- Home
- Karnataka Districts
- Bengaluru Urban
- 39 ಕೆರೆಗಳನ್ನು ನುಂಗಿ ನೀರು ಕುಡಿದ ಸರ್ಕಾರಿ ಸಂಸ್ಥೆಗಳು; ಬೆಂಗಳೂರಿನ ಕೆರೆಗಳಿಗೆ ಸರ್ಕಾರವೇ ಮಾರಕ!
39 ಕೆರೆಗಳನ್ನು ನುಂಗಿ ನೀರು ಕುಡಿದ ಸರ್ಕಾರಿ ಸಂಸ್ಥೆಗಳು; ಬೆಂಗಳೂರಿನ ಕೆರೆಗಳಿಗೆ ಸರ್ಕಾರವೇ ಮಾರಕ!
ಬೆಂಗಳೂರಿನಲ್ಲಿ ಸರ್ಕಾರಿ ಸಂಸ್ಥೆಗಳೇ ಬರೋಬ್ಬರಿ 39 ಕೆರೆಗಳನ್ನು ಒತ್ತುವರಿ ಮಾಡಿರುವ ಆಘಾತಕಾರಿ ಮಾಹಿತಿ ಜಿಬಿಎ ದತ್ತಾಂಶದಿಂದ ಬಹಿರಂಗವಾಗಿದೆ. ಕೆರೆಗಳ ಜಾಗದಲ್ಲಿ ಆಟದ ಮೈದಾನ, ಉದ್ಯಾನವನ ಹಾಗೂ ಎಸ್‌ಟಿಪಿಗಳನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಮರುಪಡೆಯುವುದು ಕಷ್ಟಕರವಾಗಿದೆ.

ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಖಾಸಗಿ ವ್ಯಕ್ತಿಗಳು ಹಾಗೂ ಬಿಲ್ಡರ್‌ಗಳು ಕೆರೆ ಜಮೀನನ್ನು ಕಬಳಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ, ಸರ್ಕಾರಿ ಸಂಸ್ಥೆಗಳೇ ಬರೋಬ್ಬರಿ 39 ಕೆರೆಗಳನ್ನು ಒತ್ತುವರಿ ಮಾಡಿವೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿರುವ ಒಟ್ಟು 183 ಕೆರೆಗಳಲ್ಲಿ ಕೇವಲ 49 ಕೆರೆಗಳು ಮಾತ್ರ ಒತ್ತುವರಿಯಿಂದ ಮುಕ್ತವಾಗಿವೆ!
ಸರ್ಕಾರಿ ಸಂಸ್ಥೆಗಳೇ ಕಬಳಿಸಿದ ಕೆರೆಗಳು:
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿಯ ಮೌಲ್ಯದ ನಡುವೆ ಕೆರೆಗಳ ಒತ್ತುವರಿ ಸಾಮಾನ್ಯವಾಗಿದೆ. ಆದರೆ, ಇದರಲ್ಲಿ 39 ಕೆರೆಗಳನ್ನು ಸಂಪೂರ್ಣವಾಗಿ ವಿವಿಧ ಸರ್ಕಾರಿ ಸಂಸ್ಥೆಗಳೇ ಒತ್ತುವರಿ ಮಾಡಿಕೊಂಡಿದ್ದರೆ, 78 ಕೆರೆಗಳನ್ನು ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳು ಜಂಟಿಯಾಗಿ ಒತ್ತುವರಿ ಮಾಡಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ಪ್ರಕಟಿಸಿರುವ ವರದಿ ತಿಳಿಸಿದೆ.
ಕೆರೆಗಳ ಜಾಗದಲ್ಲಿ ಆಟದ ಮೈದಾನಗಳು ಮತ್ತು ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಬೆಂಗಳೂರು ಜಲಮಂಡಳಿ (BWSSB) ಒಚುಗುಂಡಿ ಸಂಸ್ಕರಣಾ ಘಟಕಗಳನ್ನು (STP) ನಿರ್ಮಿಸಲು ಕೆರೆ ಜಮೀನನ್ನು ಆಕ್ರಮಿಸಿಕೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ನಿರಾಶ್ರಿತರಿಗಾಗಿ ಸರ್ಕಾರವೇ ಮನೆಗಳನ್ನು ನಿರ್ಮಿಸಿದೆ.
