ಬೆಂಗಳೂರಿನಲ್ಲಿ ಮನೆ ಅಡುಗೆಯವರಿಗೆ ನೀಡುವ ಸಂಬಳ ಹಾಗೂ ಅವರ ಅಡುಗೆ ಶೈಲಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ತಿಂಗಳಿಗೆ ₹8,000 ನೀಡಿದರೂ ರುಚಿಗಿಂತ ಹೆಚ್ಚಾಗಿ ಅಡುಗೆ ಮಾಡುವ ಟೆನ್ಷನ್ ತಪ್ಪಿಸಿಕೊಳ್ಳಲು ಜನ ಹಣ ನೀಡುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ಚೆನ್ನೈಗೆ ಹೋಲಿಸಿ ಹಾಗೂ ಹೊಸ ಸ್ಟಾರ್ಟ್‌ಅಪ್ ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಐಟಿ ಹಬ್ ಬೆಂಗಳೂರಿನಲ್ಲಿ ಉದ್ಯೋಗಸ್ಥ ದಂಪತಿಗಳು ಹಾಗೂ ಕುಟುಂಬಗಳಿಗೆ ಮನೆಯ ಕೆಲಸದ ಜೊತೆಗೆ ಅಡುಗೆಗೆ ಒಬ್ಬರನ್ನು ಇಟ್ಟುಕೊಳ್ಳುವುದು ಅತ್ಯಂತ ಅನಿವಾರ್ಯ. ಆದರೆ, ಇಲ್ಲಿ ಮನೆ ಅಡುಗೆಯವರು (House Cooks) ಪಡೆಯುವ ತಿಂಗಳ ಸಂಬಳ ಹಾಗೂ ಅವರ ಕೈರುಚಿಯ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾ ‘ಎಕ್ಸ್’ನಲ್ಲಿ (ಟ್ವಿಟರ್) ಬಿಸಿಬಿಸಿ ಚರ್ಚೆ ಶುರುವಾಗಿದೆ.

ಮೇಘಾ ಎಂಬುವವರು ತಮ್ಮ ‘ಎಕ್ಸ್’ ಖಾತೆಯಲ್ಲಿ ‘ಬೆಂಗಳೂರು ಕುಕ್ ಎಕನಾಮಿಕ್ಸ್’ (Bengaluru cook economics) ಕುರಿತು ಬರೆದುಕೊಂಡಿರುವ ಪೋಸ್ಟ್ ಸದ್ಯ ಭಾರೀ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರು ತಮ್ಮ ಮನೆಗಳ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ತಿಂಗಳಿಗೆ ₹8,000 ಸಂಬಳ, ಪ್ರೆಶರ್ ಕುಕ್ಕರೇ ಅವರ ಬ್ರಹ್ಮಾಸ್ತ್ರ!

ಮೇಘಾ ಅವರ ಪೋಸ್ಟ್ ಪ್ರಕಾರ, "ಬೆಂಗಳೂರಿನಲ್ಲಿ ಕೇವಲ ಇಬ್ಬರಿರುವ ಮನೆಗೆ ದಿನಕ್ಕೆ ಎರಡು ಬಾರಿ ಬಂದು ಅಡುಗೆ ಮಾಡಲು ತಿಂಗಳಿಗೆ 7,000 ದಿಂದ 8,000 ರೂ. ನೀಡಬೇಕು. ಜೊತೆಗೆ ಭಾನುವಾರ ರಜೆ ಇರುತ್ತದೆ. ಅವರು ಮನೆಗೆ ಬರುತ್ತಾರೆ, ತರಕಾರಿ ಕತ್ತರಿಸುತ್ತಾರೆ, ಫಟಾಫಟ್ ಎಂದು ಎರಡೇ ಅಡುಗೆ ಮಾಡಿ ಮುಂದಿನ ಮನೆಗೆ ಓಡುತ್ತಾರೆ. ಅವರ ಕೈಯಲ್ಲಿ ಪ್ರೆಶರ್ ಕುಕ್ಕರ್ ಒಂದು ಬ್ರಹ್ಮಾಸ್ತ್ರವಿದ್ದಂತೆ! ಬೇಳೆ, ಆಲೂಗಡ್ಡೆ, ಸೋಯಾದಿಂದ ಹಿಡಿದು ಚಿಕನ್ ವರೆಗೂ ಎಲ್ಲವೂ ಅದೇ ಕುಕ್ಕರ್ ಸೇರುತ್ತದೆ" ಎಂದು ಹಾಸ್ಯದ ಧಾಟಿಯಲ್ಲಿ ಬರೆದಿದ್ದಾರೆ.

