ಬೆಂಗಳೂರು ಎಂದರೆ ನೆನಪಾಗುವುದು ಐಟಿ ಕಂಪನಿಗಳು, ಟ್ರಾಫಿಕ್, ದೊಡ್ಡ ದೊಡ್ಡ ಕಟ್ಟಡಗಳು ಮತ್ತು ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆ. ಆದರೆ ಇದೇ ಬೆಂಗಳೂರಿನಲ್ಲಿ ಒಂದು ಪ್ರದೇಶಕ್ಕೆ ವಿಶೇಷ ವಾಸ್ತು ಶಕ್ತಿ ಇದೆ ಎಂಬ ಚರ್ಚೆ ಇದೀಗ ಕುತೂಹಲ ಮೂಡಿಸಿದೆ.
ಬೆಂಗಳೂರು ಎಂದರೆ ನೆನಪಾಗುವುದು ಐಟಿ ಕಂಪನಿಗಳು, ಟ್ರಾಫಿಕ್, ದೊಡ್ಡ ದೊಡ್ಡ ಕಟ್ಟಡಗಳು ಮತ್ತು ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆ. ಆದರೆ ಇದೇ ಬೆಂಗಳೂರಿನಲ್ಲಿ ಒಂದು ಪ್ರದೇಶಕ್ಕೆ ವಿಶೇಷ ವಾಸ್ತು ಶಕ್ತಿ ಇದೆ ಎಂಬ ಚರ್ಚೆ ಇದೀಗ ಕುತೂಹಲ ಮೂಡಿಸಿದೆ. ಇಲ್ಲಿನ ಭೌಗೋಳಿಕ ರಚನೆ, ದಿಕ್ಕುಗಳು ಮತ್ತು ನೈಸರ್ಗಿಕ ಇಳಿಜಾರು ಅದೃಷ್ಟ ಹಾಗೂ ಸಮೃದ್ಧಿಗೆ ಪೂರಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಷ್ಟಕ್ಕೂ ಆ ಪ್ರದೇಶ ಯಾವುದು ಗೊತ್ತಾ? ಅದು ಬೆಂಗಳೂರಿನ ಕತ್ತರಗುಪ್ಪೆ!
ಸಂಖ್ಯಾಶಾಸ್ತ್ರಜ್ಞ ಹಾಗೂ ವಾಸ್ತು ತಜ್ಞ ಡಾ. ಯೋಗೇಶ್ ಶೆಟ್ಟಿ ಅವರು ಇತ್ತೀಚೆಗೆ 'Yash Unfiltered' ಕಾರ್ ಪಾಡ್ಕಾಸ್ಟ್ ಸಂದರ್ಶನದಲ್ಲಿ ಕತ್ರಿಗುಪ್ಪೆ ಪ್ರದೇಶದ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ, ಬೆಂಗಳೂರಿನಲ್ಲಿರುವ ಅತ್ಯುತ್ತಮ ವಾಸ್ತು ಹೊಂದಿರುವ ಪ್ರದೇಶಗಳಲ್ಲಿ ಕತ್ತರಗುಪ್ಪೆಯೂ ಒಂದು. ಈ ಭಾಗದಲ್ಲಿ ಮನೆ ಅಥವಾ ಕಚೇರಿ ಹೊಂದಿರುವವರು ಉತ್ತಮ ಯಶಸ್ಸು ಮತ್ತು ಪ್ರಗತಿ ಕಾಣಬಹುದು ಎಂಬುದು ಅವರ ಅಭಿಪ್ರಾಯ.
ಕತ್ರಿಗುಪ್ಪೆಯ ವಾಸ್ತು ವಿಶೇಷತೆ ಏನು?
ಕತ್ರಿಗುಪ್ಪೆ ಪ್ರದೇಶದ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಇಳಿಜಾರು ಇಲ್ಲಿನ ವಾಸ್ತು ವಿಶೇಷತೆಗೆ ಪ್ರಮುಖ ಕಾರಣ ಎಂದು ಯೋಗೇಶ್ ಶೆಟ್ಟಿ ವಿವರಿಸಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಮತ್ತು ಈಶಾನ್ಯ ದಿಕ್ಕುಗಳಿಗೆ ವಿಶೇಷ ಮಹತ್ವವಿದೆ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಿದರೆ, ಈಶಾನ್ಯ ದಿಕ್ಕು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಕತ್ತರಗುಪ್ಪೆಯ ಭೌಗೋಳಿಕ ರಚನೆ ಹಾಗೂ ರಸ್ತೆಗಳ ವಿನ್ಯಾಸವು ಈ ದಿಕ್ಕುಗಳಿಗೆ ಪೂರಕವಾಗಿವೆ ಎಂಬುದು ಅವರ ವಿಶ್ಲೇಷಣೆ. ಇದರಿಂದಾಗಿ ಈ ಪ್ರದೇಶವು ವಾಸ್ತು ದೃಷ್ಟಿಯಿಂದ ವಿಶೇಷ ಸ್ಥಾನ ಪಡೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭೂಮಿಯ ಇಳಿಜಾರೇ ಅದೃಷ್ಟದ ಹಿಂದಿನ ರಹಸ್ಯವೇ?
ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕು ಮಾತ್ರವಲ್ಲದೆ, ಭೂಮಿಯ ಇಳಿಜಾರಿಗೂ ಮಹತ್ವ ನೀಡಲಾಗುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಇಳಿಜಾರು ಹೊಂದಿರುವ ಭೂಮಿಯು ಸಂಪತ್ತು, ಕೀರ್ತಿ ಮತ್ತು ಪ್ರಗತಿಗೆ ಪೂರಕವಾಗಿರುತ್ತದೆ ಎಂಬ ನಂಬಿಕೆಯಿದೆ. ಯೋಗೇಶ್ ಶೆಟ್ಟಿ ಅವರ ಪ್ರಕಾರ, ಕತ್ತರಗುಪ್ಪೆಯ ನೈಸರ್ಗಿಕ ಭೂಪ್ರದೇಶ ಮತ್ತು ಇಳಿಜಾರು ವಾಸ್ತು ನಿಯಮಗಳಿಗೆ ಅನುಕೂಲಕರವಾಗಿದೆ. ಇದೇ ಈ ಪ್ರದೇಶದ ವಿಶೇಷತೆಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಕಾರಣಿಗಳು, ಸೆಲೆಬ್ರಿಟಿಗಳಿಗೆ ಅದೃಷ್ಟ ತರುವ ಜಾಗವೇ?
ಕತ್ರಿಗುಪ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಹಲವು ಗಣ್ಯರ ವಾಸಸ್ಥಾನಗಳಾಗಿವೆ. ಪದ್ಮನಾಭನಗರ, ಬನಶಂಕರಿ ಮತ್ತು ಹೊಸಕೆರೆಹಳ್ಳಿ ಭಾಗಗಳೂ ಈ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬದ ರಾಜಕೀಯ ಹಿನ್ನೆಲೆಯನ್ನೂ ಈ ಪ್ರದೇಶದ ಕುರಿತು ನಡೆಯುವ ಚರ್ಚೆಗಳಲ್ಲಿ ಉಲ್ಲೇಖಿಸಲಾಗುತ್ತದೆ. ಅದೇ ರೀತಿ, ಸ್ಯಾಂಡಲ್ವುಡ್ನ ನಟರು, ನಿರ್ದೇಶಕರು ಮತ್ತು ಹಿರಿಯ ಕಲಾವಿದರು ಈ ಭಾಗಗಳಲ್ಲಿ ಮನೆ ಅಥವಾ ಕಚೇರಿಗಳನ್ನು ಹೊಂದಿದ್ದಾರೆ ಎನ್ನಲಾಗುತ್ತದೆ.
ಇಲ್ಲಿನ ವಾಸ್ತು ಗುಣಲಕ್ಷಣಗಳು ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಉದ್ಯಮಿಗಳ ಬೆಳವಣಿಗೆಗೆ ಪೂರಕವಾಗಿವೆ ಎಂಬುದು ಯೋಗೇಶ್ ಶೆಟ್ಟಿ ಅವರ ಅಭಿಪ್ರಾಯ. ಆದರೆ ಒಬ್ಬ ವ್ಯಕ್ತಿಯ ಯಶಸ್ಸಿಗೆ ನಿರ್ದಿಷ್ಟ ಪ್ರದೇಶದ ವಾಸ್ತುವೇ ಕಾರಣ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನೂ ಗಮನಿಸಬೇಕು.
25 ವರ್ಷಗಳ ಸಿನಿಮಾ ಕ್ಷೇತ್ರದ ಅನುಭವ ಹೊಂದಿರುವ ವಾಸ್ತು ತಜ್ಞ
ಡಾ. ಯೋಗೇಶ್ ಶೆಟ್ಟಿ ಅವರು ಕೇವಲ ಸಂಖ್ಯಾಶಾಸ್ತ್ರ ಮತ್ತು ವಾಸ್ತು ತಜ್ಞರಷ್ಟೇ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾ ಕ್ಷೇತ್ರದ ಹಲವು ಗಣ್ಯರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ವಾಸ್ತು ವಿಚಾರಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದ ಭೌಗೋಳಿಕ ರಚನೆ, ದಿಕ್ಕುಗಳು ಮತ್ತು ನೈಸರ್ಗಿಕ ಇಳಿಜಾರಿನ ಬಗ್ಗೆ ಯೋಗೇಶ್ ಶೆಟ್ಟಿ ಹಂಚಿಕೊಂಡಿರುವ ವಿಚಾರಗಳು ಕುತೂಹಲ ಮೂಡಿಸಿವೆ. ಮನೆ ಖರೀದಿಸುವಾಗ ಸ್ಥಳ, ರಸ್ತೆ ಸಂಪರ್ಕ, ಮೂಲಸೌಕರ್ಯಗಳ ಜೊತೆಗೆ ವಾಸ್ತು ವಿಚಾರಗಳನ್ನೂ ಪರಿಗಣಿಸುವವರಿಗೆ ಈ ಚರ್ಚೆ ಆಸಕ್ತಿದಾಯಕವಾಗಬಹುದು.




