಲ್ಲದೆ, ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ (KSDB), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ವಿವಿಧ ನಗರ ಸಭೆ-ಪುರಸಭೆಗಳು ಕೈಗೆತ್ತಿಕೊಂಡಿರುವ ಹಲವು ಸರ್ಕಾರಿ ವಸತಿ ಯೋಜನೆಗಳೂ ಕೂಡ ಪೂರ್ಣಗೊಳ್ಳದೆ ಲ್ಯಾಪ್ಸ್ ಪಟ್ಟಿಗೆ ಸೇರಿವೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ: ಎಫ್ಪಿಸಿಇ ಗಂಭೀರ ಆರೋಪ
'ಫೋರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್' (FPCE - ಈ ಹಿಂದಿನ 'ಫೈಟ್ ಫಾರ್ ರೇರಾ') ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಂಕರ್ ಈ ಕುರಿತು ಆತಂಕ ವ್ಯಕ್ತಪಡಿಸಿ ಮಾತನಾಡಿದ್ದಾರೆ. ದೇಶಾದ್ಯಂತ ಮನೆ ಖರೀದಿದಾರರು ಈ ರೀತಿ ಸ್ಥಗಿತಗೊಂಡ ಯೋಜನೆಗಳು ಮತ್ತು ಬಿಲ್ಡರ್ಗಳು ಪಡೆಯುವ ನಿರಂತರ ಗಡುವು ವಿಸ್ತರಣೆಯ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಕರ್ನಾಟಕದಲ್ಲೂ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಬಿಲ್ಡರ್ಗಳು ಸಲ್ಲಿಸುವ ತ್ರೈಮಾಸಿಕ ಪ್ರಗತಿ ವರದಿಗಳನ್ನು (Quarterly Progress Reports) ಪರಿಶೀಲಿಸಲು ಮತ್ತು ಯೋಜನೆಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತಿವೆಯೇ ಎಂದು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲು ರೇರಾ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಧಿಕಾರಿಗಳ ಈ ಉಡಾಫೆಯ ಪ್ರತಿಫಲವಾಗಿಯೇ ಇಂದು ಕೆ-ರೇರಾ ಪೋರ್ಟಲ್ನಲ್ಲಿ 3,145 ಯೋಜನೆಗಳು ಲ್ಯಾಪ್ಸ್ ಎಂದು ನಮೂದಾಗಿವೆ ಎಂದು ಕಿಡಿಕಾರಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಯೋಜನೆ ವಿಳಂಬ ಮಾಡಿದ್ದಕ್ಕಾಗಿ ಬಿಲ್ಡರ್ಗಳಿಗೆ ರೇರಾ ದಂಡ ವಿಧಿಸಿದೆಯಾದರೂ, ದಂಡ ವಸೂಲಾತಿಯನ್ನು ಸರಿಯಾಗಿ ಟ್ರ್ಯಾಕ್ ಮಾಡದಿರುವುದರಿಂದ ಈ ಹಣ ಬಹುತೇಕ ಸಂತ್ರಸ್ತ ಖರೀದಿದಾರರಿಗೆ ತಲುಪಿಯೇ ಇಲ್ಲ.
₹1,253 ಕೋಟಿ ಪರಿಹಾರ ಬಾಕಿ: ಕೇವಲ ₹129 ಕೋಟಿ ವಸೂಲಿ
ಎಫ್ಪಿಸಿಇ (FPCE) ನೀಡಿದ ಅಂಕಿಅಂಶಗಳ ಪ್ರಕಾರ, ನಿಗದಿತ ಸಮಯದಲ್ಲಿ ಮನೆ ನೀಡದ ಬಿಲ್ಡರ್ಗಳಿಂದ ಸಂತ್ರಸ್ತ ಮನೆ ಖರೀದಿದಾರರಿಗೆ ಪರಿಹಾರ ಹಾಗೂ ಹಣ ಮರುಪಾವತಿ ರೂಪದಲ್ಲಿ ಕೊಡಿಸಲು ರೇರಾ ಕೋರ್ಟ್ ಬರೋಬ್ಬರಿ ₹1,253 ಕೋಟಿ ಮೌಲ್ಯದ 'ರಿಕವರಿ ಸರ್ಟಿಫಿಕೇಟ್'ಗಳನ್ನು (Recovery Certificates) ನೀಡಿದೆ. ಆದರೆ, ಕಂದಾಯ ಇಲಾಖೆ ಹಾಗೂ ಆಡಳಿತ ವ್ಯವಸ್ಥೆಯ ವಿಫಲತೆಯಿಂದಾಗಿ ಇದುವರೆಗೆ ವಸೂಲಿಯಾಗಿರುವುದು ಕೇವಲ ₹129.03 ಕೋಟಿ ರೂಪಾಯಿಗಳು ಮಾತ್ರ! ಅಂದರೆ ರೇರಾ ನ್ಯಾಯಾಲಯದಲ್ಲಿ ಜಯ ಸಿಕ್ಕಿದರೂ ಸಹ ಹಣ ಅಥವಾ ಮನೆ ಸಿಗದೆ ಕೋರ್ಟ್ ತೀರ್ಪು ಕೇವಲ ಕಾಗದದ ಹುಲಿಯಾಗಿ ಉಳಿದಿದೆ.
ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಗೆ ಆಗ್ರಹ
ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಎಂ.ಎಸ್. ಶಂಕರ್ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ (Chief Secretary) ಅಧ್ಯಕ್ಷತೆಯಲ್ಲಿ ವಸತಿ ಇಲಾಖೆ, ಕಂದಾಯ ಇಲಾಖೆ, ಬಿಡಿಎ (BDA), ಕೆ-ರೇರಾ (K-RERA) ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ 'ಸಮನ್ವಯ ಸಮಿತಿ'ಯನ್ನು (Co-ordination Committee) ತಕ್ಷಣ ರಚಿಸಬೇಕು. ನಿರ್ದಿಷ್ಟ ಕಾಲಮಿತಿಯ ಅಜೆಂಡಾವನ್ನು ನಿಗದಿಪಡಿಸಿ, ನಿಯಮಿತ ಸಭೆಗಳನ್ನು ನಡೆಸಿ ಕರ್ನಾಟಕದಲ್ಲಿ 'ರೇರಾ ಕಾಯ್ದೆ'ಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.






