ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಹಚ್ಚುವ AI ಕ್ಯಾಮೆರಾ ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರನೆಂದು ತಪ್ಪಾಗಿ ಗ್ರಹಿಸಿದೆ. ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ ವಿಧಿಸಿರುವ ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು (ಸೆ.26): ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (Artificial Intelligence - AI) ಕ್ಯಾಮೆರಾ ಹಾಸ್ಯಾಸ್ಪದ ರೀತಿಯಲ್ಲಿ ಎಡವಟ್ಟು ಮಾಡಿಕೊಂಡಿದೆ. ಬೈಕ್ ಸವಾರನೊಬ್ಬ ಬೆನ್ನಿಗೆ ಹಾಕಿಕೊಂಡಿದ್ದ ಗಿಟಾರ್ ಬ್ಯಾಗ್ ಅನ್ನೇ 'ಹಿಂಬದಿ ಸವಾರ' (Pillion Rider) ಎಂದು ತಪ್ಪಾಗಿ ಗ್ರಹಿಸಿದ AI ಕ್ಯಾಮೆರಾ, 'ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ' ಎಂಬ ಕಾರಣಕ್ಕೆ ₹500 ದಂಡ ವಿಧಿಸಿ ಆನ್‌ಲೈನ್ ಚಲನ್ ನೀಡಿದೆ.
ನಗರದ ಸೌವಿಕ್ ದತ್ತಾ ಎಂಬ ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಈ ವಿಚಿತ್ರ ಘಟನೆ ನಡೆದಿದೆ. ಸೌವಿಕ್ ದತ್ತಾ ಅವರು ತಮ್ಮ ಬೈಕ್‌ನಲ್ಲಿ ಪ್ರಯಾಣಿಸುವಾಗ ಗಿಟಾರ್ ಒಂದನ್ನು ಸುರಕ್ಷಿತವಾಗಿ ತಮ್ಮ ಬೆನ್ನಿಗೆ ಬ್ಯಾಗ್‌ನಲ್ಲಿ ಹಾಕಿಕೊಂಡು ಚಲಾಯಿಸುತ್ತಿದ್ದರು. ಅವರು ಹೆಬ್ಬಾಳ ಹಾಗೂ ಟಿನ್ ಫ್ಯಾಕ್ಟರಿ ರಸ್ತೆಯ ನಡುವಿನ ಟ್ರಾಫಿಕ್ ಸಿಗ್ನಲ್ ಬಳಿ ಸಾಗುತ್ತಿದ್ದಾಗ, ಅಲ್ಲಿದ್ದ ಹೈ-ಟೆಕ್ AI ಕ್ಯಾಮೆರಾ ಇವರ ಬೈಕ್‌ನ ಫೋಟೋವನ್ನು ಕ್ಲಿಕ್ಕಿಸಿದೆ.
ಆದರೆ, ಕೃತಕ ಬುದ್ಧಿಮತ್ತೆಯ ಕ್ಯಾಮೆರಾ ಬೈಕ್ ಸವಾರನ ಬೆನ್ನಲ್ಲಿದ್ದ ಉದ್ದನೆಯ ಗಿಟಾರ್ ಬ್ಯಾಗ್ ಅನ್ನು 'ಮತ್ತೊಬ್ಬ ಮನುಷ್ಯ' (ಹಿಂಬದಿ ಸವಾರ) ಎಂದು ತಪ್ಪಾಗಿ ಪತ್ತೆ ಮಾಡಿದೆ. ಅಷ್ಟಕ್ಕೇ ನಿಲ್ಲದೇ, ಆ 'ಹಿಂಬದಿ ಸವಾರ' ಹೆಲ್ಮೆಟ್ ಧರಿಸಿಲ್ಲವೆಂದು ನಿಯಮ ಉಲ್ಲಂಘನೆ ಪಟ್ಟಿಗೆ ಸೇರಿಸಿ ₹500 ದಂಡ ವಿಧಿಸಿ, ಆನ್‌ಲೈನ್‌ನಲ್ಲಿ ಚಲನ್ ಅಪ್‌ಲೋಡ್ ಮಾಡಿದೆ.
ಚಲನ್ ಮೆಸೇಜ್ ನೋಡಿ ದಂಪತಿ ಶಾಕ್!:
ಸಂಚಾರಿ ಪೊಲೀಸರ ವ್ಯವಸ್ಥೆಯಿಂದ ಸೌವಿಕ್ ದತ್ತಾ ಅವರ ಪತ್ನಿಯ ಮೊಬೈಲ್ ಸಂಖ್ಯೆಗೆ "ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ₹500 ದಂಡ ವಿಧಿಸಲಾಗಿದೆ" ಎಂಬ ಆಫಿಶಿಯಲ್ ಮೆಸೇಜ್ ರವಾನೆಯಾಗಿದೆ. ಇದನ್ನು ನೋಡಿ ಗಾಬರಿಗೊಂಡ ದಂಪತಿ, ಸೌವಿಕ್ ಅವರು ನಿಯಮ ಉಲ್ಲಂಘಿಸಿಲ್ಲವೆಂದು ಖಚಿತಪಡಿಸಿಕೊಂಡು ಆನ್‌ಲೈನ್‌ನಲ್ಲಿ ಚಲನ್ ಪ್ರತಿಯನ್ನು ಪರಿಶೀಲಿಸಿದ್ದಾರೆ. ಚಲನ್‌ನಲ್ಲಿದ್ದ ಫೋಟೋವನ್ನು ಜೂಮ್ ಮಾಡಿ ನೋಡಿದಾಗ AI ಕ್ಯಾಮೆರಾದ ಅಸಲಿ ಎಡವಟ್ಟು ಬಯಲಾಗಿದೆ! ಬೆನ್ನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನೇ ಕ್ಯಾಮೆರಾ ಮನುಷ್ಯನೆಂದು ಭಾವಿಸಿ ದಂಡ ಹಾಕಿರುವುದು ಸ್ಪಷ್ಟವಾಗಿದೆ.
AI ಕಾರ್ಯವೈಖರಿಗೆ ಸಾರ್ವಜನಿಕರ ಆಕ್ರೋಶ, ನಗೆಪಾಟಲು
ಈ ಘಟನೆಯ ಫೋಟೋ ಹಾಗೂ ಚಲನ್ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ನಗೆಪಾಟಲಿಗೀಡಾಗಿದೆ. "ಮುಂದಿನ ಬಾರಿ ಬೈಕ್‌ನಲ್ಲಿ ಗಿಟಾರ್ ಒಯ್ಯುವಾಗ ಗಿಟಾರ್‌ಗೂ ಒಂದು ಹೆಲ್ಮೆಟ್ ಹಾಕಿ ಕರೆದುಕೊಂಡು ಹೋಗಬೇಕಾ?" ಎಂದು ನೆಟ್ಟಿಗರು ಟ್ರಾಫಿಕ್ ಪೊಲೀಸರು ಹಾಗೂ AI ವ್ಯವಸ್ಥೆಯನ್ನು ಕಾಲೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳು ನಿಖರವಾಗಿ ಕೆಲಸ ಮಾಡುತ್ತಿಲ್ಲ ಮತ್ತು ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟುಮಾಡುತ್ತಿವೆ. ಪೊಲೀಸರು ಇಂತಹ ತಂತ್ರಜ್ಞಾನ ಆಧಾರಿತ ಚಾಲನ್‌ಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವ ಮೊದಲು ಒಮ್ಮೆ ಭೌತಿಕವಾಗಿ ಪರಿಶೀಲಿಸಬೇಕು (Manual Verification) ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.


