ಬೆಂಗಳೂರು ನಿವಾಸಿಯೊಬ್ಬರು ₹2.5 ರಿಂದ ₹6 ಕೋಟಿ ಮೌಲ್ಯದ ಫ್ಲ್ಯಾಟ್‌ಗಳನ್ನು ಜನರು ಹೇಗೆ ಖರೀದಿಸುತ್ತಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಪ್ರಶ್ನಿಸಿದ್ದು ವೈರಲ್ ಆಗಿದೆ. AI ಭಯ, ಉದ್ಯೋಗ ಕಡಿತ ಹಾಗೂ ಆರ್ಥಿಕ ಅನಿಶ್ಚಿತತೆ ನಡುವೆ ಲಕ್ಷಾಂತರ ರೂಪಾಯಿ EMI ಹೊರುವುದು ಹೇಗೆ ಸಾಧ್ಯ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಬೆಂಗಳೂರು ನಗರದಲ್ಲಿ ಮನೆಗಳ ಬೆಲೆ ಗಗನಕ್ಕೇರುತ್ತಿರುವುದು ಹೊಸ ವಿಚಾರವಲ್ಲ. ಆದರೆ ವಜಾಗಳು, ಕೃತಕ ಬುದ್ಧಿಮತ್ತೆ (AI) ಕಾರಣದಿಂದ ಉದ್ಯೋಗದ ಭವಿಷ್ಯದ ಬಗ್ಗೆ ಆತಂಕ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ₹2.5 ಕೋಟಿಯಿಂದ ₹6 ಕೋಟಿ ಮೌಲ್ಯದ ಫ್ಲ್ಯಾಟ್‌ಗಳನ್ನು ಜನರು ಹೇಗೆ ಖರೀದಿಸುತ್ತಿದ್ದಾರೆ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ ಎದ್ದ ಪ್ರಶ್ನೆ?
ಬೆಂಗಳೂರಿನ ನಿವಾಸಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನಗರದ ಹೊಸ 3BHK ಅಪಾರ್ಟ್‌ಮೆಂಟ್‌ಗಳ ಬೆಲೆ ಸಾಮಾನ್ಯವಾಗಿ ₹2.5 ಕೋಟಿಯಿಂದ ಆರಂಭವಾಗಿ ₹5–6 ಕೋಟಿವರೆಗೆ ತಲುಪುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಇಂತಹ ಮನೆಗಳಿಗೆ ದೊಡ್ಡ ಪ್ರಮಾಣದ ಡೌನ್ ಪೇಮೆಂಟ್ ನೀಡಿದರೂ ತಿಂಗಳಿಗೆ ₹1 ಲಕ್ಷದಿಂದ ₹1.5 ಲಕ್ಷದವರೆಗೆ EMI ಕಟ್ಟಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಿಜಕ್ಕೂ ಇಷ್ಟು ಸಂಬಳ ಸಿಗುತ್ತಿದೆಯೇ?
ತಿಂಗಳಿಗೆ ₹3 ರಿಂದ ₹5 ಲಕ್ಷ ಆದಾಯವಿಲ್ಲದೆ ಇಂತಹ ಮನೆಗಳನ್ನು ಖರೀದಿಸುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ. AI ಪ್ರಭಾವ, ಉದ್ಯೋಗ ಕಡಿತ ಮತ್ತು ಆರ್ಥಿಕ ಅನಿಶ್ಚಿತತೆ ನಡುವೆ 20–25 ವರ್ಷಗಳ ದೀರ್ಘಾವಧಿಯ ಸಾಲದ ಹೊಣೆ ಹೊರುವುದು ಎಷ್ಟು ಸುರಕ್ಷಿತ ಎಂಬುದನ್ನೂ ಪ್ರಶ್ನಿಸಿದ್ದಾರೆ.
ಮನೆ ಖರೀದಿಯ ಹಿಂದಿನ ಕಾರಣಗಳು..!
ನೆಟ್ಟಿಗರ ಅಭಿಪ್ರಾಯದಂತೆ, ಇಂತಹ ದುಬಾರಿ ಮನೆಗಳನ್ನು ಖರೀದಿಸುವವರಲ್ಲಿ ಅನೇಕರು ದ್ವಿ-ಆದಾಯ (Dual Income) ಹೊಂದಿರುವ ಕುಟುಂಬಗಳು, ಕುಟುಂಬದ ಆರ್ಥಿಕ ಬೆಂಬಲ ಪಡೆದವರು ಅಥವಾ ಹಳೆಯ ಆಸ್ತಿ ಮಾರಾಟದಿಂದ ಹಣ ಹೊಂದಿದವರಾಗಿರಬಹುದು. ಕೆಲವರು ಭವಿಷ್ಯದ ಆದಾಯದ ಮೇಲೆ ನಂಬಿಕೆ ಇಟ್ಟು ದೊಡ್ಡ ಆರ್ಥಿಕ ಅಪಾಯವನ್ನೂ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ರೆಡ್ಡಿಟ್ ಬಳಕೆದಾರರೊಬ್ಬರು, "ಮನೆಗಳ ಬೆಲೆ ಈಗ ಸಂಬಳಕ್ಕೆ ಹೊಂದಿಕೆಯಾಗುತ್ತಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಹಲವರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ EMI ಹೊತ್ತುಕೊಳ್ಳುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು, "ಬೆಂಗಳೂರು ವಸತಿ ಮಾರುಕಟ್ಟೆ ಈಗ ಸಾಮಾನ್ಯ ಉದ್ಯೋಗಿಗಳಿಗೆ ಕೈಗೆಟುಕದಂತಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ರಿಯಲ್ ಎಸ್ಟೇಟ್ ಮಾರುಕಟ್ಟೆಯ ವಾಸ್ತವ್ಯ..!
ಬೆಂಗಳೂರು ಐಟಿ ಉದ್ಯೋಗಗಳ ಕೇಂದ್ರವಾಗಿದ್ದರೂ, ಹೆಚ್ಚುತ್ತಿರುವ ಮನೆ ಬೆಲೆ, ಬಡ್ಡಿದರ, ಜೀವನ ವೆಚ್ಚ ಹಾಗೂ ಉದ್ಯೋಗದ ಅನಿಶ್ಚಿತತೆ ಮನೆ ಖರೀದಿಯನ್ನು ಸವಾಲಾಗಿಸುತ್ತಿವೆ. ಇದೇ ಕಾರಣಕ್ಕೆ ವೈರಲ್ ಆದ ಈ ಪೋಸ್ಟ್ ನಗರದಲ್ಲಿ ಮನೆ ಖರೀದಿಯ ವಾಸ್ತವ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.


