Kabita Panigrahi shared a video bengaluru life ಕಬಿತಾ ಪಾಣಿಗ್ರಹಿ ಎಂಬ ಮಹಿಳೆ ಬೆಂಗಳೂರಿನಲ್ಲಿ ಕಳೆದ 10 ವರ್ಷದ ತಮ್ಮ ಅನುಭವ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಗರದ ವೈವಿಧ್ಯಮಯ ಆಹಾರ, ಟ್ರಾಫಿಕ್ ಸಮಸ್ಯೆ, ಮಹಿಳಾ ಸುರಕ್ಷತೆ ಮತ್ತು ಬದಲಾದ ಜೀವನಶೈಲಿಯ ಬಗ್ಗೆ ಅವರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ವಾಸಿಸುತ್ತಿರುವ ಮಹಿಳೆಯೊಬ್ಬರು ಸಿಲಿಕಾನ್ ಸಿಟಿ ಇಷ್ಟು ವರ್ಷದಲ್ಲಾದ ಅನುಭವವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟಿಜನ್‌ ನಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.

ಇನ್‌ಸ್ಟಾಗ್ರಾಂನಲ್ಲಿ ಕಬಿತಾ ಪಾಣಿಗ್ರಹಿ(Kabita Panigrahi) ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಒಂದು ದಶಕದ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಬೆಂಗಳೂರಿನ ವೈವಿಧ್ಯಮಯ ಆಹಾರ, ಟ್ರಾಫಿಕ್ ಸಮಸ್ಯೆ, ಒಂದುಕಡೆಯಿಂದ ಮತ್ತೊಂದು ಕಡೆ ಚಲಿಸಲು ಬೇಕಾಗುವ ಸಮಯ, ನಗರದಲ್ಲಿ ಮಹಿಳೆಯರ ಸುರಕ್ಷತೆ, ಹತ್ತು ವರ್ಷಗಳಲ್ಲಿ ನಗರದಲ್ಲಾದ ಬದಲಾವಣೆ ಬಗ್ಗೆ ತಮ್ಮದೇ ದೃಷ್ಟಿಯಲ್ಲಿ ಕೆಲವು ವಿಶೇಷ ಸಂಗತಿಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಕಬಿತಾ ಪಾಣಿಗ್ರಹಿ ವಿಡಿಯೋದಲ್ಲಿ ಹೇಳಿದ್ದೇನು?

ಇನ್‌ಸ್ಟಾಗ್ರಾಂನಲ್ಲಿ ಕಬಿತಾ ಪಾಣಿಗ್ರಹಿ ಅವರು ವಿಡಿಯೋ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಕಳೆದ ಒಂದು ದಶಕದ ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ತಮ್ಮದೇ ಆದ ದೃಷ್ಟಿಯಲ್ಲಿ ಬೆಂಗಳೂರಿನ ಡೈಲಿ ಲೈಫ್‌, ಭವಿಷ್ಯ ರೂಪಿಸುವ ಕೆಲವು ಸಂಗತಿಗಳ ಬಗ್ಗೆ ಕಬಿತಾ ಮಾತನಾಡಿದ್ದಾರೆ..

