ಬೆಂಗಳೂರಿನ ವರ್ತೂರಿನಲ್ಲಿರುವ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನ ಆವರಣದ ಒಳಗಡೆಯೇ ಭಾರಿ ಟ್ರಾಫಿಕ್ ಜಾಮ್ ಉಂಟಾಗಿರುವ ವಿಡಿಯೋ ವೈರಲ್ ಆಗಿದೆ. ಗೇಟ್ ದಾಟಿ ಮುಖ್ಯ ರಸ್ತೆಗೆ ಬರಲು ನಿವಾಸಿಗಳಿಗೆ 20-30 ನಿಮಿಷ ಬೇಕಾಗುತ್ತಿದ್ದು, ಕಳಪೆ ಮೂಲಸೌಕರ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಹೊಸದೇನಲ್ಲ. ಆಫೀಸ್‌ಗೆ ಹೋಗುವ ಸಮಯದಲ್ಲಾಗಲಿ, ಸಂಜೆ ಪೀಕ್ ಅವರ್‌ಗಳಲ್ಲಾಗಲಿ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವುದು ನಗರವಾಸಿಗಳಿಗೆ ದಿನನಿತ್ಯದ ಅಭ್ಯಾಸವಾಗಿಬಿಟ್ಟಿದೆ. ಆದರೆ, ಅಪಾರ್ಟ್‌ಮೆಂಟ್‌ನಿಂದ ಹೊರಬರುವ ಮುನ್ನ, ಸ್ವತಃ ವಸತಿ ಸಮುಚ್ಚಯದ ಆವರಣದ ಒಳಗಡೆಯೇ ಭಾರಿ ಟ್ರಾಫಿಕ್ ಜಾಮ್ ಉಂಟಾಗಿರುವ ಅಚ್ಚರಿಯ ಹಾಗೂ ಆತಂಕಕಾರಿ ದೃಶ್ಯವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ವೀಡಿಯೊ:

Instagram ನಲ್ಲಿ @her_wandering_footprints ಎಂಬ ಹ್ಯಾಂಡಲ್ ಹೊಂದಿರುವ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಿಂದ ಚಿತ್ರೀಕರಿಸಿದ ಈ ವೀಡಿಯೊದಲ್ಲಿ, ಪ್ರಮುಖ ರಸ್ತೆಯ ಮೇಲಿನ ವಾಹನ ದಟ್ಟಣೆಯ ಜೊತೆಗೆ, ಪಕ್ಕದ ವಸತಿ ಸಂಕೀರ್ಣದ ಒಳಗಡೆಯೂ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ತೋರಿಸಿದ್ದಾರೆ.

ಈಗ ಮಧ್ಯಾಹ್ನ 2:00 ಗಂಟೆ, ಶನಿವಾರ ಮಧ್ಯಾಹ್ನವೇ ಹೊರಗಡೆ ಎಷ್ಟೊಂದು ಟ್ರಾಫಿಕ್ ಇದೆ ನೋಡಿ! ಎಂದು ವೀಡಿಯೊದಲ್ಲಿ ಆಶ್ಚರ್ಯ ವ್ಯಕ್ತಪಡಿಸಿರುವ ಮಹಿಳೆ, ತಕ್ಷಣವೇ ಅಪಾರ್ಟ್‌ಮೆಂಟ್ ಆವರಣದ ಕಡೆಗೆ ಕ್ಯಾಮೆರಾ ತಿರುಗಿಸುತ್ತಾರೆ. ಅಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಗೇಟ್ ತಲುಪಲು ಸಾಲಾಗಿ ನಿಂತಿದ್ದ ಕಾರುಗಳು ಇಂಚಿಂಚಾಗಿಯೇ ಚಲಿಸುತ್ತಿದ್ದವು. ವರದಿಗಳ ಪ್ರಕಾರ, ಸೊಸೈಟಿಯ ಒಳಗಿನಿಂದ ಗೇಟ್‌ ದಾಟಿ ಮುಖ್ಯ ರಸ್ತೆಗೆ ಬರಲು ನಿವಾಸಿಗಳಿಗೆ ಬರೋಬ್ಬರಿ 20 ರಿಂದ 30 ನಿಮಿಷಗಳು ಬೇಕಾಗುತ್ತಿವೆ!

