ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಗೆ ಪೊಲೀಸರು ಬ್ರೇಕ್ ಹಾಕಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಜೆಪಿ ಹೋರಾಟಕ್ಕಿಳಿದಿದೆ. ಆದರೆ ಬೆಂಗಳೂರಿನಲ್ಲಿ ಸಿಜೆಪಿ ಹೋರಾಟಗಾರರನ್ನು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು (ಅ.10) ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ದೆಹಲಿ ಹೋರಾಟ ಠುಸ್ ಆಗಿದೆ. ದೆಹಲಿ ಪೊಲೀಸರಿಂದ ಅನುಮತಿ ಸಿಗದಿದ್ದರೂ ಹೋರಾಟಕ್ಕೆ ಮುಂದಾಗಿದ್ದ ಸಿಜೆಪಿ ಕಾರ್ಯಕರ್ತರನ್ನು, ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಜಿತ್ ದೀಪ್ಕೆ ಸೇರಿದಂತೆ ಸಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ, ಇತ್ತ ಬೆಂಗಳೂರಿನಲ್ಲಿ ಸಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ನೂಕು ನುಗ್ಗಲಿಗೆ ಯತ್ನಿಸಿದವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ತಡೆಗೆ ಮುಂದಾದ ಸಿಜೆಪಿ

ಬೆಂಗಳೂರಿನಲ್ಲಿ ಸಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸರ ಜೊತೆ ಸಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿ ಮಾದರಿಯಲ್ಲಿ ಸಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ತಯಾರಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ರಸ್ತೆಗೆ ನುಗ್ಗಲು ಯತ್ನಿಸಿದ್ದಾರೆ. ಹೀಗಾಗಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ಕಾರರರನ್ನು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಸಿಜೆಪಿ ಹೋರಾಟಗಾರರು ಬ್ಯಾರಿಕೇಡ್ ಹತ್ತಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ಜೊತೆಗೆ ನೂಕಾಟ ತಳ್ಳಾಟ ನಡೆದಿದೆ.

ದೀಪ್ಕೆ ಸೇರಿದಂತೆ ಸಿಜೆಪಿ ನಾಯಕರು ಅರೆಸ್ಟ್

ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಶ್ ರಾಂಕ ಸೇರಿದಂತೆ ಸಿಜೆಪಿ ನಾಯಕರು ದೆಹಲಿ ಪ್ರತಿಭಟನೆಗೆ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಮಾನದ ಮೂಲಕ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದೇ ತಡ, ಪ್ರಯಾಣಿಕರ ಇಳಿಯುವ ಮೊದಲೇ ಪೊಲೀಸರು ವಿಮಾನದೊಳಕ್ಕೆ ಪ್ರವೇಶಿಸಿದ್ದಾರೆ. ಬಳಿಕ ಅಭಿಜಿತ್ ದೀಪ್ಕೆ ಸೇರಿದಂತೆ ಸಿಜೆಪಿ ನಾಯಕರ ವಶಕ್ಕೆ ಪಡೆದಿದ್ದಾರೆ.

ಇಂದಿರಾ ಗಾಂಧಿ ಎಮರ್ಜೆನ್ಸಿಗಿಂತ ಕಠೋರ ಎಂದ ದೀಪ್ಕೆ

ವಿಮಾನದಿಂದಲೇ ವಶಕ್ಕೆ ಪಡೆದ ಪೊಲೀಸರ ನಡೆ ವಿರುದ್ದ ಅಭಿಜಿತ್ ದೀಪ್ಕೆ ಕಿಡಿ ಕಾರಿದ್ದಾರೆ. ಇಂದಿರಾ ಗಾಂಧಿ ಹೇರಿದ ಎಮರ್ಜೆನ್ಸಿಯಲ್ಲಿ ಇಷ್ಟು ಕಠೋರ ನಿರ್ಧಾರಗಳು ಇರಲಿಲ್ಲ. ತುರ್ತು ಪರಿಸ್ಥಿತಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರ ವಿರುದ್ದ ಆಕ್ರೋಶ ಹೊರಗಹಾಕಿದ್ದಾರೆ.