ಬೆಂಗಳೂರಲ್ಲಿ ಎಲ್ಲರಿಗೂ ಇಷ್ಟವಾಗುವ ಆಹಾರ ಸಿಗುತ್ತೆ

ಬೆಂಗಳೂರು ನಗರ ಉದ್ಯೋಗ ಐಟಿಬಿಟಿಗಳಿಗಷ್ಟೇ ಪ್ರಸಿದ್ಧಿಯಾಗಿಲ್ಲ. ಇಲ್ಲಿನ ವೈವಿಧ್ಯಮಯ ಆಹಾರದಿಂದಲೂ ಹೆಸರುವಾಸಿಯಾಗಿದೆ. ಹೀಗಾಗಿ ಕಬಿತಾ ಮೊದಲಿಗೆ ಬೆಂಗಳೂರಿನಲ್ಲಿನ ಆಹಾರದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲರಿಗೂ ಇಷ್ಟವಾಗುವ ಆಹಾರ ಸಿಗುತ್ತದೆ. ಬೆಂಗಳೂರಿಗೆ ಯಾವುದೇ ದೇಶದ, ಯಾವುದೇ ಭಾಷೆಯ ಜನರು ಬಂದರೂ ಅವರಿಗೆ ಇಷ್ಟವಾಗುವ ಆಹಾರ ಇಲ್ಲಿ ಸಿಗುತ್ತದೆ, ಬೆಂಗಳೂರಿನಲ್ಲಿ ತಮ್ಮ ಇಷ್ಟದ ತಿಂಡಿಗೆ ಪರದಾಡಬೇಕಾಗಿ ಬರುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ 10 ವರ್ಷದಲ್ಲಿ ಕಬಿತಾ ಕಲಿತ ಪಾಠವೇನು?

ಕಬಿತಾ ತಾನು ಬೆಂಗಳೂರಿಗೆ ಬಂದು ಹತ್ತು ವರ್ಷದಲ್ಲಿ ಏನೇನು ವಿಷಯ ಕಲಿತಿದ್ದಾಳೆ ಎಂಬುದನ್ನು ಮುಕ್ತವಾಗಿ ಮಾತನಾಡಿದ್ದಾರೆ, ಕಬಿತಾ ಹೇಳುವುದು ಹೀಗೆ, 'ಬೆಂಗಳೂರಿನಲ್ಲಿ 10 ವರ್ಷ ಕಳೆದ ನಂತರ ನಾನು ಕಲಿತ ಮೊದಲ ವಿಷಯವೆಂದರೆ, ಇಲ್ಲಿ ಮನೆ ಊಟವನ್ನು ಮಿಸ್ ಮಾಡಿಕೊಳ್ಳುವ ಅಗತ್ಯವಿಲ್ಲ. ನಾನು ಒಡಿಶಾದವಳು. ಇಲ್ಲಿ ಹಲವು ಒಡಿಯಾ ರೆಸ್ಟೋರೆಂಟ್‌ಗಳಿವೆ. ಪಂಜಾಬಿ, ಕೇರಳ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳ ಆಹಾರವೂ ಇಲ್ಲಿ ಸಿಗುತ್ತದೆ. ನೀವು ದೇಶದ ಯಾವುದೇ ಭಾಗದವರಾಗಿದ್ದರೂ, ಇಲ್ಲಿ ನಿಮಗೆ ಇಷ್ಟವಾಗುವ ಆಹಾರ ಸಿಗುತ್ತದೆ' ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ದೂರ ಅಳೆಯುವುದು ಕಿಮೀ ಅಲ್ಲ, ಟ್ರಾಫಿಕ್!

ಕಬಿತಾ ಇನ್ನೊಂದು ಕುತೂಹಲಕಾರಿ ವಿಚಾರ ಹೇಳಿದ್ದಾರೆ. ಅದೇನೆಂದರೆ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಿಸಬೇಕಾದಾಗ ದೂರವನ್ನು ಕಿಮೀನಿಂದ ಅಳೆಯುವುದಿಲ್ಲ. ಬದಲಾಗಿ ಅಲ್ಲಿನ ಟ್ರಾಫಿಕ್‌ನಿಂದ ಅಳೆಯುತ್ತಾರೆ ಎಂದಿದ್ದಾರೆ. ಬೆಂಗಳೂರಿನ ದೊಡ್ಡ ಸಮಸ್ಯೆ ಎಂದರೆ ಟ್ರಾಫಿಕ್ ಜಾಮ್. ಇದರ ಬಗ್ಗೆಯೂ ಮಹಿಳೆ ತಮ್ಮ ಹತ್ತು ವರ್ಷದಲ್ಲಾದ ಅನುಭವ ಹಂಚಿಕೊಂಡಿದ್ದಾರೆ.