ವರ್ತೂರಿನ ಬ್ರಿಗೇಡ್ ಯುಟೋಪಿಯಾದಲ್ಲಿ ನಡೆದ ಘಟನೆ:

ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಹಲವು ನೆಟ್ಟಿಗರು ಇದು ಪೂರ್ವ ಬೆಂಗಳೂರಿನ ವರ್ತೂರು ಪ್ರದೇಶದಲ್ಲಿರುವ 'ಬ್ರಿಗೇಡ್ ಯುಟೋಪಿಯಾ' (Brigade Utopia) ಅಪಾರ್ಟ್‌ಮೆಂಟ್ ಸಮುಚ್ಚಯ ಎಂದು ಗುರುತಿಸಿದ್ದಾರೆ. ಸಾವಿರಾರು ಫ್ಲ್ಯಾಟ್‌ಗಳಿರುವ ಬೃಹತ್ ವಸತಿ ಯೋಜನೆಯಾಗಿದ್ದರೂ, ಹೊರಗಿನ ಕಿರಿದಾದ ರಸ್ತೆಗಳು ಮತ್ತು ವರ್ತೂರು ಪ್ರಮುಖ ಮಾರ್ಗದ ದಟ್ಟಣೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ನೆಟ್ಟಿಗರ ಆಕ್ರೋಶ ಮತ್ತು ವ್ಯಂಗ್ಯ:

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಬೆಂಗಳೂರಿನ ಮೂಲಸೌಕರ್ಯದ ಅಸಲಿ ಮುಖವಾಡ ಕಳಚಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು, ಮಾಲ್ ಅಥವಾ ಬೃಹತ್ ಯೋಜನೆಗಳ ವಸತಿ ಸಮಚ್ಚಯದ ಒಳಗೆ ಮನೆ ಖರೀದಿಸುವುದರಿಂದ ಏನು ಲಾಭ? ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದಾರಿಗಳನ್ನು ನೀಡಬೇಕಿತ್ತು. ಹೂಡಿಕೆದಾರರು ಮತ್ತು ಬಿಲ್ಡರ್‌ಗಳು ಲಾಭ ಮಾಡಿಕೊಂಡರು, ಆದರೆ ನಿವಾಸಿಗಳು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, "ಜನರು ಎಂದಿಗೂ ಮನೆ ಬಿಟ್ಟು ಹೊರಗೆ ಬರಬಾರದು ಎಂದೇ ಈ ಸ್ಥಳವನ್ನು ವಿನ್ಯಾಸಗೊಳಿಸಿದ ಹಾಗಿದೆ! ಎಂದು ತಮಾಷೆ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರರು, "ಯಾವುದೇ ಸೂಕ್ತ ರಸ್ತೆ ಯೋಜನೆ ಇಲ್ಲದೆ ಇಷ್ಟೊಂದು ಬೃಹತ್ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ಎರಡ್ಮೂರು ವರ್ಷಗಳಲ್ಲಿ ಈ ಇಡೀ ಪ್ರದೇಶ ವಾಸಕ್ಕೆ ಅನರ್ಹವಾಗಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಗೇಟೆಡ್ ಕಮ್ಯುನಿಟಿಗಳಲ್ಲಿ ವಾಸಿಸಿದರೆ ಸಿಟಿ ಕಿರಿಕಿರಿ ಇರುವುದಿಲ್ಲ ಎಂದು ಭಾವಿಸಿದ್ದ ನಿವಾಸಿಗಳಿಗೆ, ಅಪಾರ್ಟ್‌ಮೆಂಟ್ ಗೇಟ್ ಒಳಗಡೆಯೇ ಸಿಲುಕಿಕೊಳ್ಳುವ ಈ ಹೊಸ 'ಟ್ರಾಫಿಕ್ ಸಂಸ್ಕೃತಿ' ಭಾರಿ ಆಘಾತ ನೀಡಿದೆ. ನಗರದ ಅಸಮತೋಲಿತ ನಗರೀಕರಣ ಮತ್ತು ಕಳಪೆ ಮೂಲಸೌಕರ್ಯ ನಿರ್ವಹಣೆಗೆ ಈ ಘಟನೆ ಜೀವಂತ ನಿದರ್ಶನವಾಗಿದೆ.