ಇದರಲ್ಲಿ ಹೆಚ್ಚಿನ ಒತ್ತುವರಿಗಳು ವರ್ಷಗಳ ಹಿಂದೆಯೇ ನಡೆದಿವೆ. ಬಿಬಿಎಂಪಿಗೆ ಕೆರೆಗಳನ್ನು ಹಸ್ತಾಂತರಿಸುವ ಮುನ್ನವೇ ಹಲವು ಕಟ್ಟಡಗಳು ತಲೆಎತ್ತಿವೆ. ನಾವು ಕೇವಲ ಕೆರೆಗಳ ರಕ್ಷಕರು ಅಷ್ಟೇ' ಎಂದು ಹಿರಿಯ ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರುಪಡೆಯುವುದು ಅತ್ಯಂತ ಕಷ್ಟ:
ಖಾಸಗಿ ಒತ್ತುವರಿದಾರರಿಂದ ಜಮೀನು ವಾಪಸ್ ಪಡೆಯಲು ಹರಸಾಹಸ ಪಡುತ್ತಿರುವ ಪಾಲಿಕೆಗೆ, ಸರ್ಕಾರದ ಸಂಸ್ಥೆಗಳು ಒತ್ತುವರಿ ಮಾಡಿರುವ ಕೆರೆ ಜಮೀನನ್ನು ಮರುಪಡೆಯುವುದು ತೀವ್ರ ಕಷ್ಟಕರವಾಗಿ ಪರಿಣಮಿಸಿದೆ.
ಉದಾಹರಣೆಗೆ, ಕಚರಕನಹಳ್ಳಿ ಕೆರೆಯನ್ನು ಸಂಪೂರ್ಣವಾಗಿ ಆಟದ ಮೈದಾನವನ್ನಾಗಿಸಲಾಗಿತ್ತು. ಜಿಬಿಎ ಮರುಪಡೆಯಲು ಯತ್ನಿಸಿದರೂ ಕೇವಲ ಶೇ. 50ರಷ್ಟು ಜಾಗವನ್ನು ಮಾತ್ರ ವಶಕ್ಕೆ ಪಡೆಯಲು ಸಾಧ್ಯವಾಯಿತು. ಮತ್ತೊಂದೆಡೆ ಪುಟ್ಟನಹಳ್ಳಿ ಕೆರೆಯಲ್ಲಿ ಜಲಮಂಡಳಿಯು ಕೊಳವೆ ಮಾರ್ಗಗಳನ್ನು (Pipelines) ಅಳವಡಿಸಿದೆ.
ಪರಿಸರವಾದಿಗಳ ಕಳವಳ:
ಹುಳಿಮಾವು ಕೆರೆ, ಸೌಲ್ ಕೆರೆ, ಐಗೂರು ಕೆರೆ ಸೇರಿದಂತೆ ಮತ್ತಷ್ಟು ಕೆರೆಗಳಲ್ಲಿ ಎಸ್‌ಟಿಪಿ (STP) ನಿರ್ಮಿಸಲು ಜಲಮಂಡಳಿ ಯೋಜನೆ ರೂಪಿಸಿದೆ. ಹಳೆಯ ಒತ್ತುವರಿಯನ್ನು ತೆರವುಗೊಳಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಇಂತಹ ಹೊಸ ಯೋಜನೆಗಳನ್ನು ತಡೆಯುವ ಮೂಲಕವಾದರೂ ಕೆರೆಗಳಿಗೆ ಹೆಚ್ಚಿನ ಹಾನಿಯಾಗದಂತೆ ಜಿಬಿಎ ನೋಡಿಕೊಳ್ಳಬೇಕು ಎಂದು 'ಫ್ರೆಂಡ್ಸ್ ಆಫ್ ಲೇಕ್ಸ್' ಸಂಘಟನೆಯ ರಾಮ್‌ಪ್ರಸಾದ್ ಒತ್ತಾಯಿಸಿದ್ದಾರೆ. ಒತ್ತುವರಿಯಿಂದಾಗಿ ಆ ಸುತ್ತಮುತ್ತಲಿನ ಪ್ರದೇಶಗಳು ಭಾರಿ ಮಳೆಗೆ ಪ್ರವಾಹಕ್ಕೆ ತುತ್ತಾಗುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ಕೆರೆಗಳಲ್ಲಿ ಎಸ್‌ಟಿಪಿ ನಿರ್ಮಾಣವು ಜಲಮೂಲಗಳ ಒಳಿತಿಗಾಗಿ ಅತ್ಯಗತ್ಯವಾಗಿದ್ದು, ಕರ್ನಾಟಕ ಟ್ಯಾಂಕ್ ಕನ್ಸರ್ವೇಶನ್ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ (KTCDA) ಕೂಡ ಇದಕ್ಕೆ ಅನುಮೋದನೆ ನೀಡಿದೆ ಎಂದು ಜಲಮಂಡಳಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