'ಇಲ್ಲಿ ಜನರು ದೂರವನ್ನು ಕಿಲೋಮೀಟರ್‌ನಲ್ಲಿ ಅಳೆಯುವುದಿಲ್ಲ, ಟ್ರಾಫಿಕ್, ಸಮಯದಲ್ಲಿ ಅಳೆಯುತ್ತಾರೆ. ನಗರದಲ್ಲಿ 5 ಕಿ.ಮೀ ದೂರ ಹೋಗಲು ಕೆಲವೊಮ್ಮೆ ಒಂದು ಗಂಟೆ ಬೇಕಾಗಬಹುದು. ಹಾಗಾಗಿ ‘ಎಷ್ಟು ದೂರ?’ ಎಂದು ಕೇಳುವುದನ್ನು ಬಿಟ್ಟು, ‘ಎಷ್ಟು ಸಮಯ ಬೇಕಾಗುತ್ತೆ’ ಎಂದು ಕೇಳಲು ಆರಂಭಿಸುತ್ತೀರಿ' ಎಂದು ಹೇಳಿದ್ದಾರೆ.

ರಾತ್ರಿ ಓಡಾಡಿದ್ದೇನೆ ಬೆಂಗಳೂರು ಸುರಕ್ಷಿತವಾಗಿದೆ..

ಬೆಂಗಳೂರಿನಲ್ಲಿ ನನಗೆ ವಾಸಿಸಲು ಸುರಕ್ಷಿತವಾಗಿ ಅನಿಸಿದೆ ಎಂಬ ವೈಯಕ್ತಿಕ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ. 'ಮಹಿಳೆಯರಿಗೆ ಸುರಕ್ಷಿತವಾಗಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ನಾನು ಲೆಕ್ಕವಿಲ್ಲದಷ್ಟು ಬಾರಿ ರಾತ್ರಿ ಇಲ್ಲಿ ಓಡಾಡಿದ್ದೇನೆ. ಆದರೆ ನನಗೆ ಎಂದಿಗೂ ಅಸುರಕ್ಷಿತ ಭಾವನೆ ಉಂಟಾಗಿಲ್ಲ' ಎಂದು ಮುಕ್ತವಾಗಿ ಹೊಗಳಿದ್ದಾರೆ.

ಬೆಂಗಳೂರಲ್ಲಿ ಯಾರನ್ನಾದರೂ ಭೇಟಿ ಮಾಡುವುದೆಂದರೆ..

ಕಬಿತಾ ಬೆಂಗಳೂರಿನ ಬಗ್ಗೆ ಮತ್ತೊಂದು ವಿಶೇಷ ಅನುಭವದ ಬಗ್ಗೆ ಮಾತನಾಡಿದ್ದಾರೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುವುದು ಎಷ್ಟು ಕಷ್ಟ ಎಂಬುದನ್ನ ಮಹಿಳೆ ಹೀಗೆ ಹೇಳುತ್ತಾರೆ, 'ನಿಮ್ಮ ಕುಟುಂಬದವರು, 'ನಿನ್ನ ಕಸಿನ್ ಕೂಡ ಬೆಂಗಳೂರಿನಲ್ಲೇ ಯಾಕೆ ಮೀಟ್ ಆಗಲ್ಲ?' ಅಂತಾ ಕೇಳಬಹುದು. ಆದರೆ ಅವರಿಗೆ ಗೊತ್ತಿಲ್ಲ. ಇಲ್ಲಿನ ದೂರವನ್ನು ವಿವರಿಸುವುದು ಕಷ್ಟ. ಬೆಂಗಳೂರಿನಲ್ಲಿ ಯಾರನ್ನಾದರೂ ಭೇಟಿ ಮಾಡುವುದು ಎಂದರೆ ಹೊಸ ನಗರಕ್ಕೆ ಪ್ರಯಾಣ ಮಾಡಿದಂತೆಯೇ ಅನಿಸುತ್ತದೆ' ಎಂದು ಕಬಿತಾ ಹೇಳಿದ್ದಾರೆ.

