ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.

ಬೆಂಗಳೂರು: ತಮ್ಮ ಗೌರವಧನವನ್ನು ಹೆಚ್ಚಿಸಬೇಕು ಎಂದು ಆಶಾ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಘಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರ ಅವರ ಬೇಡಿಕೆಗೆ ಸರ್ಕಾರ ಯಾವುದೇ ಸಕರಾತ್ಮಕ ಸ್ಪಂದನೆಯನ್ನು ನೀಡುತ್ತಿಲ್ಲ. ಅದರಲ್ಲೂ ಇಂದು ಆರೋಗ್ಯ ಸಚಿವ ಖಾದರ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಗಳನ್ನ ಗಮನಿಸಿದರೆ ಆಶಾ ಕಾರ್ಯಕರ್ತರ ಬೇಡಿಕೆಗಳು ಈಡೇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ನಾಳೆ ಆಶಾ ಕಾರ್ಯಕರ್ತರ ಜೊತೆಗೆ ಸಿಎಂ ಸಭೆ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ಸಿಎಂ ಅವರು ಆಶಾ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ಎಂದು ಹೇಳುವ ಮೂಲಕ ಮಹತ್ವದ ಸಂದೇಶ ನೀಡುವ ಕೆಲಸ ಮಾಡಿದ್ದಾರೆ.

ಕೇಂದ್ರ ಸರ್ಕಾರವನ್ನು ಯಾಕೆ ಪ್ರಶ್ನೆ ಮಾಡ್ತಿಲ್ಲ?

ವಿದೇಶದಿಂದ ಸಿಎಂ ಆಗಮಿಸುತ್ತಿದ್ದಂತೆ ತಮ್ಮ ಬೇಡಿಕೆ ಈಡೇರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಆಶಾ ಕಾರ್ಯಕರ್ತರಿಗೆ ನಿರಾಸೆ ಎದುರಾಗಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಇವತ್ತು ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುತ್ತಿದ್ದೇನೆ. ನಾಳೆ ಆಶಾ ಕಾರ್ಯಕರ್ತರೊಂದಿಗೆ ಸಭೆ ಮಾಡಲಿದ್ದೇವೆ. ಆದ್ದರಿಂದ ಪ್ರತಿಭಟನೆ ಬಿಡಲು ಮನವಿ ಮಾಡುತ್ತಿದ್ದೇನೆ. ಪ್ರತಿಷ್ಠೆ ಬಿಡಿ, ನಾವು ನಿಮ್ಮ ಪರವಾಗಿ ಇದ್ದೇವೆ. ಬೇರೆ ಬೇರೆ ಅವರು ಬಂದು ಇಲ್ಲಿ ರಾಜಕಾರಣ ಮಾಡುತ್ತಾರೆ. ಇದರಿಂದ ಪರಿಹಾರ ಸಿಗೋದಿಲ್ಲ. ಕೇವಲ ಆಶಾ ಕಾರ್ಯಕರ್ತರು ಮಾತ್ರ ಪ್ರತಿಘಟನೆ ಮಾಡುತ್ತಿಲ್ಲ.

ಸರ್ಕಾರಕ್ಕೆ ಹೆದರಿಸುವ ಕೆಲಸ ಮಾಡಬಾರದು, ಕೇಂದ್ರ ಸರ್ಕಾರ ಮೇಲೆ ಯಾಕೆ ನೀವು ಒತ್ತಾಯ ಹಾಕುತ್ತಿಲ್ಲ. ಕೇಂದ್ರದವರು ಏನಾದರೂ ಮಾಡಬಹುದು ಅಲ್ವಾ? ಬರೀ ನಾವೇ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಕೇಂದ್ರದಿಂದ ಹಣ ಯಾಕೆ ಕೇಳುತ್ತಿಲ್ಲ. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುತ್ತಿದ್ದೇವೆ. ಆದ್ದರಿಂದ ಸರ್ಕಾರವನ್ನು ಹೆದರಿಸುವ ಕೆಲಸವನ್ನು ಮಾಡಬೇಡಿ. ನನಗೆ ನಿಮ್ಮ ಕಷ್ಟ ಅರ್ಥ ಆಗುತ್ತಿದೆ. ಆದ್ದರಿಂದ ಐದು ಗ್ಯಾರಂಟಿ ನೀಡಿದ್ದೇವೆ. ಅದರಲ್ಲಿ ನಾಲ್ಕು ಗ್ಯಾರಂಟಿ ಮಹಿಳೆಯರನ್ನು ಕೇಂದ್ರೀಕರಿಸಿ ಮಾಡಿದ್ದೇವೆ. ನಿಮ್ಮ ಸಮಸ್ಯೆ ಗೊತ್ತಿದೆ. ಆರ್ಥಿಕ ಇಲಾಖೆಯೊಂದಿಗೆ ಐದಾರು ಬಾರಿ ಮಾತನಾಡಿದ್ದೇನೆ. ಎಲ್ಲರೂ ಈ ರೀತಿ ಬೀದಿ ಬಂದರೆ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಸಿಎಂ ಒಂದು ಹೇಳಿಕೆ? ಸಚಿವರ ಮತ್ತೊಂದು ಹೇಳಿಕೆ? ಸರ್ಕಾರದಲ್ಲೇ ಗೊಂದಲ?

ನಾಳೆ ಆಶಾಗಳ ಜೊತೆಗೆ ಮಾತನಾಡ್ತೇನೆ. ನಿಮ್ಮ ಪರ ನಾನು ಇದ್ದೇನೆ ಎಂಬ ಸಿಎಂ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ಸಿಎಂ ಸಾಹೇಬ್ರು ನಮ್ಮ‌ ಪರ ಇದ್ದೇನೆ ಅಂತ 10 ದಿನದಿಂದ ಹೇಳ್ತಾಯಿದ್ದಾರೆ. ಆದರೆ ಮಿನಿಸ್ಟರ್ ಗಳು ನಾವಿಲ್ಲ ಅಂದರೂ ನಡೆಯುತ್ತೆ ಅಂತಿದ್ದಾರೆ. ಅವರಲ್ಲೆ ಗೊಂದಲ ಇದೆ. ನಮ್ಮಗೆ ಸಿಎಂ ಅವರ ಮೇಲೆ ನಂಬಿಕೆ ಇದೆ. ದಯವಿಟ್ಟು ಇಲ್ಲಿಗೆ ಬಂದು ಮಾತಾಡಿ ಸರ್, ನಾವು ಹಳ್ಳಿಗಳಲ್ಲಿ ಇಲ್ಲದ ಕಾರಣ ಏನೆಲ್ಲ ಅನಾಹುತಗಳು ಆಗಿವೆ ಎಂದು ಒಮ್ಮೆ ವರದಿ ಪಡೆದು ನೋಡಿ. ಎಷ್ಟು ಗರ್ಭಿಣಿಯರಿಗೆ ಮನೆಯಲ್ಲೇ ಹೆರಿಗೆ ಆಗಿದೆ. ಎಷ್ಟು ಶಿಶುಗಳಿಗೆ ತೊಂದರೆ ಆಗಿದೆ ಎಂದು ಗಮನಿಸಿ ಎಂದು ಹೇಳಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..