ಮತ್ತೆ 3 ಶಾಲೆಗಳಿಗೆ ಹುಸಿ ಬಾಂಬ್: ವಿದೇಶದಿಂದ ಇಮೇಲ್:ಕಮಲ್‌ಪಂಥ್
- ಬೆಂಗಳೂರಿನ ಇನ್ನೂ ಮೂರು ಶಾಲೆಗಳಿಗೆ ಹುಸಿ ಬಾಂಬ್ ಮೇಲ್
- ಮೊನ್ನೆಯೇ ಬಾಂಬ್ ಮೇಲ್ ನಿನ್ನೆ ನೋಡಿದ ಆಡಳಿತ ಮಂಡಳಿ
- ವಿದೇಶದಿಂದ ಶಾಲೆಗಳಿಗೆ ಇ-ಮೇಲ್: ಕಮಲ್ ಪಂತ್
ಬೆಂಗಳೂರು(ಏ.10): ನಗರದಲ್ಲಿ ಮತ್ತೆ ಮೂರು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ (prestigious private schools) ಬಾಂಬ್ ಬೆದರಿಕೆ (bomb threat) ಇಮೇಲ್ ಬಂದಿದ್ದು, ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾಮರಾಜರಸ್ತೆಯ ಆರ್ಮಿ ಪಬ್ಲಿಕ್ ಶಾಲೆ (Army Public School), ವರ್ತೂರಿನ (Vartur) ಹಾರ್ವೆಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ (Harvest International School) ಹಾಗೂ ಎಚ್‌ಎಎಲ್ ಸಮೀಪದ ಶಿಷ್ಯ ಬೆಮೆಲ್ ಪಬ್ಲಿಕ್ ಶಾಲೆಗಳಿಗೆ (Bemel Public School) ಕೂಡ ಕಿಡಿಗೇಡಿಗಳು ಬೆದರಿಸಿದ್ದು, ಇದರೊಂದಿಗೆ ಬಾಂಬ್ ಬೆದರಿಕೆಗೆ ತುತ್ತಾದ ಶಾಲೆಗಳ ಪಟ್ಟಿ17ಕ್ಕೆ ಏರಿಕೆಯಾಗಿದೆ.
ಈ ಮೂರು ಶಾಲೆಗಳಿಗೆ ಕೂಡಾ ಶುಕ್ರವಾರ ಬೆಳಗ್ಗೆಯೇ ಇ-ಮೇಲ್ ಬಂದಿದೆ. ಆದರೆ ಆ ಶಾಲೆಯ ಸಿಬ್ಬಂದಿ, ಶನಿವಾರ ಇ-ಮೇಲ್‌ಗಳನ್ನು ಪರಿಶೀಲಿಸಿದಾಗ ಬೆದರಿಕೆ ಸಂದೇಶ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂರು ಶಾಲೆಗಳಲ್ಲಿ ಮುಂಜಾನೆಯೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಕರೆಸಿ ತಪಾಸಣೆ ನಡೆಸಿದ ಬಳಿಕ ಇವು ಸಹ ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ 11ಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದರು.
ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಜೋಕ್ ಅಲ್ಲ, ಕಡೆಗಣಿಸ್ಬೇಡಿ: ಬೆಂಗಳೂರಿನ ಸ್ಕೂಲ್‌ಗಳಿಗೆ ಬೆದರಿಕೆ!
ಬೆದರಿಕೆ ಹಿಂದೆ ಸ್ಥಳೀಯರು:
ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಶಾಲೆಗಳಿಗೆ ಬಂದಿರುವ ಇ-ಮೇಲ್‌ಗಳನ್ನು ಪರಿಶೀಲಿಸಿದಾಗ ಬೆಂಗಳೂರಿನಿಂದಲೇ ಇ-ಮೇಲ್ ಕಳುಹಿಸಿರುವ ಬಗ್ಗೆ ಅನುಮಾನವಿದೆ. ಈ ಇ-ಮೇಲ್‌ಗಳ ಐಪಿ ಅಡ್ರೆಸ್ ಬಗ್ಗೆ ಗೂಗಲ್ ವರದಿ ಬಂದ ಬಳಿಕ ಆರೋಪಿಗಳ ಪತ್ತೆ ಸುಲಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ನಂತರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (city police commissioner Kamal Pant), ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ ಕುರಿತು ತನಿಖೆ ತೀವ್ರಗೊಂಡಿದ್ದು, ಇ-ಮೇಲ್ ಪೋರ್ಟಲ್‌ಗಳು ಬೇರೆ ದೇಶದಲ್ಲಿ ಇರುವುದರಿಂದ ಮಾಹಿತಿ ಪಡೆಯುವುದು ಕೊಂಚ ತಡವಾಗುತ್ತಿದೆ ಎಂದು ಹೇಳಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ಯಾಕೆ? ಪೊಲೀಸರ ಪ್ರಾಥಮಿಕ ವರದಿಯಲ್ಲಿ ರಹಸ್ಯ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ತನಿಖೆಗೆ ಹಲವು ತನಿಖಾ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಬೇರೆ ಬೇರೆ ಇ-ಮೇಲ್ ಐಡಿಯಿಂದ ಮೇಲ್‌ಗಳು ಬಂದಿವೆ. ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದರು. ನಗರದ ಪೊಲೀಸ್ ವ್ಯಾಪ್ತಿಯ ಎಲ್ಲ ವಿಭಾಗಗಳ ಶಾಲೆಗಳಿಗೆ ಕರೆ ಮಾಡಿ ಇ-ಮೇಲ್ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಏಕೆಂದರೆ, ದುಷ್ಕರ್ಮಿಗಳು ಇ-ಮೇಲ್ ಮಾಡಿ ಹಲವು ಕಡೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನಿಖೆ ತ್ವರಿಗೊಳಿಸಿ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಹೇಳಿದರು.
ಏಪ್ರಿಲ್ 8 ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಇದರಿಂದ ಶಾಲೆಗಳಲ್ಲಿ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಹುಸ್ಕೂರಿನ ಎಬಿನೈಜರ್ ಇಂಟರ್ ನ್ಯಾಷನರ್ ಸ್ಕೂಲ್, ವಿನ್ಸೆಂಟ್ ಪಲ್ಲೋಟಿ ಶಾಲೆ ಸೇರಿದಂತೆ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿತ್ತು