ಹತ್ತು ವರ್ಷದಲ್ಲಿ ಬದಲಾಗಿದ್ದೇನು?

ಬೆಂಗಳೂರಿನಲ್ಲಿ ಕೆಲವು ವರ್ಷ ಕಳೆದ ನಂತರ ಸಾಮಾಜಿಕ ಜೀವನದಲ್ಲೂ ಬದಲಾವಣೆ ಆಗುತ್ತದೆ ಎಂಬುದನ್ನು ಕೊನೆಗೆ ಕಬಿತಾ ಮಾತನಾಡಿದ್ದಾರೆ. ಮೊದಲ ಕೆಲವು ವರ್ಷಗಳಲ್ಲಿ ಕೆಫೆಗಳಿಗೆ ಹೋಗುವುದು, ರೆಸ್ಟೋಬಾರ್‌ಗಳಿಗೆ ಹೋಗುವುದು, ಎರಡು ವಾರಕ್ಕೊಮ್ಮೆ ಪಾರ್ಟಿ ಮಾಡುವುದು ಸಾಮಾನ್ಯವಾಗಿರುತ್ತೆ. ಆದರೆ ಕೆಲವು ವರ್ಷಗಳ ನಂತರ, ನಿಜವಾಗಿಯೂ ಇಷ್ಟಪಡುವ ಜನರೊಂದಿಗೆ ಮನೆಯಲ್ಲಿ ಪ್ಲಾನ್ ಮಾಡಿ ಮಾಡುವ ಪಾರ್ಟಿಗೆ ಯಾವುದೂ ಸಾಟಿಯಿಲ್ಲ ಎಂಬುದು ಅರ್ಥವಾಗುತ್ತದೆ' ಎಂದು ಅವರು ಹೇಳಿದ್ದಾರೆ. 'ಬೆಂಗಳೂರಿನಲ್ಲಿ 10 ವರ್ಷ. ನಾನು ನಿಜವಾಗಿಯೂ ಕಲಿತಿದ್ದು ಇದೇ' ಎಂಬ ಶೀರ್ಷಿಕೆಯೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

View post on Instagram
 

ಕಬಿತಾ ವಿಡಿಯೋಗೆ ನೆಟಿಜನ್ ಪ್ರತಿಕ್ರಿಯೆ ಏನು?

ಕಬಿತಾ ಅವರ ವಿಡಿಯೋಗೆ ನೆಟಿಜನ್ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಹಲವರು ತಮ್ಮ ಅನುಭವವೂ ಇದೇ ರೀತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

'ಇದು ತುಂಬಾ ನಿಜ..' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಬೆಂಗಳೂರಿನ ಟ್ರಾಫಿಕ್ ನಿಮ್ಮ ಯೋಚಿಸುವ ರೀತಿಯನ್ನೇ ಬದಲಿಸುತ್ತದೆ' ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಬೆಂಗಳೂರಿನಲ್ಲಿ ಎಲ್ಲರಿಗೂ ಏನಾದರೂ ಒಂದು ಸಿಗುತ್ತದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಟ್ರಾಫಿಕ್ ಬಗ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಬಳಕೆದಾರ, ಟ್ರಾಫಿಕ್ ಬಗ್ಗೆ ಹೇಳಿರುವುದು ನಿಜಕ್ಕೂ ನಮ್ಮ ಅನುಭವವೇ' ಎಂದು ಹೇಳಿದ್ದಾರೆ.

ಗಮನಿಸಿ: ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡ ಮಾಹಿತಿಯನ್ನು ಆಧರಿಸಿದೆ. ಈ ಹೇಳಿಕೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.