ಬೆಂಗಳೂರಿನ ಐತಿಹಾಸಿಕ ಇಂದಿರಾಗಾಂಧಿ ಸಂಗೀತ ಕಾರಂಜಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ವಹಿಸುವುದರಿಂದ ವಾಣಿಜ್ಯೀಕರಣ ಮತ್ತು ಮಕ್ಕಳ ಭದ್ರತೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ. ಸದ್ಯ ಈ ಪ್ರಸ್ತಾವನೆ ತೋಟಗಾರಿಕಾ ಇಲಾಖೆಯ ಚರ್ಚೆಯ ಹಂತದಲ್ಲಿದೆ.
ಬೆಂಗಳೂರು (ಸೆ.24): ನಗರದ ಪ್ರಸಿದ್ಧ ಲೋಕಭವನದ ಸಮೀಪವಿರುವ ಸುಮಾರು 17 ಎಕರೆ ವಿಸ್ತೀರ್ಣದ ಐತಿಹಾಸಿಕ ಇಂದಿರಾಗಾಂಧಿ ಸಂಗೀತ ಕಾರಂಜಿಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ಆಧುನೀಕರಿಸುವ ಪ್ರಸ್ತಾವನೆ ತೋಟಗಾರಿಕಾ ಇಲಾಖೆಯಲ್ಲಿ ಮುನ್ನೆಲೆಗೆ ಬಂದಿದೆ. ಆದರೆ, ಪ್ರತಿಷ್ಠಿತ ಪ್ರದೇಶದಲ್ಲಿರುವ ಸರ್ಕಾರಿ ಆಸ್ತಿಯನ್ನು ಖಾಸಗಿಯವರ ವಶಕ್ಕೆ ನೀಡುವುದು ಮತ್ತು ಇಲ್ಲಿಗೆ ಬರುವ ಮಕ್ಕಳ ಭದ್ರತೆ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರಿಂದ ತೀವ್ರ ಆತಂಕ ವ್ಯಕ್ತವಾಗಿದೆ.
ಖಾಸಗಿ ಸಂಸ್ಥೆಯಿಂದ ಪ್ರಸ್ತಾವನೆ:
1995ರಲ್ಲಿ ಉದ್ಘಾಟನೆಗೊಂಡ ಈ ಸಂಗೀತ ಕಾರಂಜಿಯಲ್ಲಿ ಪ್ರತಿದಿನ ರಾತ್ರಿ ಸಂಗೀತದೊಂದಿಗೆ ಚಿಮ್ಮುವ ನೀರಿನ ಕಾರಂಜಿ ವೀಕ್ಷಿಸಲು ಜನ ಆಗಮಿಸುತ್ತಾರೆ. ಪ್ರಸ್ತುತ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು 'ಬಿಎನ್‌ಎ' (BNA) ಎಂಬ ಖಾಸಗಿ ಸಂಸ್ಥೆಯು ತೋಟಗಾರಿಕಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದರಡಿ ಅತ್ಯಾಧುನಿಕ ಲೇಸರ್ ಶೋ, ಧ್ವನಿ ಹಾಗೂ ಬೆಳಕಿನ ಪ್ರದರ್ಶನ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಆದರೆ, ಈ ಪ್ರಮುಖ ಸ್ಥಳವನ್ನು ಖಾಸಗಿಯವರಿಗೆ ನೀಡುವುದರಿಂದ ಸಾರ್ವಜನಿಕ ಆಸ್ತಿಯ ಮೇಲಿನ ನಿಯಂತ್ರಣ ತಪ್ಪುವ ಆತಂಕ ಮೂಡಿದೆ.
ವಾಣಿಜ್ಯೀಕರಣದ ಪರೋಕ್ಷ ಜಾರಿ ಆತಂಕ:
ಸರ್ಕಾರಿ ಉದ್ಯಾನವನಗಳಲ್ಲಿ ಶೇ.5ರಷ್ಟು ಜಾಗವನ್ನು ವಾಣಿಜ್ಯೀಕರಣಗೊಳಿಸುವ ಸರ್ಕಾರದ ಹಿಂದಿನ ಪ್ರಸ್ತಾವನೆಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಪ್ರಮುಖ ಸ್ಥಳದಲ್ಲಿರುವ ಇಡೀ ಉದ್ಯಾನವನವನ್ನು ಖಾಸಗಿಗೆ ನೀಡುವುದು ವಾಣಿಜ್ಯೀಕರಣದ ಪರೋಕ್ಷ ಜಾರಿಯಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ಚರ್ಚೆಯ ಹಂತದಲ್ಲಿದೆ - ತೋಟಗಾರಿಕಾ ಇಲಾಖೆ:
ಈ ಕುರಿತು ಪ್ರತಿಕ್ರಿಯಿಸಿರುವ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಹಾಗೂ ಉಸ್ತುವಾರಿ ಕುಸುಮಾ, ಬಿಎನ್‌ಎ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಸದ್ಯ ಇಲಾಖೆಯ ನಿರ್ದೇಶಕರ ಮಟ್ಟದಲ್ಲಿ ಚರ್ಚೆಯ ಹಂತದಲ್ಲಿದೆ. ಇದು ಇನ್ನೂ ಸರ್ಕಾರದ ಮಟ್ಟಕ್ಕೆ ತಲುಪಿಲ್ಲ ಎಂದಿದ್ದಾರೆ. ಪ್ರಸ್ತುತ ಇಲಾಖೆಯು ಕಾರಂಜಿ ನಿರ್ವಹಣೆಗಾಗಿ ಬಿಎನ್‌ಎ ಸಂಸ್ಥೆಗೆ ತಿಂಗಳಿಗೆ 1 ಲಕ್ಷ ರೂ. ಪಾವತಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ರಕ್ಷಣೆ ಯಾರ ಜವಾಬ್ದಾರಿ?:
ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಉದ್ಯಾನ ಅಭಿವೃದ್ಧಿಯಾದರೆ ಇಲ್ಲಿಗೆ ಬರುವ ಮಕ್ಕಳ ರಕ್ಷಣೆಯ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಎದ್ದಿದೆ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, "ಖಾಸಗಿ ಮನರಂಜನಾ ಸ್ಥಳಗಳಲ್ಲಿ ಮಕ್ಕಳ ಭದ್ರತೆಗೆ ಸ್ಪಷ್ಟ ಜವಾಬ್ದಾರಿ ಇರುವುದಿಲ್ಲ. ಸಂಜೆ 5 ರಿಂದ 8.30ರವರೆಗಿನ ಸಮಯವು ಮಕ್ಕಳ ಕಲಿಕೆಗೆ ಮಹತ್ವದ್ದಾಗಿದ್ದು, ಅಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಈಗಿರುವ ಮಾದರಿಯೇ ಮುಂದುವರಿಯುವುದು ಉತ್ತಮ" ಎಂದು ಅಭಿಪ್ರಾಯಪಟ್ಟಿದ್ದಾರೆ.