ಅದ್ಭುತ ರುಚಿಗಲ್ಲ, ಅಡುಗೆಯ ಟೆನ್ಷನ್ ತಪ್ಪಿಸಿಕೊಳ್ಳಲು ಕೊಡುವ ಹಣ!

"ನಿಮಗೆ ಯಾವ ರೀತಿ ಅಡುಗೆ ಬೇಕು ಎಂದು ಪದೇಪದೆ ವಿವರಿಸದಿದ್ದರೆ ಊಟದ ರುಚಿ ಸಾಧಾರಣವಾಗಿರುತ್ತದೆ. ರುಚಿ ಹೆಚ್ಚಿಸಲು ಹೆಚ್ಚು ಎಣ್ಣೆ ಮತ್ತು ಮಸಾಲೆಯೇ ಅವರ ಶಾರ್ಟ್‌ಕಟ್. ಆದರೂ ನಾವು ಇದನ್ನು ಸಹಿಸಿಕೊಳ್ಳುತ್ತೇವೆ. ಏಕೆಂದರೆ, ನಾವಿಲ್ಲಿ ತಿಂಗಳಿಗೆ ₹8,000 ನೀಡುತ್ತಿರುವುದು ಅದ್ಭುತವಾದ ರುಚಿಯ ಊಟ ಸಿಗುತ್ತದೆ ಎಂದಲ್ಲ; ಬದಲಾಗಿ ಪ್ರತಿದಿನ ಎರಡು ಬಾರಿ ಅಡುಗೆ ಮಾಡುವ ತಲೆನೋವಿನಿಂದ ಮುಕ್ತಿ ಪಡೆಯಲು!" ಎಂದು ಮೇಘಾ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

Scroll to load tweet…

ಬೇರೆ ನಗರಗಳಿಗಿಂತ ಬೆಂಗಳೂರು ಅಗ್ಗ ಎಂದ ನೆಟ್ಟಿಗರು:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಬಗೆಬಗೆಯ ಕಮೆಂಟ್‌ಗಳು ಹರಿದುಬಂದಿವೆ.

ಚೆನ್ನೈ ಹೋಲಿಕೆ: "ಬೆಂಗಳೂರಿನಲ್ಲಿ 8 ಸಾವಿರ ರೂ. ತುಂಬಾ ಕಡಿಮೆ. ಚೆನ್ನೈನಲ್ಲಿ ಕೇವಲ ಒಂದು ಬಾರಿ ಬಂದು ಅಡುಗೆ ಮಾಡಲು ತಿಂಗಳಿಗೆ 12 ರಿಂದ 15 ಸಾವಿರ ರೂ. ಪಡೆಯುತ್ತಾರೆ" ಎಂದು ಚೆನ್ನೈನ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸ್ಟಾರ್ಟ್‌ಅಪ್ ಐಡಿಯಾ: "ಸಮಯಕ್ಕೆ ಸರಿಯಾಗಿ ಮನೆ ಬಾಗಿಲಿಗೆ ತಾಜಾ, ಬಿಸಿಬಿಸಿಯಾದ ಮನೆ ಊಟ ತಲುಪಿಸುವ ಸ್ಟಾರ್ಟ್‌ಅಪ್ ಆರಂಭಿಸಲು ಬೆಂಗಳೂರಿನಲ್ಲಿ ಇದು ಸಕಾಲ" ಎಂದು ಮತ್ತೊಬ್ಬರು ಬ್ಯುಸಿನೆಸ್ ಐಡಿಯಾ ಕೊಟ್ಟಿದ್ದಾರೆ.

ನಮ್ಮ ಅಡುಗೆಯವರು ಬೆಸ್ಟ್: "ನಮ್ಮ ಮನೆಯ ಅಡುಗೆಯವರು ರೆಸ್ಟೋರೆಂಟ್ ಮಟ್ಟಕ್ಕೆ ಅದ್ಭುತವಾಗಿ ಮಾಡುತ್ತಾರೆ, ನಾವು ಕೊಡುವ ಹಣಕ್ಕೆ ಸಂಪೂರ್ಣ ನ್ಯಾಯ ಸಿಗುತ್ತಿದೆ" ಎಂದು ಕೆಲವರು ತಮ್ಮ ಅಡುಗೆಯವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಒಟ್ಟಾರೆಯಾಗಿ, ಈ ಚರ್ಚೆಯು ಮೆಟ್ರೋ ನಗರಗಳಲ್ಲಿ ಜನ ಕೇವಲ ಊಟದ ರುಚಿಗಿಂತ ಹೆಚ್ಚಾಗಿ ‘ಸಮಯದ ಉಳಿತಾಯ’ ಮತ್ತು ‘ಮಾನಸಿಕ ನೆಮ್ಮದಿಗೆ’ ಹೆಚ್ಚು ಹಣ ನೀಡಲು ಸಿದ್ಧರಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.